ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಸ್ವಾಮಿಗಳು ಸನ್ನಡತೆ ಪ್ರೋತ್ಸಾಹಿಸಲಿ

Last Updated 30 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಇಂದಿನ ಬಹುತೇಕ ಮಠಾಧೀಶರ ನಡವಳಿಕೆಯನ್ನು ರವೀಂದ್ರ ಭಟ್ಟ ಅವರ ಲೇಖನ (ಪ್ರ.ವಾ., ಡಿ. 30) ನಿರೂಪಿಸಿದೆ. ನಮ್ಮ ಅನೇಕ ಮಠಾಧೀಶರು ರಾಜಕಾರಣಿಗಳ ಜೊತೆ ಸೇರಿ ಒಳಗೊಳಗೆ ಆಡುವ ಆಟಗಳಿಗೆ, ಮಾಡುವ ಮಾಟಗಳಿಗೆ ಈಗ ಇತಿಮಿತಿಯೇ ಇಲ್ಲದಂತಾಗಿದೆ. ಕೆಲ ಸ್ವಾಮೀಜಿಗಳಂತೂ ತಮ್ಮ ಮಠದ ಭಕ್ತರನ್ನೋ ಅಥವಾ ತಮಗೆ ಲಾಭ ಮಾಡಿಕೊಡುವ ರಾಜಕೀಯ ಪಕ್ಷದ ಅಭ್ಯರ್ಥಿಯನ್ನೋ ಢಾಣಾ ಡಂಗುರವಾಗಿ ಬೆಂಬಲಿಸುತ್ತಾರೆ. ಅಲ್ಲದೆ ಇಂಥವರನ್ನೇ ಬೆಂಬಲಿಸುವಂತೆ ಫರ್ಮಾನು ಬೇರೆ ಹೊರಡಿಸುತ್ತಾರೆ. ಪಕ್ಷ ರಾಜಕಾರಣಿಗಳಂತೆ ಅವರು ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ. ಹಣ, ಹೆಂಡ ಹಂಚುವುದಕ್ಕೆ ಪ್ರೋತ್ಸಾಹಿಸುವುದಿಲ್ಲ. ಆದರೆ ಇವೆರಡನ್ನು ಬಿಟ್ಟು ಉಳಿದೆಲ್ಲ ರಾಜಕಾರಣ ಮಾಡುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ. ಅವರು ಇದನ್ನು ಕದ್ದುಮುಚ್ಚಿಯೇನೂ ಮಾಡುತ್ತಿಲ್ಲ. ಈ ಸ್ವಾಮಿಗಳು ಅನೇಕ ವೇಳೆ ಪರಮಭ್ರಷ್ಟರಿಗೂ ಆಶೀರ್ವಾದ ಮಾಡುತ್ತಾರೆ. ದುರಾಚಾರಿ, ದುರ್ಗುಣಿಗಳಿಗೂ ಸ್ವಾಮಿಗಳ ಹರಕೆ ದಕ್ಕುತ್ತದೆ.

ಹಿಂದೊಂದು ಕಾಲವಿತ್ತು. ಮಂತ್ರಿ, ಮುಖ್ಯಮಂತ್ರಿಗಳು ಸ್ವಾಮೀಜಿಗಳನ್ನು ಕಾಣಲು ಅವರಿಗೆ ಫೋನ್ ಮಾಡಿ ತಿಳಿಸಿ, ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದು ಬರುತ್ತಿದ್ದರು. ಆದರೆ ಬದಲಾದ ಈಗಿನ ಕಾಲದಲ್ಲಿ ಸ್ವಾಮೀಜಿಗಳೇ ರಾಜಕಾರಣಿಗಳ ಬಾಗಿಲ ಕದ ತಟ್ಟಿ ದರ್ಶನ ಪಡೆದು ಬರುತ್ತಿದ್ದಾರೆ! ಕೆಲವು ಸ್ವಾಮಿಗಳಂತೂ ಯಾರನ್ನು ಮಂತ್ರಿಯನ್ನಾಗಿ ಮಾಡಬೇಕು, ಸಚಿವ ಸಂಪುಟದಿಂದ ಯಾರನ್ನು ಕೈ ಬಿಡಬೇಕು ಎಂಬಂಥ ಪಕ್ಕಾ ರಾಜಕಾರಣದ ವಿಷಯದಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ರಾಜಕೀಯ ಕುರಿತು ಇವರು ಕಿಂಚಿತ್ ಯೋಚನೆಯನ್ನೂ ಮಾಡಬಾರದು ಎಂದರ್ಥವಲ್ಲ. ಬೇಕಿದ್ದರೆ ಇವರು ಉತ್ತಮ ಸಮಾಜ ನಿರ್ಮಾಣದ ಸಲುವಾಗಿ ಸಾರ್ವಜನಿಕರಲ್ಲಿ ರಾಜಕೀಯ ಮೌಲ್ಯಗಳನ್ನು ತುಂಬಲಿ. ಏಕೆಂದರೆ ಮತದಾರ ಭ್ರಷ್ಟನಾಗಿರುವುದರಿಂದಲೇ ಅವನ ಪ್ರತಿನಿಧಿ ಕೂಡ ಭ್ರಷ್ಟನಾಗಬೇಕಾಗಿದೆ. ‘ಎಂಥ ಹಿಟ್ಟೋ ಅಂಥ ರೊಟ್ಟಿ’. ಹೀಗಾಗಿ, ಸ್ವಾಮಿಗಳಾದವರು ಸನ್ನಡತೆಯನ್ನು
ಪ್ರೋತ್ಸಾಹಿಸಲಿ. ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಿ.

- ಡಾ. ಶಿವರಂಜನ್ ಸತ್ಯಂಪೇಟೆ,ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT