ಮಂಗಳವಾರ, ಮಾರ್ಚ್ 28, 2023
32 °C

ವಾಚಕರ ವಾಣಿ: ಉದಾತ್ತ ವಿಚಾರ ವ್ಯಾಪಕವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾಗಮ ಕಾರ್ಯಕ್ರಮದಡಿ ನೀಡುವ ಹೋಂವರ್ಕ್‌ ನಾವೀನ್ಯದಿಂದ ಕೂಡಿರಲೆಂಬ ಉದ್ದೇಶದಿಂದ ಮುಖ್ಯೋಪಾಧ್ಯಾಯರು ‘ನಮ್ಮೂರಿನ ಪರಿಚಯ ಮತ್ತು ನನ್ನ ಕನಸಿನ ಊರು’ ಎಂಬ ವಿಷಯದ ಮೇಲೆ ಪ್ರಬಂಧ ಬರೆಯುವಂತೆ ಮಕ್ಕಳಿಗೆ ತಿಳಿಸಿದ್ದರು.

ಮರುದಿನ ಮಕ್ಕಳು ತಾವು ಬರೆದ ಪ್ರಬಂಧಗಳನ್ನು ಉತ್ಸಾಹದಿಂದ ತಂದಿದ್ದರು. ಅವುಗಳಲ್ಲಿ ಊರಿನ ಭೌತಿಕ ಸಂಪನ್ಮೂಲಗಳು, ಸರ್ಕಾರಿ ಕಚೇರಿಗಳು, ಪರಿಸರ, ಗುಡ್ಡ, ಪ್ರಾಣಿ ಪಕ್ಷಿಗಳು, ರಸ್ತೆಗಳು, ಬೆಳೆ ಮುಂತಾದವುಗಳ ಪ್ರಸ್ತಾಪ ಇತ್ತು. ಆದರೆ ಕೊನೆಯಲ್ಲಿ ‘ನನ್ನ ಕನಸಿನ ಊರು’ ಎಂಬ ವಿಭಾಗದಲ್ಲಿ ಹೆಚ್ಚಿನ ಮಕ್ಕಳು, ‘ನಮ್ಮೂರು ಧೂಮಪಾನ, ಮದ್ಯಪಾನ, ಗುಟ್ಕಾ ಮತ್ತು ಕೊರೊನಾದಿಂದ ದೂರವಾಗಬೇಕು. ಪ್ರತೀ ಮನೆಯಲ್ಲೂ ಶೌಚಾಲಯ ಇರಬೇಕು, ಎಲ್ಲರೂ ಒಂದಾಗಿ ಬಾಳಬೇಕು’ ಎಂದೆಲ್ಲ ಬರೆದಿದ್ದರು‌! ಇವರಲ್ಲಿ ಬಹುತೇಕರು ವಿದ್ಯಾರ್ಥಿನಿಯರು ಎಂಬುದು ವಿಶೇಷ.

ಮಕ್ಕಳ ಕನಸಿನ ಊರಿನಲ್ಲಿ ದೊಡ್ಡ ದೊಡ್ಡ ಬಂಗಲೆಗಳಿಲ್ಲ, ಐಷಾರಾಮಿ ಬದುಕನ್ನು ಉದ್ದೀಪಿಸುವ ಸೌಲಭ್ಯಗಳಿಲ್ಲ, ಜಾತಿ ಮತವಿಲ್ಲ. ಇರುವುದು ಸರಳ ಬದುಕು, ಆರೋಗ್ಯಕರ ಮತ್ತು ಸಮಸಮಾಜ, ಮೌಲ್ಯಯುತ ಜೀವನ. ಈ ರೀತಿಯ ಕನಸುಗಾರಿಕೆಯು ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಮೂಡುತ್ತಿರುವುದು ಖುಷಿಯ ವಿಚಾರ. ಏಕೆಂದರೆ ಶಿಕ್ಷಣದಿಂದ ವಂಚಿತರಾಗುತ್ತಿರುವ ಗ್ರಾಮೀಣ ಭಾಗದ ಮಕ್ಕಳ, ಅದರಲ್ಲೂ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಸಮಾಜದಲ್ಲಿನ ಬಹುತೇಕ ನಕಾರಾತ್ಮಕ ಅಂಶಗಳು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿವೆ. ಇಂತಹ ಸ್ಥಿತಿಯ ನಡುವೆಯೂ ಅವರಲ್ಲಿ ಉತ್ತಮ ವಿಚಾರಗಳು ಅರಳುತ್ತಿವೆ ಎಂಬುದಕ್ಕೆ ಮೇಲಿನ ಪ್ರಬಂಧಗಳು ನಿದರ್ಶನ. ಉದಾತ್ತ ವಿಚಾರಗಳನ್ನು ಎಲ್ಲೆಡೆಯೂ ಬಿತ್ತುವುದಕ್ಕೆ ಪೂರಕವಾದ ಕಾರ್ಯ ವ್ಯಾಪಕವಾಗಿ ನಡೆಯಬೇಕಾಗಿದೆ.

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.