ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಹರಿಯುವ ನೀರಿಗೆ ತೊರೆ, ಕೆರೆಗಳಿರಲಿ

Last Updated 30 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಮಳೆ ಅಬ್ಬರದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಈ ರೀತಿಯ ಅತಿವೃಷ್ಟಿ ಇದೇನು ಹೊಸತಲ್ಲ, ಮಳೆ ದಾಖಲೆಗಳನ್ನು ತಿರುವಿಹಾಕಿದರೆ, ಹಲವಾರು ಬಾರಿ ಇಂಥ ಅವ್ಯವಸ್ಥೆ ಘಟಿಸಿರುವುದು ತಿಳಿಯುತ್ತದೆ. ಹೀಗೆ ಮಳೆಯಿಂದ ಹೆಚ್ಚು ಹಾನಿ ಉಂಟಾಗಲು ಮಾನವನ ಹಸ್ತಕ್ಷೇಪವೇ ಮುಖ್ಯ ಕಾರಣವಾಗಿದೆ. ನೀರು ಸರಾಗವಾಗಿ ಹರಿಯುವ ರಾಜಕಾಲುವೆ, ತೊರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ನೀರ ಹರಿವಿನ ಭಾಗಗಳಲ್ಲಿ ಅವೈಜ್ಞಾನಿಕವಾಗಿ ಅಡ್ಡಲಾಗಿ ಭಾರಿ ಪ್ರಮಾಣದ ರಸ್ತೆಗಳನ್ನು ನಿರ್ಮಾಣ ಮಾಡಿರುವುದರಿಂದ ನೀರು ರಸ್ತೆಗಳ ಮೇಲೆ ನಿಂತಿದೆ. ಕೆರೆಗಳನ್ನು ಒತ್ತುವರಿ ಮಾಡಿರುವುದರಿಂದ ಮತ್ತು ಕೆರೆ ಕೋಡಿಗಳು ದುರಸ್ತಿಯಾಗದಿರುವುದರಿಂದ ಹಾನಿಯುಂಟಾಗಿದೆ.

ಒಂದು ವರ್ಷಕ್ಕೆ ಮೊದಲು ಕೋಲಾರ ಜಿಲ್ಲೆಯ ಕೆರೆಗಳೆಲ್ಲ ನೀರಿಲ್ಲದೆ ಭಣಗುಡುತ್ತಿದ್ದಾಗ, ‘ನೀರಿಲ್ಲದ ನಾಡಿನಲ್ಲೇಕೆ ಕೆರೆಗಳು’ ಎಂಬ ಉಪೇಕ್ಷೆಯ ಮಾತುಗಳನ್ನಾಡುತ್ತಿದ್ದ ಸಂದರ್ಭದಲ್ಲಿ, ಕೋಲಾರಮ್ಮನ ಕೆರೆಯನ್ನು ಉಳಿಸುವ ದಿಸೆಯಲ್ಲಿ ಮಾನವ ಸರಪಳಿಯನ್ನು ನಿರ್ಮಾಣ ಮಾಡಿ ಜಾಗೃತಿ ಮೂಡಿಸಲಾಯಿತು. ಈ ವರ್ಷ ಕೋಲಾರಮ್ಮನ ಕೆರೆ ತುಂಬಿ ಕೃಷಿಗೆ ನೀರುಣಿಸುತ್ತಿದೆ. ನೀರು ಜೀವಜಲವೇ ವಿನಾ ಮೃತ್ಯುವಲ್ಲ ಎಂಬುದನ್ನು ಮನಗಾಣಲಿ. ಈಗಲಾದರೂ ಜನರು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಲಿ. ನೀರ ಹರಿವಿನ ರಾಜಕಾಲುವೆ, ತೊರೆಗಳ ಒತ್ತುವರಿ ತೆರವಾಗಲಿ. ನಕಾಶೆಯಲ್ಲಿ ಇರುವಂತೆ, ಒತ್ತುವರಿಯಾದ ಕೆರೆಯ ಸ್ಥಳವು ನೀರಿಗಿರಲಿ, ಕೋಡಿಗಳು ದುರಸ್ತಿಯಾಗಲಿ. ನೀರನ್ನು ಕುರಿತ ನಮ್ಮ ಹಿಂದಿನವರ ತಿಳಿವಳಿಕೆ ನಮ್ಮದಾಗಲಿ.

-ಡಾ. ರುದ್ರೇಶ್ ಅದರಂಗಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT