ನೀಟ್: ಕೇಂದ್ರದ ಲೊಳಲೊಟ್ಟೆ ಬಯಲು

ನೀಟ್ ರದ್ದಾಗಿರುವುದು ವಿದ್ಯಾರ್ಥಿಗಳಿಗೆ ಬಗೆದ ದ್ರೋಹ. ಎರಡು ವರ್ಷಗಳ ನಿರಂತರ ಅಧ್ಯಯನ ಮಾಡಿದ್ದ ವಿದ್ಯಾರ್ಥಿಗಳ ಕನಸುಗಳಿಗೆ ಕೇಂದ್ರ ಸರ್ಕಾರ ಒಂದೇ ಏಟಿಗೆ ಕೊಳ್ಳಿ ಇಟ್ಟಿದೆ. ಚುನಾವಣೆ ನಡೆಸುವುದು, ಸಭೆ, ಸಮಾರಂಭ ನಡೆಸಿ ಸಾಧನೆಗಳ ಬಗ್ಗೆ ಡಂಗುರ ಸಾರುವುದಷ್ಟೇ ಆಳುವ ಸರ್ಕಾರದ ಬದ್ಧತೆಯಲ್ಲ; ಪಾರದರ್ಶಕವಾಗಿ ಪರೀಕ್ಷೆ ನಡೆಸುವುದೂ ಬದ್ಧತೆಯಾಗಿದೆ. ಮರುಪರೀಕ್ಷೆಗೆ ಆದೇಶ ಮಾಡುವುದು ಸುಲಭ. ಆದರೆ, ವಿದ್ಯಾರ್ಥಿಗಳು ಮತ್ತೆ ಪರೀಕ್ಷೆಗೆ ಮಾನಸಿಕ
ವಾಗಿ ಸಿದ್ಧರಾಗುವುದು ಅಷ್ಟು ಸುಲಭವಲ್ಲ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯು ಇದೇ ಮೊದಲೂ ಅಲ್ಲ. ಮುಂಜಾಗ್ರತಾಕ್ರಮ ವಹಿಸದಿರುವುದು ಸರ್ಕಾರದ ಲೋಪ; ವಿದ್ಯಾರ್ಥಿಗಳ ಬದುಕಿನೊಂದಿಗೆ ಚೆಲ್ಲಾಟವಾಗುವುದು ಶೋಭೆ ತರುವುದಿಲ್ಲ.

⇒ಶಿವರಾಮ ಮಿಡಿಗೇಶಿ, ಬೆಂಗಳೂರು

‘ಅತಿಥಿ’ಗಳಿಗೆ ಘನತೆಯ ಬದುಕು ಬೇಡವೆ?

ಖಾಸಗಿ ಶಾಲೆ–ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ಸಾವಿರಾರು ಅತಿಥಿ ಶಿಕ್ಷಕರು–ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸರ್ಕಾರ ನಿಗದಿಪಡಿಸಿರುವ ಗೌರವಧನ ಸಿಗುತ್ತಿದೆ. ಆದರೆ ಭವಿಷ್ಯನಿಧಿ, ಇಎಸ್ಐ ಸೌಲಭ್ಯ ದೊರೆಯುತ್ತಿಲ್ಲ. ಸಣ್ಣ ಕಂಪನಿಯ ನೌಕರನಿಗೆ ಸಿಗುವ ಸಾಮಾಜಿಕ ಭದ್ರತೆ ಇವರಿಗೇಕಿಲ್ಲ? ಇಪಿಎಫ್ ಮತ್ತು ಇಎಸ್ಐ ಕಾನೂನುಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಖಂಡನೀಯ. ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೂ ಸಾಮಾಜಿಕ ಭದ್ರತಾ ಸೌಲಭ್ಯ ಕಲ್ಪಿಸಬೇಕಿದೆ. ಅವರಿಗೆ ಘನತೆಯಿಂದ ಬದುಕಲು ಅವಕಾಶ ನೀಡಬೇಕಿದೆ.

⇒ಎಸ್. ನಾಗರಾಜ ನಾಗೂರ, ಬಾಗಲಕೋಟೆ
ಪೊಲೀಸರ ಭ್ರಷ್ಟಾಚಾರ: ಬೇಕಿದೆ ಸರ್ಜರಿ

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಅಮಾನತು ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಅವಲೋಕನಕ್ಕೆ ಇದು ಸಕಾಲ. ಗುರುತರ ಆರೋಪಗಳಲ್ಲಿ ಅಮಾನತು ಆದವರ ಸಂಖ್ಯೆಯಲ್ಲಿನ ಹೆಚ್ಚಳವು ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ತಾತ್ಸಾರದ ಮನೋಭಾವ ಮೂಡಿಸುತ್ತದೆ. ಪರೋಕ್ಷವಾಗಿ ಇದು ಸರ್ಕಾರಕ್ಕೂ ಕೆಟ್ಟ ಹೆಸರು ತರುತ್ತದೆ. ಪೊಲೀಸರ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಬೇರುಬಿಟ್ಟಿದೆ. ವರ್ಗಾವಣೆಗೆ ಹಣ ನೀಡುವ ಅಧಿಕಾರಿಗಳು ತಾವು ಪಾವತಿಸಿದ ಹಣದ ದುಪ್ಪಟ್ಟು ದುಡಿಯುವುದನ್ನೇ ಕಾಯಕ ಮಾಡಿಕೊಳ್ಳುತ್ತಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಉನ್ನತ ಅಧಿಕಾರಿಗಳ ಜವಾಬ್ದಾರಿ. ಉದಾಸೀನ ತಳೆದರೆ ಅವರು ಕೂಡ ಸಿಬ್ಬಂದಿಯ ಕುಕೃತ್ಯಗಳಲ್ಲಿ ಪಾಲುದಾರರು ಎಂಬ ಅನುಮಾನ ಮೂಡದಿರದು. ಸರ್ಕಾರವು ಎಚ್ಚತ್ತುಕೊಂಡು ಪೊಲೀಸ್ ಇಲಾಖೆಗೆ ಸರಿಯಾದ ಸರ್ಜರಿ ಮಾಡಬೇಕಿದೆ. ಇಲ್ಲದಿದ್ದರೆ ರಾಜ್ಯದ ಸ್ಥಿತಿ ಮತ್ತಷ್ಟು ಹದಗೆಡಲಿದೆ.

⇒ತಿಮ್ಮೇಶ ಮುಸ್ಟೂರು, ಜಗಳೂರು

‘ಮಿತವ್ಯಯ’ ಎನ್ನುವ ಭಾರತೀಯ ಮೌಲ್ಯ

ಭಾರತದ ಅತಿಹೆಚ್ಚು ವಿದೇಶಿ ವಿನಿಮಯವು ಇಂಧನಕ್ಕಾಗಿ ಖರ್ಚಾಗುತ್ತದೆ. ಜೊತೆಗೆ ಬಂಗಾರ, ವಿದೇಶಿ ಪ್ರವಾಸದಂತಹ ಐಷಾರಾಮಿ ಸಂಗತಿಗಳು ವಿದೇಶಿ ವಿನಿಮಯದ ಖೋತಾಕ್ಕೆ ಪ್ರಮುಖ ಕಾರಣವಾಗಿವೆ. ಯಾವಾಗ ಆಮದು ಹೆಚ್ಚಾಗುತ್ತಾ ನಿರ್ಯಾತ ಕಡಿಮೆಯಾಗುತ್ತ ಸಾಗುತ್ತದೆಯೋ ಆಗ ರೂಪಾಯಿ ಮೌಲ್ಯ ಕಡಿಮೆಯಾಗುತ್ತದೆ. ಪ್ರಧಾನಿ ಮೋದಿಯವರು ಹೇಳಿದ ಮಿತವ್ಯಯ ಹೊಸದೇನೂ ಅಲ್ಲ. ನಲವತ್ತು ವರ್ಷದಿಂದಲೂ ಪರಿಸರವಾದಿಗಳು, ಆರ್ಥಿಕ ತಜ್ಞರು ಇದನ್ನೇ ಹೇಳುತ್ತಿದ್ದಾರೆ. ಅಲ್ಲದೆ, ಮಿತವ್ಯಯ ಭಾರತೀಯರ ಮೌಲ್ಯವೇ ಆಗಿದೆ. ಈಗ ಶಂಖದಿಂದಲೇ ಉಪದೇಶ ಬಂದಿದೆಯಷ್ಟೆ. ಸರ್ಕಾರ ಶಂಖ ಊದಿದರೆ ಸಾಲದು. ನೋಂದಣಿಯಾಗುವ ವಾಹನಗಳ ಸಂಖ್ಯೆ ನಿಯಂತ್ರಿಸಬೇಕು. ಪ್ರತಿಯೊಬ್ಬರು ಹೊಂದುವ ಬಂಗಾರದ ಮೇಲೆ ನಿಯಂತ್ರಣ ಬೇಕು. ಇದಕ್ಕಾಗಿ ಕಾನೂನಿನ ಮೂಗುದಾರ ಹಾಕಬೇಕು.

⇒ಶಶಿಧರ ಪಾಟೀಲ, ಬಾಗಲಕೋಟೆ

ಎಕ್ಸ್ಪ್ರೆಸ್ ರೈಲು ದಿನವೂ ಸಂಚರಿಸಲಿ

ಬೆಂಗಳೂರು(ದಂಡು)–ಕಲಬುರಗಿ ವಾರದ ಎಕ್ಸ್ಪ್ರೆಸ್ ವಿಶೇಷ ರೈಲು ಕಾಯಂ ರೈಲಾಗಿ ಓಡಾಡಲಿದೆ. ಕಲಬುರಗಿ–ಬೆಂಗಳೂರು ನಡುವಿನ ಪ್ರಯಾಣಿಕರ ಸಾಂದ್ರತೆಗನುಗುಣವಾಗಿ ಬೇಡಿಕೆ ಪೂರೈಸುವಲ್ಲಿ ಇದೊಂದು ಸ್ವಾಗತಾರ್ಹ ಕ್ರಮ. ಆದರೆ, ಬೆಂಗಳೂರಿನಿಂದ ರಾತ್ರಿ 10ಕ್ಕೆ ಹೊರಟು ಭಾನುವಾರ ಬೆಳಗ್ಗೆ 10.20ಕ್ಕೆ ತಲಪುವ ಈ ರೈಲು, ಪುನಃ ಬೆಂಗಳೂರಿನೆಡೆಗೆ ಪಯಣ ಬೆಳೆಸುವುದು ಬೆಳಗ್ಗೆ 11.20ಕ್ಕೆ. ಇದು ಇಲಾಖೆಯ ಎಡವಟ್ಟಿನ ನಿರ್ಧಾರ ಎಂದೇ ಹೇಳಬೇಕಾಗುತ್ತದೆ. ಹಗಲಿನ ಪ್ರಯಾಣದ ಕಾರಣ ರೈಲು ಶೇ 25ರಷ್ಟು ಭರ್ತಿಯಾಗುವುದಿಲ್ಲ. ಇದೇ, ರೈಲನ್ನು ಸಂಜೆ 7ಕ್ಕೆ ಕಲಬುರಗಿ ಬಿಡುವಂತೆ ಮಾಡಬೇಕು. ಜೊತೆಗೆ, ನಿತ್ಯವೂ ಓಡಾಡುವ ಹಾಗೆ ರೈಲ್ವೆ ಮಂಡಳಿ ಅನುಮೋದಿಸಬೇಕು.

⇒ವೆಂಕಟೇಶ್ ಮುದಗಲ್, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.