ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಗಿಹೋದ ಚರ್ಚೆ: ಪೂರ್ವನಿಯೋಜಿತ?

Last Updated 19 ಜುಲೈ 2019, 20:00 IST
ಅಕ್ಷರ ಗಾತ್ರ

ವಿಶ್ವಾಸಮತ ಯಾಚನೆಯ ಪ್ರಸ್ತಾವವನ್ನು ಮುಖ್ಯಮಂತ್ರಿ ಶುಕ್ರವಾರ ವಿಧಾನ ಸಭೆಯಲ್ಲಿ ಮಂಡಿಸಿ ತಮ್ಮ ಮಾತನ್ನು ಪ್ರಾರಂಭಿಸಿದಾಗ, ಇಲ್ಲಿ ಈ ದಿನ ಗಂಭೀರ ಹಾಗೂ ಮೇಲ್ಮಟ್ಟದ ಚರ್ಚೆ ನಡೆಯುತ್ತದೆಂದು, ಕಲಾಪವನ್ನು ಟಿ.ವಿಯಲ್ಲಿ ವೀಕ್ಷಿಸುತ್ತಿದ್ದ ನಾವು ನಿರೀಕ್ಷಿಸಿದ್ದೆವು. ಮೈತ್ರಿ ಸರ್ಕಾರಕ್ಕೆ ಸಂಖ್ಯಾಬಲದ ಕೊರತೆ ಕಾಡುತ್ತಿದ್ದರೂ ಮುಖ್ಯಮಂತ್ರಿ ಅವರ ವಿಶ್ವಾಸಮತ ಯಾಚನೆ ಧೀರ ನಡೆ ಎಂದು ಜನ ಭಾವಿಸಿದ್ದರು! ಆದರೆ, ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯನವರು ಸುಪ್ರೀಂ ಕೋರ್ಟಿನ ಮಧ್ಯಂತರ ಆದೇಶದಿಂದ ವಿಪ್ ನೀಡುವ ತಮ್ಮ ಸಂವಿಧಾನದತ್ತ ಅಧಿಕಾರಕ್ಕೆ ಕುತ್ತು ಬಂದಿದೆ ಎಂದು ವಾದಿಸಿ, ಕ್ರಿಯಾಲೋಪವನ್ನು ಎತ್ತಿದ್ದೇ ನಂತರದ ಗಲಾಟೆ-ಗದ್ದಲಕ್ಕೆ, ಏರುದನಿಯ ವಾಗ್ವಾದಗಳಿಗೆ ಕಾರಣವಾಯಿತು. ವಿಶ್ವಾಸಮತ ಯಾಚನೆಯ ಪ್ರಸ್ತಾವದ ಮೇಲೆ ನಡೆಯಬೇಕಿದ್ದ ಚರ್ಚೆ, ಬಹುಶಃ ಮೊದಲೇ ಯೋಜಿಸಿದ್ದಂತೆ ಎಲ್ಲೋ ಅಡಗಿಹೋಯಿತು!

ಕ್ರಿಯಾಲೋಪದ ವಿಷಯದಲ್ಲಿ ಸ್ಪೀಕರ್ ತಮ್ಮ ನಿರ್ಧಾರ ತಿಳಿಸದೆ, ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ತಿಳಿಯುವುದಾಗಿ ಹೇಳಿದರು. ಒಟ್ಟಿನಲ್ಲಿ, ಪ್ರಸ್ತಾಪಿಸಿದ ವಿಷಯದ ಬಗ್ಗೆ ನಡೆಯಬೇಕಿದ್ದ ಮತ್ತು ಜನ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಗಂಭೀರವಾದ ಚರ್ಚೆ ನಡೆಯದೆ, ಏನೇನೋ ವಿಷಯಗಳು ಹರಿದಾಡಿ, ಕೂಗಾಟ, ಪ್ರದರ್ಶನಗಳ ಕೈ ಮೇಲಾಯಿತು. ವಿರೋಧ ಪಕ್ಷವಾದ ಬಿಜೆಪಿಯು ವಿಶ್ವಾಸಮತ ಚರ್ಚೆಗೆ ಪಟ್ಟು ಹಿಡಿದರೆ, ಆಡಳಿತಾರೂಢ ಮೈತ್ರಿ ಸರ್ಕಾರ ಹೇಗಾದರೂ ಬಚಾವಾಗಲೇಬೇಕೆಂದು ಶಪಥ ತೊಟ್ಟಂತಿತ್ತು. ಈ ಜಗ್ಗಾಟದ ನಡುವೆ, ಅಪಹಾಸ್ಯಕ್ಕೆ ತುತ್ತಾಗಿರುವ ಪ್ರಜಾತಂತ್ರದ ಬಗ್ಗೆ ಯಾರೂ ಯೋಚಿಸುವ ಗೋಜಿಗೇ ಹೋಗಲಿಲ್ಲ.

- ಸಾಮಗ ದತ್ತಾತ್ರಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT