ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಂಕ್‌ ಹೊಣೆಗಾರಿಕೆ ಪ್ರದರ್ಶಿಸಲಿ

Last Updated 27 ಏಪ್ರಿಲ್ 2022, 16:16 IST
ಅಕ್ಷರ ಗಾತ್ರ

ಇತ್ತೀಚೆಗೆ ಸುದ್ದಿಯಾಗಿರುವ ‘ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪಿಗಳನ್ನು ಬಿಟ್ಟು
ಅದನ್ನು ಬಯಲಿಗೆಳೆದವರಿಗೆ ಪೊಲೀಸರು ನೋಟಿಸ್ ಕೊಡುವ ಮೂಲಕ ಅನ್ಯಾಯವೆಸಗುತ್ತಿದ್ದಾರೆ’ ಎಂಬ
ವಿಚಾರವನ್ನು ಕಾನೂನಿನ ಚೌಕಟ್ಟಿನಲ್ಲಿ ವಿಮರ್ಶಿಸಬೇಕಾದ ತುರ್ತು ಎದುರಾಗಿದೆ. ಈ ವಿಚಾರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರ ವರ್ತನೆ ಕುರಿತು ಸರ್ಕಾರ ಮತ್ತು ಪೊಲೀಸ್ ವಲಯಗಳಿಂದ ಟೀಕೆಗಳು ಬಂದರೆ, ಕಾಂಗ್ರೆಸ್ ಪಕ್ಷದ ವಲಯದಿಂದ ಅದನ್ನು ಬೆಂಬಲಿಸುವ ಮಾತಿನ ಪ್ರಹಾರಗಳು ನಡೆಯುತ್ತಿವೆ. ಈ ವಿಚಾರವನ್ನು ಪೊಲೀಸ್ ತನಿಖಾಧಿಕಾರಿಯಿಂದ ಆಗಬೇಕಾಗಿರುವ ತನಿಖೆಗೆ ಸೀಮಿತಗೊಳಿಸಿಕೊಂಡಾಗ, ಸಿಆರ್‌ಪಿಸಿ ಸೆಕ್ಷನ್ 160 ನಿರ್ದೇಶಿಸಿರುವ, ‘ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಂಶಗಳು ಅಥವಾ ಸಂದರ್ಭಗಳ ಬಗ್ಗೆ ತಿಳಿವಳಿಕೆಯಿರುವಂತೆ ತೋರುತ್ತಿರುವ ವ್ಯಕ್ತಿಯು ಅಗತ್ಯವಿದ್ದಲ್ಲಿ ವಿಚಾರಣೆಗೆ ಹಾಜರಾಗಬೇಕು’. ಸೆಕ್ಷನ್ 161ರಲ್ಲಿ ನಿರ್ದೇಶಿಸಿರುವಂತೆ, ‘ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಂಶಗಳು ಅಥವಾ ಸಂದರ್ಭಗಳ ಬಗ್ಗೆ ತಿಳಿವಳಿಕೆಯಿರುವ ಯಾವುದೇ ವ್ಯಕ್ತಿಯನ್ನು ಅಧಿಕಾರಿಯು ಮೌಖಿಕವಾಗಿ ವಿಚಾರಣೆಗೆ ಒಳಪಡಿಸಬಹುದು’. ತನಿಖೆಯ ಮೇಲೆ ಬೆಳಕು ಚೆಲ್ಲುವ ವಿಚಾರಗಳು, ಯಾವುದೇ ವ್ಯಕ್ತಿಯ ಪರಿಜ್ಞಾನದಲ್ಲಿದ್ದರೆ ಅಂತಹವರು 15 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಾಗಿದ್ದರೆಇಲ್ಲವೇ ಮಹಿಳೆಯಾಗಿದ್ದರೆ ಮಾತ್ರ, ಅವರಿಗೆ ನೋಟಿಸ್ ಕೊಟ್ಟು ಠಾಣೆಗೆ ಕರೆಸಿಕೊಂಡು ಹೇಳಿಕೆಪಡೆಯುವಂತಿಲ್ಲ. ಬದಲಾಗಿ ಅವರು ಇರುವ ವಾಸಸ್ಥಳಕ್ಕೆ ತನಿಖಾಧಿಕಾರಿಯೇ ಹೋಗಿ ಹೇಳಿಕೆ ಪಡೆಯತಕ್ಕದ್ದು.ಈ ವಿಷಯದಲ್ಲಿ ಶಾಸಕ ಅಥವಾ ಸಂಸದರು ವಿನಾಯ್ತಿ ಹೊಂದಲು ಕಾನೂನಿನಲ್ಲಿ ಶಕ್ಯರಲ್ಲ.

ಉಳಿದಂತೆ ಮಾಹಿತಿ ಹೊಂದಿರುವ ವ್ಯಕ್ತಿಯ ಸ್ಥಾನಮಾನ ಲೆಕ್ಕಿಸದೆ ನೋಟಿಸ್ ಮುಖಾಂತರ
ಠಾಣೆಗೆ ಬರಮಾಡಿಕೊಂಡು ಅವರ ಹೇಳಿಕೆ ಪಡೆದು ಮಾಹಿತಿಯನ್ನು ಸಂಗ್ರಹಿಸಬೇಕು. ಮಾಹಿತಿ ಕೊಡುವ ವ್ಯಕ್ತಿ ತನ್ನ ಹೇಳಿಕೆಗೆ ಸಹಿ ಮಾಡುವಂತಿಲ್ಲ. ‘ಈ ವಿಚಾರದಲ್ಲಿ ಗೃಹ ಸಚಿವರಲ್ಲೂ ಮಾಹಿತಿ ಇದೆ, ಅವರನ್ನೂ ವಿಚಾರಣೆಗೆ ಒಳಪಡಿಸಬೇಕು’ ಎಂಬ ಕಾಂಗ್ರೆಸ್ಸಿಗರ ವಾದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಕಾರಣ, ಗೃಹ ಸಚಿವರ ಮಾಹಿತಿದಾರನು ತನಿಖಾಧಿಕಾರಿಯೇ ಆಗಿರುತ್ತಾನೆ. ತನಿಖಾಧಿಕಾರಿಯು ಒಬ್ಬ ಗಾಳಿಸುದ್ದಿಯ ಸಾಕ್ಷ್ಯವಾಗಿ(hearsay witnsess) ಕಾರ್ಯನಿರ್ವಹಿಸುವುದರಿಂದ, ಅಂತಹವರಿಂದ ಮಾಹಿತಿ ಪಡೆಯುವ ಗೃಹ ಸಚಿವರಿಂದ ಹೇಳಿಕೆ ಪಡೆಯುವ ಸಂದರ್ಭ ಉದ್ಭವವಾಗುವುದಿಲ್ಲ. ಶಾಸಕ ಪ್ರಿಯಾಂಕ್ ಅವರ ನಿಲುವಿಗೆ ಕಾನೂನಿನ ಬೆಂಬಲವಿಲ್ಲ. ಆದಕಾರಣ ಸಮಾಜದ ಹಿತದೃಷ್ಟಿಯಿಂದ ಅವರು ತಮಗೆ ಗೊತ್ತಿರುವ ಎಲ್ಲ ವಿಚಾರಗಳನ್ನು ತನಿಖಾಧಿಕಾರಿಗಳಿಗೆ ತಿಳಿಸಿಯೋ ಇಲ್ಲವೇ ಅವರಲ್ಲಿಗೇ ಹೋಗಿ ತಮಗೆ ತಿಳಿವಳಿಕೆ ಇಲ್ಲವೆಂದೋ ಹೇಳಿಕೆ ಕೊಡುವುದರ ಮೂಲಕ ಒಬ್ಬ ಜವಾಬ್ದಾರಿಯುತ ನಾಗರಿಕನಂತೆ ನಡೆದು
ಕೊಳ್ಳಬೇಕು

ಸಿ.ಎಚ್.ಹನುಮಂತರಾಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT