ಮಂಗಳವಾರ, ಮಾರ್ಚ್ 9, 2021
32 °C

ವಿಧಾನ ಪರಿಷತ್ತಿನ ಅವಶ್ಯಕತೆ ಇದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನ ಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ಗಲಭೆ ಖಂಡನೀಯ. ಸಭಾಪತಿಯವರ ದಿಗ್ಬಂಧನ; ಯಾವುದೇ ವಿಧ್ಯುಕ್ತ ಆದೇಶ- ಸಂದೇಶವಿಲ್ಲದೆ ಕುರ್ಚಿಯಲ್ಲಿ ಕುಳಿತ ಉಪಸಭಾಪತಿಯವರ ದೈಹಿಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಅವರನ್ನು ಕುರ್ಚಿಯಿಂದೆಳೆದು, ಅವರು ಮಕಾಡೆ ಬೀಳುವುದರಿಂದ ಅದೃಷ್ಟವಶಾತ್ ತಪ್ಪಿಸಿಕೊಂಡ ಚಿತ್ರಗಳು, ವರದಿಗಳು ‘ಗೌರವಾನ್ವಿತ ಸದಸ್ಯರ’ ಅಮಾನವೀಯತೆಯ ನಗ್ನಪ್ರದರ್ಶನವಾಗಿತ್ತು. ನಂತರ ಪೀಠದಲ್ಲಿ ಒಬ್ಬರ ನಂತರ ಮತ್ತೊಬ್ಬರು ಕುಳಿತದ್ದು ಸದನವನ್ನು ಕ್ರೂರ ಹಾಸ್ಯಕ್ಕೆ ಒಳಪಡಿಸಿದಂತಿತ್ತು.

ಸಂಸತ್ತಿನಲ್ಲಿ ಸದಸ್ಯರು ‘ಸಭ್ಯತೆ, ಶಿಷ್ಟಮಾರ್ಗ, ಸದಾಚಾರ ಅನುಸರಿಸಲು ನಡವಳಿಕೆಯ ಸಂಹಿತೆಯನ್ನು ರೂಪಿಸಿರುವ ಮಾದರಿಯಲ್ಲಿ ಕರ್ನಾಟಕ ವಿಧಾನ ಪರಿಷತ್ತು ಸದನದ ನಡವಳಿಕೆಯ ನಿಯಮಗಳನ್ನು (ಸೆಕ್ಷನ್ 303-303ಎ) ರೂಪಿಸಿದೆ. ಅದರಂತೆ, ‘ಸದನದಲ್ಲಿ ಘೋಷಣೆಯನ್ನು ಕೂಗುವುದು’, ‘ಸದನದ ಬಾವಿಗೆ ಧಾವಿಸುವುದು’, ‘ಸತ್ಯಾಗ್ರಹ ನಡೆಸುವುದು’ ಅಥವಾ ಧರಣಿ ಕೂರುವುದನ್ನು ನಿಷೇಧಿಸಿದೆ. ಆದರೂ ಪದೇ ಪದೇ ಉಂಟಾಗುವ ಈ ರೀತಿಯ ಅಶಿಸ್ತನ್ನು, ಪ್ರತಿಭಟನೆಯನ್ನು ಸಂಸತ್ತಿನಲ್ಲಂತೂ ಸದಸ್ಯರು ಪಶ್ಚಾತ್ತಾಪ ವ್ಯಕ್ತಪಡಿಸುವುದರೊಂದಿಗೆ ಕ್ಷಮಿಸಲಾಗುತ್ತಿದೆ. ಈ ಲಕ್ಷ್ಮಣರೇಖೆಯನ್ನು ಮೀರಿದ ನಡವಳಿಕೆಗಳಿಗೆ ವಿವಿಧ ರೀತಿಯ ಶಿಕ್ಷೆ ನೀಡುತ್ತಾ ಬಂದಿರುವುದನ್ನು ಸುದೀರ್ಘವಾಗಿ ದಾಖಲಿಸಲಾಗಿದೆ. ಪರಿಷತ್ತಿನಲ್ಲಾದ ಪುಂಡಾಟವು ಅಶಿಸ್ತನ್ನು ಮೀರಿದ್ದು, ಸದಸ್ಯರ ಅಮಾನತಿಗೂ ಅರ್ಹವಾಗಿದೆ.

ಹಿಂಸಾಚಾರವನ್ನು ಸಮರ್ಥಿಸದೆ ಅದಕ್ಕೆ ‘ಕಾರಣ’ಗಳು, ‘ಮೂಲ ಕಾರಣ’ಗಳ ಕುರಿತು ಕೆಲವರು ಉಲ್ಲೇಖಿಸಿದ್ದಾರೆ. ಇದು ತರ್ಕಬದ್ಧವಲ್ಲ. ಕಾರಣಗಳು ಎಷ್ಟೇ ‘ನ್ಯಾಯಯುತ’ವಾಗಿದ್ದರೂ ಸದನದ ಒಳಗಿನ ನಡವಳಿಕೆಗೆ ಅವು ಯಾವುವೂ ಸಮರ್ಥನೆ ಆಗಲಾರವು. ದೆಹಲಿ ಬಳಿ ನಡೆಯುತ್ತಿರುವ ರೈತರ ಸಂಪೂರ್ಣ ಶಾಂತಿಯುತ ಪ್ರತಿಭಟನೆಯು ನಮ್ಮ ಶಾಸಕರಿಗೆ ಮಾದರಿಯಾಗಲಿಲ್ಲ ಏಕೆ? ಸುಪ್ರೀಂ ಕೋರ್ಟ್ ಅದನ್ನು ‘ನ್ಯಾಯಯುತ’ ಎಂದು ಹೇಳಿ, ‘ರೈತರು ಹಿಂಸೆಗೆ ಇಳಿಯುವಂತೆ ಪೊಲೀಸ್ ಮತ್ತು ಇತರ ಪ್ರಾಧಿಕಾರಗಳು ಕುಮ್ಮಕ್ಕು ನೀಡಬಾರದು’ ಎಂದು ಆದೇಶಿಸಿದೆ! ಪರಿಷತ್‌ ಸದಸ್ಯನಾಗುವ ಸುಯೋಗವು ಲಕ್ಷಾಂತರ ಜನರಲ್ಲಿ ಒಬ್ಬ ವ್ಯಕ್ತಿಗೆ ಲಭಿಸುತ್ತದೆ. ಅಂತಹ ಅವಕಾಶವನ್ನು ಹಗುರವಾಗಿ, ಉಪೇಕ್ಷೆಯಿಂದ ನೋಡುವುದು ಸಾಮಾಜಿಕ ಹೊಣೆಗೇಡಿತನವೇ ಸರಿ. ಇಷ್ಟೆಲ್ಲದರ ನಡುವೆ, ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ತೀವ್ರ ನೋವಿನೊಂದಿಗೆ ನಾಡಿನ ಜನರ ಕ್ಷಮೆ ಕೇಳಿರುವುದು ಮೆಚ್ಚಬೇಕಾದ ವಿಷಯ.

ದಶಕಗಳ ಹಿಂದೆ ವಿಧಾನ ಪರಿಷತ್ತನ್ನು ‘ಚಿಂತಕರ ಚಾವಡಿ’ ಎಂದು ಗುರುತಿಸಲಾಗಿತ್ತು. ಆದರೆ ತೀವ್ರ ರೂಪಾಂತರಗೊಂಡಿರುವ ಇಂದಿನ ವಿಧಾನ ಪರಿಷತ್ತುಗಳ ಅವಶ್ಯಕತೆ ಇದೆಯೇ?
-ಪ್ರೊ. ಬಿ.ಕೆ. ಚಂದ್ರಶೇಖರ್, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು