ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸಮಿತಿ ರಚಿಸಿ ಸ್ವಾಯತ್ತತೆ ಕೊಡಿ

Last Updated 8 ಜೂನ್ 2022, 19:31 IST
ಅಕ್ಷರ ಗಾತ್ರ

ಶಾಲೆಗಳು ಪ್ರಾರಂಭವಾಗಿವೆ, ಪಠ್ಯದ ಗೊಂದಲಕ್ಕೆ ಮಕ್ಕಳು ಬಲಿಪಶುವಾಗಹತ್ತಿದ್ದಾರೆ. ವಿಷಯ ತಜ್ಞರು, ಮಕ್ಕಳ ಮಾನಸಿಕ ತಜ್ಞರು, ಶಿಕ್ಷಕರು ಚಿಂತಿಸಬೇಕಾದ ವಿಷಯ ರಾಜಕೀಯದಲ್ಲಿ, ರಾಜಕೀಯ ಸಾಹಿತಿಗಳ ಕೈಯಲ್ಲಿ ಬಿದ್ದು ಒದ್ದಾಡುತ್ತಿದೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಯಾವ ಗದ್ಯ, ಪದ್ಯ ಸೇರಿಸಬೇಕು, ಸೇರಿಸಬಾರದು ಎನ್ನುವುದನ್ನು ನಿರ್ಣಯಿಸುವ ಕೆಲಸ ಈ ಮೊದಲು ಪಠ್ಯಪುಸ್ತಕ ನಿರ್ದೇಶಕರದ್ದಾಗಿತ್ತು. ಉಪನ್ಯಾಸಕರು, ಶಿಕ್ಷಕರನ್ನು ಈ ಕೆಲಸಕ್ಕೆ ಕರೆಸಿ ಮುಖಾಮುಖಿ ಕೆಲಸ ಮಾಡಿಸಲಾಗುತ್ತಿತ್ತು. 1-5ನೇ ತರಗತಿವರೆಗಿನ ಪಠ್ಯಗಳನ್ನು ರಚಿಸುತ್ತಿದ್ದವರೇ ಬೇರೆ, ಮೇಲಿನ ತರಗತಿಗಳಿಗೆ ಪಠ್ಯಗಳನ್ನು ರೂಪಿಸುತ್ತಿದ್ದವರೇ ಬೇರೆ. ನಾನೊಮ್ಮೆ 3ನೇ ತರಗತಿ ಸಮಾಜ ವಿಜ್ಞಾನ ಪಠ್ಯ ತಯಾರಿಕೆಯಲ್ಲಿ ಪರಿಶೀಲಕನಾಗಿ ಹೋಗಿದ್ದೆ. ಅಲ್ಲಿ ಸಣ್ಣ ಮಕ್ಕಳ ಪಠ್ಯ ತಯಾರಿಸಲು ಉಪನ್ಯಾಸಕರನ್ನು ಆಹ್ವಾನಿಸಿದ್ದರು. ಅವರು ವಿಷಯವಾರು ಕುರಿತು ಪುಟ ತುಂಬಿಸಿದ್ದರು. ಅದು ಅವಶ್ಯವಿರಲಿಲ್ಲ, ಬೇರೆ ಬೇರೆ ಎಷ್ಟು, ಯಾವ ವಿಷಯಗಳನ್ನು ಆ ಮಕ್ಕಳು ಕಲಿಯಬಲ್ಲರು ಎಂಬುದನ್ನು ಅರಿತು ಪಠ್ಯ ತಯಾರಿಸಬೇಕು. ಬಿ.ಇಡಿ., ಎಂ.ಇಡಿ.ಯಂತಹ ತರಬೇತಿ ಪಡೆದವರಿಂದ ಸರಿಯಾದ ನ್ಯಾಯ ದೊರಕಿಸಲು ಸಾಧ್ಯ. ಕೊನೆಗೆ ವರದಿ ಕೊಡಬೇಕಿತ್ತು. ಇದ್ದ ವಿಷಯ ಇದ್ದಂತೆ ಬರೆದುಕೊಟ್ಟೆ. ಆ ಸಮಿತಿಯನ್ನೇ ರದ್ದುಪಡಿಸಿದರು. ನನ್ನನ್ನು ಕೈಬಿಟ್ಟರು. ಇದು ಅಧಿಕಾರಿಗಳ ರಾಜಕಾರಣ.

ಪಠ್ಯಪುಸ್ತಕಗಳಲ್ಲಿ ಯಾರ್‍ಯಾರೋ ನನ್ನದನ್ನು ಹಾಕಿ, ನನ್ನದನ್ನು ತೆಗೆಯಿರಿ, ಅದು ಬೇಡ, ಇದು ಬೇಕು ಎನ್ನಲು ಇದೇನು ತರಕಾರಿ ಸಂತೆಯೇ? ಮೀಸಲಾತಿಯು ಇಲ್ಲೂ ಕಾಲಿರಿಸಿತು. ಮಕ್ಕಳ ಮನಸ್ಸಿಗೆ ಪಠ್ಯವೋ ಮೀಸಲಾತಿಗಾಗಿ ಪಠ್ಯವೋ ತಿಳಿಯದು. ಪಠ್ಯಪುಸ್ತಕ ಪರಿಷ್ಕರಣೆಗಾಗಿ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ ಸ್ವಾಯತ್ತತೆ ಕೊಡಿ. ಪಾಲಕರು ಹಾಗೂ ಮಕ್ಕಳ ಅಭಿಪ್ರಾಯಕ್ಕೆ ಅವಕಾಶ ಇರಲಿ. ಆದರೂ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ಈ ಗಾಳಿ, ಈ ವಾತಾವರಣ ಅಲ್ಲಿ ಸುಳಿಯದು.

-ಡಾ. ಕೆ.ಬಿ.ಬ್ಯಾಳಿ, ಕುಕನೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT