ಭಾನುವಾರ, ಆಗಸ್ಟ್ 18, 2019
25 °C

‘ಸುಪ್ರೀಂ’ ತೀರ್ಪು ಮಹತ್ವದ್ದು

Published:
Updated:

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ವಾದಿ– ಪ್ರತಿವಾದಿಯಲ್ಲಿ ಒಬ್ಬರು ತಮ್ಮ ಸಂಬಂಧಿ ಅಥವಾ ತಮ್ಮೊಡನೆ ಆಪ್ತವಾಗಿ ಇದ್ದವರು ಎಂಬ ಅಂಶ ಗಮನಕ್ಕೆ ಬಂದರೆ, ತೀರ್ಪು ಪಕ್ಷಾತೀತವಾಗಿ ಇರಲಾರದು ಎಂಬ ನ್ಯಾಯ ಸೂಕ್ಷ್ಮತೆಯಿಂದ ನ್ಯಾಯಮೂರ್ತಿಗಳು ಆ ವಿಚಾರಣೆಯಿಂದ ದೂರ ಸರಿಯುತ್ತಾರೆ.

ಈಗ ನಮ್ಮ ವಿಧಾನಸಭಾಧ್ಯಕ್ಷರು ಮೂಲತಃ ಕಾಂಗ್ರೆಸ್ ಮುಖಂಡ. ಪಕ್ಷದ ನೆರವಿನಿಂದಲೇ ಸಭಾಧ್ಯಕ್ಷ ಸ್ಥಾನ ಪಡೆದವರು. ಯಾವುದೇ ಕ್ಷಣದಲ್ಲಿ ಮುಖ್ಯಮಂತ್ರಿ ಇಷ್ಟಪಟ್ಟರೆ, ಸಭಾಧ್ಯಕ್ಷ ಸ್ಥಾನ ತ್ಯಜಿಸಿ ಸಚಿವರಾಗುವ ಸಾಧ್ಯತೆ ಇರುವವರು. ಇವರು ಸಭಾಧ್ಯಕ್ಷರಂತಹ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ತಕ್ಷಣ ನಿಷ್ಪಕ್ಷಪಾತಿಯಾಗಿ ವರ್ತಿಸುವಂತೆ ಮನಃಪರಿವರ್ತನೆ ಸಿದ್ಧಿಸುವುದು ಸಾಧ್ಯವೇ? ಈಗಿನ ಕ್ಲಿಷ್ಟ ಸಂದರ್ಭದಲ್ಲಿ, ರಾಜೀನಾಮೆ ಅಂಗೀಕರಿಸುವುದರಿಂದ ಸರ್ಕಾರ ಮಾತ್ರವಲ್ಲ, ತಮ್ಮ ಸ್ಥಾನಕ್ಕೂ ಚ್ಯುತಿ ಬರುವುದರಿಂದ ಸಭಾಧ್ಯಕ್ಷರು ಸ್ಥಿತಪ್ರಜ್ಞರಂತೆ ಪಕ್ಷಾತೀತವಾಗಿರಲು ಸಾಧ್ಯವೇ? ಇಂತಹ ಪ್ರಕರಣದಲ್ಲಿ ಅವರು ತೀರ್ಪುದಾರರಾಗುವುದು ಸಮಂಜಸವೇ?

ಹೀಗಾಗಿ, ಸಭಾಧ್ಯಕ್ಷರ ಸಾಂವಿಧಾನಿಕ ಹಕ್ಕನ್ನು ಸ್ಪಷ್ಟಪಡಿಸುವ ಸುಪ್ರೀಂ ಕೋರ್ಟ್‌ ತೀರ್ಪು ಮಹತ್ವದಾಗಿದ್ದು, ವಾದಿ– ಪ್ರತಿವಾದಿಗಳು ಮಾತ್ರವಲ್ಲ ಸಾರ್ವಜನಿಕರು ಸಹ ತುದಿಗಾಲ ಮೇಲೆ ನಿಂತು ಕಾತರದಿಂದ ನಿರೀಕ್ಷಿಸುವಂತೆ ಮಾಡಿದೆ.

- ಸತ್ಯಬೋಧ, ಬೆಂಗಳೂರು

Post Comments (+)