ಆಡಿಯೊ, ವಿಡಿಯೊ ಸಾಕ್ಷ್ಯವಾಗಿ ಪರಿಗಣಿಸಿ

ರಾಜ್ಯದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ನೇಮಕಾತಿ ಸಂದರ್ಭದಲ್ಲಿ ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳು ನೇಮಕಾತಿಯ ಆದೇಶಪತ್ರ ನೀಡಲು ಲಂಚ ಕೇಳುತ್ತಾರೆ. ಹಣ ನೀಡದಿದ್ದರೆ ಕೆಲಸದ ಸಂದರ್ಭದಲ್ಲಿ ತೊಂದರೆ ಕೊಡಬಹುದೆಂಬ ಆತಂಕದಿಂದ ಹೊಸದಾಗಿ ನೇಮಕಗೊಂಡ ಉದ್ಯೋಗಿಗಳು ಅವರು ಕೇಳಿದಷ್ಟು ಹಣ ಕೊಡುತ್ತಾರೆ. ಕೆಲವು ಬುದ್ಧಿವಂತರು ಲಂಚ ಕೇಳುವ ಮತ್ತು ಕೊಡುವ ಸಂದರ್ಭದಲ್ಲಿ ಆಡಿಯೊ ಅಥವಾ ವಿಡಿಯೊ ಚಿತ್ರೀಕರಿಸಿರುತ್ತಾರೆ. ಕೆಲವು ಅಭ್ಯರ್ಥಿಗಳು ಲೋಕಾಯುಕ್ತ ಕಚೇರಿಗೆ ದೂರು ನೀಡಲು ಹಿಂಜರಿಯುತ್ತಾರೆ. ಲೋಕಾಯುಕ್ತ ಸಂಸ್ಥೆಯು ಇಂತಹ ಆಡಿಯೊ, ವಿಡಿಯೊಗಳನ್ನೂ ಸಾಕ್ಷ್ಯವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕಿದೆ.

-ಪ್ರವೀಣ ಈ., ಚನ್ನಗಿರಿ

ಕಡತ ನಿರ್ವಹಣೆ: ಗ್ರಾ.ಪಂ.ಗಳ ನಿರ್ಲಕ್ಷ್ಯ

ಆರ್ಥಿಕ ವರ್ಷ ಮುಕ್ತಾಯವಾದ ನಂತರ ಗ್ರಾಮ ಪಂಚಾಯಿತಿಗಳ ಎಲ್ಲಾ ಕಡತಗಳು ಮತ್ತು ವಹಿಗಳು, ಸಭಾ ನಡವಳಿಗಳು, ವಾರ್ಷಿಕ ಮತ್ತು ಮಾಸಿಕ ಲೆಕ್ಕಪತ್ರ, ಕಳೆದ ವರ್ಷದ ಅನುಪಾಲನಾ ವರದಿ ಪರಿಶೀಲಿಸುವುದು ಲೆಕ್ಕ ಪರಿಶೋಧಕರ ಜವಾಬ್ದಾರಿ. ಸರ್ಕಾರದ ಅನುದಾನ ಬಳಕೆ ಮತ್ತು ಲೆಕ್ಕ ಪರಿಶೋಧನೆಯ ನಿರ್ವಹಣೆಯು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ. ಲೆಕ್ಕ ಪರಿಶೋಧಕರು ಕೋರಿದ ವಿವರಣೆ, ದಾಖಲಾತಿಗಳನ್ನು ಉದ್ದೇಶಪೂರ್ವಕವಾಗಿ ಒದಗಿಸದೆ ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಬಹುದಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಲೆಕ್ಕಪತ್ರಗಳ ಸರಿಯಾದ ನಿರ್ವಹಣೆ ಇಲ್ಲ. ಈ ಬಗ್ಗೆ ಸರ್ಕಾರವು ಪರಿಶೀಲನೆ ನಡೆಸಬೇಕಿದೆ.

-ವಿಶ್ವನಾಥ ಟಿ. ಸೋಮಗುದ್ದು, ಹಂಪಿ

ಜಲಮೂಲಗಳ ರಕ್ಷಣೆಗೆ ಜನಾಂದೋಲನ

ಜಲ ಜೀವನ್ ಮಿಷನ್ನಡಿ ಕರ್ನಾಟಕ ರಾಜ್ಯ ಸರ್ಕಾರವು ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷಿಸಿದೆ. ಈ ನೀರಿನಲ್ಲಿ ಮಾಲಿನ್ಯಕಾರಕಗಳ ಹೆಚ್ಚಳವಾಗಿದೆ ಎಂದು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸಂಸತ್ನಲ್ಲಿ ತಿಳಿಸಿದ್ದಾರೆ. ಕುಡಿಯುವ ನೀರು ಶುದ್ಧವಾಗಿರಬೇಕೆಂದರೆ ನೀರಿನ ಮೂಲಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಸರ್ಕಾರವೇ ನೀರಿನ ಮೂಲಗಳಿಗೆ ಕೊಳಚೆನೀರು ಹರಿಸು
ತ್ತಿದೆ. ನದಿ, ಕೆರೆಗಳನ್ನು ಕಸ ತುಂಬುವ ಜಾಗವನ್ನಾಗಿ ಮಾಡಿಕೊಳ್ಳಲಾಗಿದೆ. ನದಿಗಳು ಪವಿತ್ರವೆಂದು ಹೇಳುತ್ತಾ ನದಿಪಾತ್ರಕ್ಕೆ ಕಸ ಸುರಿಯುವ ಆತ್ಮವಂಚಕ ಸಮಾಜ ನಮ್ಮದು. ನೀರಿನ ಮೂಲಗಳ ಮಲಿನತೆ ತಡೆಯಲು ಜನಸಮುದಾಯಗಳ ಮನಃಸ್ಥಿತಿ ಬದಲಿಸಬೇಕಿದೆ. ಇದಕ್ಕಾಗಿ ಜನಾಂದೋಲನ ರೂಪಿಸಬೇಕಿದೆ.

-ಗುರುಮೂರ್ತಿ ಜೋಗಿಬೈಲು, ಶೃಂಗೇರಿ

ಕೆಪಿಎಸ್ಸಿ ಆಟ: ಅಭ್ಯರ್ಥಿಗಳಿಗೆ ಸಂಕಟ

ತಪ್ಪು ತಿದ್ದಿಕೊಳ್ಳದೆ ಅಭ್ಯರ್ಥಿಗಳ ಕನಸುಗಳೊಂದಿಗೆ ಚೆಲ್ಲಾಟವಾಡುತ್ತಿರುವ ಕೆಪಿಎಸ್ಸಿ ಕಾರ್ಯವೈಖರಿ ಕುರಿತ ಸಂಪಾದಕೀಯ (ಮಾರ್ಚ್ 14) ಸಕಾಲಿಕವಾಗಿದೆ. ಕೆಪಿಎಸ್ಸಿ ಸುಧಾರಣೆಗೊಳಿಸುವ ದಿಸೆಯಲ್ಲಿ ಯುಪಿಎಸ್ಸಿ ಮಾಜಿ ಅಧ್ಯಕ್ಷ ಪಿ.ಸಿ. ಹೋಟಾ ಸಮಿತಿಯು 2013ರ ಆಗಸ್ಟ್ನಲ್ಲೇ ಹಲವು ಶಿಫಾರಸುಗಳನ್ನು ಮಾಡಿತ್ತು. ಅಂದಿನಿಂದ ಇಂದಿನವರೆಗೆ ಆಡಳಿತ ನಡೆಸಿರುವ ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿಯೇ, ಕೆಪಿಎಸ್ಸಿ ಸುಧಾರಣೆ ಕಂಡಿಲ್ಲ. ಕಾಣದ ಕೈಗಳ ಒತ್ತಡಕ್ಕೆ ಮಣಿದು ಆಯೋಗದ ನಾಲ್ಕು ಕಾರ್ಯದರ್ಶಿಗಳನ್ನು ವರ್ಗಾವಣೆ ಮಾಡಲಾಗಿದೆ. ಪರೀಕ್ಷೆಗಳಲ್ಲಿನ ಲೋಪಕ್ಕೆ ನಿಯಂತ್ರಕರೇ ಕಾರಣರೆಂದು ಶಾಸಕರೇ ವಿಧಾನಸಭೆಯಲ್ಲಿಯೇ ಆಪಾದಿಸಿದ್ದಾರೆ. ಆದರೂ, ಅವರ ವಿರುದ್ಧ ಕ್ರಮ ಏಕಿಲ್ಲ?

-ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ಊಟ–ತಿಂಡಿ ದರ ದುಬಾರಿ: ನಿಗಾ ಇರಲಿ

ಮಂಡ್ಯದ ಹೋಟೆಲ್ವೊಂದಕ್ಕೆ ತಿಂಡಿ ತಿನ್ನಲು ಹೋಗಿದ್ದೆವು. ₹40ಕ್ಕೆ ಸಿಗುತ್ತಿದ್ದ ಸೆಟ್ದೋಸೆಗೆ ₹50 ಹಾಗೂ ₹60 ಇದ್ದ ಬೆಣ್ಣೆದೋಸೆ ದರ ₹70 ಆಗಿತ್ತು. ಒಂದು ವಾರ ಕಾಫಿ, ಟೀ ನಿಲ್ಲಿಸಿದ್ದೇವೆಂಬ ಉತ್ತರ ಬಂತು. ತಿಂಡಿಯ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದಾಗ ವಾಣಿಜ್ಯ ಸಿಲಿಂಡರ್ ಅಭಾವದ ಸಮಸ್ಯೆ ಮುಂದಿಟ್ಟರು. ಎಲ್ಪಿಜಿ ಕೊರತೆಯಿಂದಾಗಿ ಹೋಟೆಲ್ನವರು ಆಹಾರದ ಬೆಲೆ ಏರಿಸಿದ್ದಾರೆ. ಸಿಲಿಂಡರ್ ಸಮಸ್ಯೆ ಪರಿಹಾರವಾದ ಬಳಿಕ ಏರಿಸಿರುವ ಬೆಲೆ ಇಳಿಸುತ್ತಾರೆಂಬ ಗ್ಯಾರಂಟಿ ಇದೆಯೆ? ಸಿಲಿಂಡರ್ ಸಮಸ್ಯೆ ಮುಂದಿಟ್ಟುಕೊಂಡು ಕೆಲವು ಹೋಟೆಲ್ ಮಾಲೀಕರು ದುಬಾರಿ ದರ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ನಿಗಾವಹಿಸಬೇಕಾಗಿದೆ.

-ಸಿ. ಸಿದ್ದರಾಜು ಆಲಕೆರೆ, ಮಂಡ್ಯ

ಅತಿಥಿ ಶಿಕ್ಷಕರಿಗೆ ಗುರುತಿನಚೀಟಿ ನೀಡಿ

ಖಾಸಗಿ ಕಂಪನಿಗಳಲ್ಲಿ ದುಡಿಯುವ ನೌಕರರಿಗೆ ಗುರುತಿನಚೀಟಿ ನೀಡಲಾಗುತ್ತದೆ. ಸರ್ಕಾರದ ಕೆಲವು ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ನೌಕರರಿಗೂ ಗುರುತಿನಚೀಟಿ ನೀಡಲಾಗಿದೆ. ಪ್ರಸ್ತುತ ಸರ್ಕಾರಿ ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ಹಲವು ವರ್ಷಗಳಿಂದ ಸಾವಿರಾರು ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದುಡಿಯುತ್ತಿದ್ದಾರೆ. ಅವರಿಗೆ ಇದುವರೆಗೂ ಗುರುತಿನಚೀಟಿ ನೀಡದಿರುವುದು ಅಮಾನವೀಯ. ಸಕಾಲಕ್ಕೆ ಸಂಬಳ ಸಿಗದೆ ಅವರು ಅನುಭವಿಸುವ ಸಂಕಷ್ಟಗಳು ಒಂದೆರಡಲ್ಲ. ಇನ್ನಾದರೂ ಈ ಬೋಧಕರಿಗೆ ಗುರುತಿನಚೀಟಿ ನೀಡಿ.

-ಆರ್.ಪಿ. ಮಂಜುನಾಥ್, ಬಳ್ಳಾರಿ

ಗುಲಾಮತನ

ಶಿರ ಶ್ರೇಷ್ಠ, ಪಾದ ಕನಿಷ್ಠ

ಶತಶತಮಾನಗಳ ಗುಲಾಮತನ

ಇನ್ನೂ ಮಿದುಳನ್ನು ಆಳುತ್ತಿದೆ

ಪಾದವ ಅಪ್ಪಿದ

ಚಪ್ಪಲಿ ಅನಿಷ್ಟ ಎಂದು

ಆಗಾಗ ಬೆದರಿಸುತ್ತಿದೆ!

-ನೀ.ಗೂ. ರಮೇಶ್, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.