ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಸಮಗ್ರ ಬರಹ: ಕೈಗೆಟುಕುವಂತಿರಲಿ

Last Updated 10 ಜುಲೈ 2022, 19:30 IST
ಅಕ್ಷರ ಗಾತ್ರ

ಕುವೆಂಪು ಈ ನಾಡು ಕಂಡ ಬಹಳ ದೊಡ್ಡ ಬರಹಗಾರರು. ಕನ್ನಡ ಮತ್ತು ಕನ್ನಡದ ಬದುಕನ್ನು ಅಖಂಡವಾಗಿ ಗ್ರಹಿಸಿ, ತಮ್ಮ ಸೃಜನಶೀಲತೆಯ ಭಿತ್ತಿಯಲ್ಲಿ ಅವುಗಳ ಎಲ್ಲಾ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನೂ ಆಮೂಲಾಗ್ರವಾಗಿಅಭಿವ್ಯಕ್ತಿಸಿದ ಅಪ್ರತಿಮ ಲೇಖಕ. ಕನ್ನಡಿಗರ ಸಾಂಸ್ಕೃತಿಕ ನೆಲೆಯನ್ನು ಶ್ರೀಮಂತಗೊಳಿಸಿದ ಮಹಾನ್ ಚೇತನ ಕುವೆಂಪು ನಮ್ಮ ಪ್ರಜ್ಞೆ ಎಂದರೆ ಅತಿಶಯೋಕ್ತಿಯಾಗಲಾರದು. ಕನ್ನಡದ ಬದುಕಿನಲ್ಲಿ ಹೀಗೆ ಬೆರೆತುಹೋಗಿರುವ ಕುವೆಂಪು ಅವರ ಸಮಗ್ರ ಕೃತಿಗಳು ತನ್ನ ಮನೆಯಲ್ಲಿರಬೇಕು ಎಂದು ಪ್ರತೀ ಸಾಹಿತ್ಯಪ್ರೇಮಿ ಕನ್ನಡಿಗನೂ ಅತ್ಯಂತ ಅಭಿಮಾನದಿಂದ ಬಯಸುತ್ತಾನೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಕುವೆಂಪು ಸಮಗ್ರ ಬರಹಗಳ ಬೆಲೆಯು ಸುಮಾರು ಹನ್ನೆರಡು ಸಾವಿರ ರೂಪಾಯಿಗಳಿಗೂ ಜಾಸ್ತಿಯಿದ್ದು, ಕನ್ನಡ ಸಾಹಿತ್ಯ ಓದುಗನ ಕೈಗೆಟುಕಲಾರದಾಗಿದೆ.

ಸರ್ಕಾರವು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್‌ ಅವರ ಬರಹಗಳು ಮತ್ತು ಭಾಷಣಗಳ ಸಂಪುಟಗಳನ್ನು ಅತ್ಯಂತ ಕಡಿಮೆ ದರದಲ್ಲಿ ಮುದ್ರಿಸಿ ಲಕ್ಷಾಂತರ ಜನರಿಗೆ ಹಂಚುತ್ತಾ ಬಂದಿದೆ. ಸುಮಾರು ಸಾವಿರ ಪುಟಗಳ ಒಂದು ಬೃಹತ್‌ ಸಂಪುಟಕ್ಕೆ ಬರೀ ₹ 50ರಂತೆ 22 ಸಂಪುಟಗಳು ₹ 1100ಕ್ಕೆ ಒಂದು ಸೆಟ್‌ನಲ್ಲಿ ದೊರಕುತ್ತವೆ. ಬಾಬಾಸಾಹೇಬರ ಬರಹ ಮತ್ತು ಭಾಷಣಗಳ ಸಂಪುಟಗಳು ಎಷ್ಟು ಜನಪ್ರಿಯವಾಗಿವೆ ಎಂದರೆ, ಅವು ಪ್ರಕಟಗೊಂಡು ಹೊರಬಂದ ಒಂದೆರಡು ವಾರಗಳಲ್ಲೇ ಔಟ್ ಆಫ್ ಸ್ಟಾಕ್ ಆಗಿಬಿಡುತ್ತವೆ.

ಸದ್ಯ ಕುವೆಂಪು ಅವರ ಕೃತಿಗಳ ಮೇಲೆ ಹಕ್ಕುಸ್ವಾಮ್ಯ ಹೊಂದಿರುವ ಕುವೆಂಪು ಪ್ರತಿಷ್ಠಾನದವರು ಅಥವಾ ಅವರ ಕುಟುಂಬದವರು ಈ ದಿಸೆಯಲ್ಲಿ ಉದಾರವಾಗಿ ಯೋಚಿಸಲಿ. ಆ ಮೂಲಕ ಅತ್ಯಂತ ಕಡಿಮೆ ದರದಲ್ಲಿ ತಾವಾದರೂ ಪ್ರಕಟಿಸಲಿ ಅಥವಾ ಸರ್ಕಾರದಿಂದಲಾದರೂ ಪ್ರಕಟವಾಗುವಂತೆ ಮಾಡಿ, ಕನ್ನಡಿಗರ ಮನೆಮನೆಗೆ ಕುವೆಂಪು ಕೃತಿಗಳು ತಲುಪುವಂತೆ ಕ್ರಮ ವಹಿಸಲೆಂದು ಅತ್ಯಂತ ಪ್ರೀತಿಯಿಂದ ಒತ್ತಾಯಿಸುತ್ತೇವೆ.

ಬಿ.ಎಲ್.ರಾಜು, ಮೇಟಿ ಮಲ್ಲಿಕಾರ್ಜುನ, ಬಿ.ಚಂದ್ರೇಗೌಡ, ಸಣ್ಣರಾಮ, ಎಂ.ಗುರುಮೂರ್ತಿ,
ಪಿ.ಆರಡಿ ಮಲ್ಲಯ್ಯ, ಕೆ.ಬಿ.ಕಿರಣ್, ಟಿ.ಜಿ.ವೆಂಕಟೇಶ್, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT