ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೇಮ ಬರಹ’ದ ಮೊದಲ ಅಕ್ಷರ

Last Updated 8 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ನಾನು ಇಲ್ಲಿಗೆ ಯಾಕೆ ಬಂದಿದ್ದೀನಿ ಎನ್ನುವುದು ನನಗೆ ಚೆನ್ನಾಗಿ ಗೊತ್ತು’ -ಹೀಗೆಂದು ಸ್ಪಷ್ಟವಾಗಿ ಹೇಳಿದರು ಐಶ್ವರ್ಯಾ ಅರ್ಜುನ್‌. ತಂದೆಯ ಜನಪ್ರಿಯತೆ ನಿಮಗೆ ಯಾವತ್ತೂ ಭಾರ ಅನಿಸಿಲ್ಲವೇ? ಎಂಬ ಪ್ರಶ್ನೆಗೆ ಅವರು ಉತ್ತರವಾಗಿದ್ದು ಹೀಗೆ. ಅದು ಎದುರಿನವರಿಗೆ ಹೇಳಿದಷ್ಟೇ, ತಮಗೆ ತಾವು ಹೇಳಿಕೊಂಡ ಹಾಗೆಯೂ ಇತ್ತು.

‘ನನ್ನ ತಂದೆ ಅರ್ಜುನ್‌ ಸರ್ಜಾ ದೊಡ್ಡ ನಟ. ಅವರ ಹೆಸರನ್ನು ಉಳಿಸಬೇಕು. ಆ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಈ ಎಲ್ಲವೂ ನಿಜ. ಆದರೆ ಅದನ್ನೇ ತಲೆಯಲ್ಲಿ ತುಂಬಿಕೊಂಡು ಕೂತರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ನಾನು ಸಿನಿಮಾರಂಗಕ್ಕೆ ಬಂದಿರುವುದು ನಟನೆಯ ಪ್ಯಾಷನ್‌ ಇರುವುದರಿಂದ. ಆದ್ದರಿಂದ ಉಳಿದ ಯಾವ ಸಂಗತಿಯೂ ನನ್ನನ್ನು ಅತಿಯಾಗಿ ಕಾಡುವುದಿಲ್ಲ’ ಎಂದು ಇನ್ನಷ್ಟು ವಿಸ್ತರಿಸಿ ಹೇಳಿದರು.

ಐಶ್ವರ್ಯಾ ಅಭಿನಯದ ‘ಪ್ರೇಮ ಬರಹ’ ಸಿನಿಮಾ ಈ ವಾರ (ಫೆ.9) ತೆರೆಕಾಣುತ್ತಿದೆ. ಇದು ಅವರ ಮೊದಲ ಸಿನಿಮಾ. ಅವರ ಈ ಅಂಬೆಗಾಲ ಹೆಜ್ಜೆಗೆ ಅಪ್ಪನ ಕಿರುಬೆರಳ ಭದ್ರ ಹಿಡಿತ ಸಿಕ್ಕಿರುವುದೂ ಅವರ ಉತ್ಸಾಹವನ್ನು ಹೆಚ್ಚಿಸಿದೆ. ಮಗಳ ಮೊದಲ ಸಿನಿಮಾಗೆ ಅರ್ಜುನ್‌ ಸರ್ಜಾ ಅವರೇ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಆರಂಭದಲ್ಲಿ ಅರ್ಜುನ್‌, ಮಗಳಿಗೆ ಮೂರು ಸ್ಕ್ರಿಪ್ಟ್‌ ಕೈಲಿಟ್ಟಿದ್ದರಂತೆ. ‘ತಂದೆಯವರು ಕೊಟ್ಟ ಮೂರು ಕಥೆಗಳಲ್ಲಿ ಒಂದು ನಾಯಕಿ ಪ್ರಧಾನ, ಇನ್ನೊಂದು ಪಕ್ಕಾ ಕಮರ್ಷಿಯಲ್‌ ಇತ್ತು. ಅಂಥ ಕಥೆಗಳನ್ನು ನಾನು ತುಂಬ ಕೇಳಿದ್ದೆ, ನೋಡಿದ್ದೆ. ಆದರೆ ಮೂರನೇ ಕಥೆ ಈ ಎರಡಕ್ಕಿಂತ ತುಂಬ ಭಿನ್ನವಾಗಿತ್ತು. ಒಬ್ಬಳು ನಟಿಗೆ ಮೊದಲ ಸಿನಿಮಾದಲ್ಲಿ ಏನೇನೂ ಇರಬೇಕೋ ಅವೆಲ್ಲ ಅಂಶಗಳೂ ಇದ್ದವು. ಪ್ರೇಮ, ಹಾಸ್ಯ, ಆ್ಯಕ್ಷನ್‌ ಎಲ್ಲ ಅಂಶಗಳೂ ಈ ಸಿನಿಮಾದಲ್ಲಿವೆ. ಆ ಕಾರಣದಿಂದ ಆ ಕಥೆಯನ್ನೇ ಆಯ್ದುಕೊಂಡೆ’ ಎಂದು ಸಿನಿಮಾ ಆಯ್ದುಕೊಂಡ ಕಾರಣವನ್ನು ವಿವರಿಸುತ್ತಾರೆ ಐಶ್ವರ್ಯಾ.

‘ನಮ್ಮ ಕುಟುಂಬದಲ್ಲಿ ನಾನು ಮೂರನೇ ಪೀಳಿಗೆಯ ಕಲಾವಿದೆ. ಅಂದ ಮೇಲೆ ನಿರೀಕ್ಷೆಗಳು ಇದ್ದೇ ಇರುತ್ತವೆ. ಆ ನಿರೀಕ್ಷೆಗೆ ತಕ್ಕ ಹಾಗೆ ವೇದಿಕೆ ಸಿಕ್ಕುವುದು ತುಂಬ ಮುಖ್ಯ. ಅಂಥ ವೇದಿಕೆ ನನ್ನ ತಂದೆಯಿಂದಲೇ ನಿರ್ಮಾಣವಾಗಿರುವುದು ನನ್ನ ಅದೃಷ್ಟ’ ಎಂದೂ ಅವರು ಹೇಳಿಕೊಳ್ಳುತ್ತಾರೆ.

ಕಳೆದು ಮೂರು ವರ್ಷಗಳ ಹಿಂದೆ ಮುಂಬೈನಲ್ಲಿ ಒಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾಗ ಐಶ್ವರ್ಯಾ ಅವರಿಗೆ ನಟನೆಯಲ್ಲಿ ಆಸಕ್ತಿ ಬೆಳೆಯಿತು. ನನ್ನೊಳಗೆ ಒಬ್ಬಳು ನಟಿ ಇದ್ದಾಳೆ ಎಂದು ಅರಿವಾಯಿತು. ಹಾಗೆಂದು ತಕ್ಷಣ ಅವರು ಯಾವುದೋ ಸಿನಿಮಾ ಒಪ್ಪಿಕೊಂಡು ನಟನೆಗೆ ಇಳಿದುಬಿಡಲಿಲ್ಲ. ಕೆಲವು ಸಮಯದ ನಂತರ ತಿರುಗಿ ಮುಂಬೈಗೆ ತೆರಳಿ ಇನ್ನೊಂದು ಕಾರ್ಯಾಗಾರದಲ್ಲಿ ಪಾಲ್ಗೊಂಡರು. ನಟನೆ ಬಗ್ಗೆ ಸಾಕಷ್ಟು ತಿಳಿದುಕೊಂಡ ಮೇಲೆಯೇ ಬಣ್ಣದ ಬದುಕಿಗೆ ಕಾಲಿಡುವ ನಿರ್ಧಾರ ಮಾಡಿದರು.

ಐಶ್ವರ್ಯಾ ಮನಸ್ಸು ಮಾಡಿದ್ದರೆ ಬೇರೆ ಭಾಷೆಗಳ ಚಿತ್ರರಂಗದ ಮೂಲಕವೂ ಬಣ್ಣದ ಜಗತ್ತಿಗೆ ಅಡಿಯಿಡಬಹುದಿತ್ತು. ಆದರೆ, ಅವರಿಗೆ ಅದು ಇಷ್ಟವಿರಲಿಲ್ಲ. ಹಾಗೆಯೇ ಇಲ್ಲಿನ ಜನರ ಪ್ರೀತಿ, ಪ್ರೋತ್ಸಾಹ ಅವರನ್ನು ಮಾತೃಭಾಷೆಯಲ್ಲಿಯೇ ಮೊದಲ ಸಿನಿಮಾದಲ್ಲಿ ನಟಿಸಬೇಕು ಎಂಬ ನಿರ್ಧಾರ ತಳೆಯಲು ಕಾರಣವಾಗಿತ್ತು. ಇದೇ ಕಾರಣಕ್ಕೆ ತಮಿಳಿನಲ್ಲಿ ಬಂದಿದ್ದ ಒಂದು ಅವಕಾಶವನ್ನು ತಿರಸ್ಕರಿಸಲೂ ಅವರು ಹಿಂದೆ ಮುಂದೆ ನೋಡಿಲ್ಲ. ಮುಂದೆಯೂ ಕನ್ನಡ ಚಿತ್ರರಂಗದಲ್ಲಿಯೇ ಮುಂದುವರಿಯುವ ಇರಾದೆ ಅವರದು.

‘ಪ್ರೇಮ ಬರಹ’ ಸಿನಿಮಾದಲ್ಲಿ ಅವರು ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಧುರ್ಯಾ ಎಂಬುದು ಪಾತ್ರದ ಹೆಸರು. ‘ಮೊದಲಾರ್ಧ ತುಂಬ ಮಾತಾಡುವ, ಜಗಳಗಂಟಿ ಥರ ನೋಡ್ತೀರಾ. ದ್ವಿತೀಯಾರ್ಧದಲ್ಲಿ ಬೇರೆ ಬೇರೆ ಛಾಯೆಗಳು ಬರುತ್ತ ಹೋಗುತ್ತವೆ. ತುಂಬ ವೈವಿಧ್ಯವಿರುವ, ಭಾವುಕ ಸ್ಪರ್ಶವೂ ಇರುವ ಪಾತ್ರ’ ಎಂದು ವಿವರಿಸುತ್ತಾರೆ.

ಒಂದು ಪಾತ್ರಕ್ಕಾಗಿ ವಿಶೇಷ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಐಶ್ವರ್ಯಾ ಅವರಿಗೆ ಅಷ್ಟೊಂದು ನಂಬಿಕೆ ಇದ್ದಂತಿಲ್ಲ. ‘ನಟನೆ ಎನ್ನುವುದು ಮಾಡುತ್ತ ಮಾಡುತ್ತಲೇ ಕಲಿತುಕೊಳ್ಳುತ್ತ ಹೋಗುವುದು. ಅನುದಿನವೂ ಕಲಿಯುತ್ತಲೇ ಇರಬೇಕು’ ಎನ್ನುವ ಅವರು, ‘ಚಿತ್ರರಂಗಕ್ಕೆ ಬರಬೇಕು ಎಂದು ಮಾನಸಿಕವಾಗಿ ಸಿದ್ಧರಾಗಬೇಕು. ಶಕ್ತರಾಗಿರಬೇಕು. ಚಿತ್ರರಂಗದ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರಿಸಿಕೊಂಡಿರಬೇಕು’ ಎಂದು ಹೇಳಲು ಮರೆಯುವುದಿಲ್ಲ. ಹಾಗೆಯೇ ‘ನಮ್ಮ ಮನೆಯಲ್ಲಿಯೇ ಚಿತ್ರರಂಗದ ಜತೆ ಒಡನಾಟ ಇರುವ, ನಟನೆ, ನಿರ್ದೇಶನದ ಒಳ್ಳೆಯ ಮಾದರಿಗಳು ಇರುವುದರಿಂದ ನನಗೆ ತುಂಬ ತೊಂದರೆ ಎನಿಸಲಿಲ್ಲ’ ಎಂದೂ ಅವರು ಸೇರಿಸುತ್ತಾರೆ.

ತಂದೆಯ ನಿರ್ದೇಶನದಲ್ಲಿ ಕೆಲಸ ಮಾಡಿದ್ದೂ ಐಶ್ವರ್ಯಾಗೆ ಸಾಕಷ್ಟು ಸಂಗತಿಗಳನ್ನು ಕಲಿಸಿಕೊಟ್ಟಿದೆ. ‘ಪ್ರೇಮ ಬರಹದಲ್ಲಿ ನಟಿಸಿದ ಮೇಲೆ ಒಂದು ಸಿನಿಮಾ ಮಾಡುವಾಗ ನಿರ್ದೇಶಕ ಎಷ್ಟು ಮುಖ್ಯ ಎಂಬುದು ತಿಳಿಯಿತು. ಈಗ ನಾನು ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗಲೂ ನಿರ್ದೇಶಕ ಎಷ್ಟು ಪ್ರತಿಭಾವಂತ ಎಂಬುದನ್ನು ನೋಡುತ್ತೇನೆ. ನಂತರ ಕಥೆ, ಟೀಮ್ ಎಲ್ಲವೂ ಬರುತ್ತದೆ’ ಎಂದು ಅವರು ಹೇಳುತ್ತಾರೆ.

ಐಶ್ವರ್ಯಾಗೆ ಐತಿಹಾಸಿಕ ಪಾತ್ರದಲ್ಲಿ ನಟಿಸುವ ಇಂಗಿತ ಇದೆ. ಒಂದಕ್ಕಿಂತ ಒಂದು ಭಿನ್ನ ಪಾತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಶ್ರೀಮಂತ ಗೊಳಿಸಿ ಕೊಳ್ಳುವ ಕನಸೂ ಅವರಿಗಿದೆ. ತಮ್ಮ ಈ ಆಸೆಗಳಿಗೆ ‘ಪ್ರೇಮ ಬರಹ’ ಸಮರ್ಥ ಮುನ್ನುಡಿ ಬರೆಯಲಿದೆ ಎಂಬ ನಂಬಿಕೆ ಅವರಿಗೆ ಇದೆ

*
ಯಾವುದೇ ಕಲಾಪ್ರಕಾರದಲ್ಲಿ ನೆಲೆಯೂರಬೇಕು ಎಂದರೆ ಪ್ಯಾಷನ್‌ ಇರಬೇಕು. ಹಾಗೆಯೇ ಪರಿಶ್ರಮ ಪಡುವ ಮನಸ್ಸಿರಬೇಕು. ಅವಿಲ್ಲದಿದ್ದರೆ ಉಳಿದ ಯಾವ ಸಂಗತಿಯೂ ನಿಮ್ಮನ್ನು ಬಹಳ ದೂರ ಕೈಹಿಡಿದು ನಡೆಸಲಾರವು.
-ಐಶ್ವರ್ಯಾ ಅರ್ಜುನ್‌, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT