ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕಠಿಣ ಪಾಠ ಮತ್ತು ಮೃದು ಪಾಠ

Last Updated 12 ಮೇ 2022, 22:15 IST
ಅಕ್ಷರ ಗಾತ್ರ

ಬ್ರಿಟಿಷರ ಕಾಲದ ಮತ್ತು ನಮ್ಮ ಸಂವಿಧಾನಕ್ಕೆ ಮುನ್ನ ರೂಪಿತವಾದ ದೇಶದ್ರೋಹಿ ವಿರೋಧಿ ಶಾಸನವು ಮರುಪರಿಶೀಲನೆಗೆ ಅರ್ಹವೆಂದು ಸುಪ್ರೀಂ ಕೋರ್ಟ್‌ ಈಗ ಕೊಟ್ಟಿರುವ ಆದೇಶ, ಈ ರಾಜಕೀಯ ಸಂದರ್ಭದಲ್ಲಿ ಒಂದು ಐತಿಹಾಸಿಕ ಆದೇಶ ಎಂದೇ ಹೇಳಬಹುದು. ಇದು, ನಮ್ಮ ನ್ಯಾಯಾಂಗವು ಆಡಳಿತ ಪಕ್ಷಕ್ಕೆ ಹೇಳಿರುವ ಕಠಿಣ ಪಾಠ ಮಾತ್ರವಷ್ಟೇ ಅಲ್ಲದೆ ವಿರೋಧ ಪಕ್ಷಗಳಿಗೆ ಹೇಳಿರುವ ಒಂದು ಮೃದು ಪಾಠವೆಂದೂ ಅರಿಯಬೇಕಿದೆ. ತೋಳ ಬರುವ ಮುನ್ನವೇ ತೋಳ ಎಂದು ಅರಚಿಕೊಂಡು ಜನರಲ್ಲಿ ಅಕಾಲಿಕ ಮತ್ತು ಅನಗತ್ಯ ಭಯ ಹುಟ್ಟಿಸುವ ಹುಡುಗಾಟಿಕೆಯ ಮಟ್ಟಕ್ಕೆ ಜನತಾಂತ್ರಿಕ ಹೋರಾಟ ಮತ್ತು ಜನಜಾಗೃತಿ ಚಳವಳಿಗಳನ್ನು ಇಳಿಸಿರುವ ವಿರೋಧ ಪಕ್ಷಗಳು, ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಹುಡುಗಾಟಿಕೆಯ ಚಾಳಿಯನ್ನಾಗಿ ಮಾಡಿಕೊಂಡಿವೆ ಎಂಬುದನ್ನು ಈ ಆದೇಶ ಪರೋಕ್ಷವಾಗಿ ಸೂಚಿಸುತ್ತದೆ.

ಪ್ರಜಾತಂತ್ರ ವ್ಯವಸ್ಥೆಗೆ ಆಗುತ್ತಿರುವ ಆಘಾತವನ್ನು ನಿಖರವಾಗಿ ಗುರುತಿಸಿ ಅದನ್ನು ಪರಿಹರಿಸಲು ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿಯೇ ಲಭ್ಯ ಇರುವ ಸಾಧನಗಳನ್ನು ಅಗತ್ಯ ಸಹನೆ ಮತ್ತು ವಿಶ್ವಾಸಗಳಿಂದ ಬಳಸಬಹುದಾದ ಸಾಧ್ಯತೆಗಳ ಕಡೆ ಗಂಭೀರ ಗಮನ ಕೊಡದೆ, ಫ್ಯಾಸಿಸ್ಟ್, ಹಿಟ್ಲರ್, ಸರ್ವಾಧಿಕಾರ, ಹಿಂದೂ ರಾಷ್ಟ್ರ ಮುಂತಾದ ಸವೆದ ರಾಜಕೀಯ ನಾಣ್ಯಗಳನ್ನೇ ಜನರತ್ತ ಎಸೆಯುತ್ತಾ ಸ್ವತಃ ತಾವೇ ಸವೆದ ನಾಣ್ಯಗಳಾಗುತ್ತಿವೆ; ಚುನಾವಣೆಗಳಲ್ಲಿ ಪದೇ ಪದೇ ಸೋಲುತ್ತಿವೆ. ಈ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಅಣಕಕ್ಕೀಡು
ಮಾಡುತ್ತಿವೆ.

ನಿಜ, ನಮ್ಮ ದೇಶದ ಪ್ರಜಾತಂತ್ರಕ್ಕೆ ಇದು ಕೆಟ್ಟ ಕಾಲ. ಇದರ ಹಲವು ಅಂಗಗಳು ಹಲವಾರು ಬಾರಿ ಊನಗೊಂಡು ಸೋತಿವೆ. ಆದರೆ ಈ ಎಲ್ಲವೂ ಎಲ್ಲ ಕಾಲದಲ್ಲೂ ಅಲ್ಲ ಮತ್ತು ಇಡೀ ವ್ಯವಸ್ಥೆಯನ್ನು ಉರುಳಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಈ ದೇಶಕ್ಕೊಂದು ಪ್ರಬುದ್ಧ ಪ್ರಜಾತಂತ್ರ ವ್ಯವಸ್ಥೆ ಕಟ್ಟಿರುವುದಾಗಿ ಹೇಳಿಕೊಳ್ಳುವ ನಮ್ಮ ಈ ರಾಜಕಾರಣಿಗಳು ತೋಳ ಎಂಬ ಶಬ್ದವನ್ನು ತೋಳಗಳಿಗಾಗಿ ಮಾತ್ರ ಬಳಸುವ ಸಮಚಿತ್ತದ ರಾಜಕೀಯ ಮಾರ್ಗವನ್ನು ಅನುಸರಿಸಿ, ನಮ್ಮ ರಾಜಕೀಯ ಸಂವಾದದ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗಳನ್ನು ಹೆಚ್ಚಿಸುವಂತಾಗಲಿ. ಆ ಮೂಲಕ ಈಗಾಗಲೇ ಕುಸಿದುಹೋಗಿರುವ ವಿರೋಧ ಪಕ್ಷಗಳ ವಿಶ್ವಾಸಾರ್ಹತೆಯೂ ಹೆಚ್ಚಾಗಿ, ಅವು ಕೂಡ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುತ್ತಾ ಆಡಳಿತ ನಡೆಸುವಂತಾಗಲಿ. ಬರೀ ಕೂಗಿ ಕೂಗಿ ಬಾಯಿ ಒಣಗಿಸಿಕೊಳ್ಳುವುದರಿಂದ ಪ್ರಯೋಜನವಿಲ್ಲ. ಸುಪ್ರೀಂ ಕೋರ್ಟ್‌ನ ಈಗಿನ ಆದೇಶ ನಮ್ಮ ವಿರೋಧ ಪಕ್ಷಗಳಿಗೆ ಹೇಳಿರುವ ಮೃದು ಪಾಠ ಇದೇ ಮತ್ತು ಇದು ಈ ಸಂದರ್ಭದ ಒಂದು ಬಹುಮುಖ್ಯ ಪಾಠವೂ ಹೌದು.

ಡಿ.ಎಸ್.ನಾಗಭೂಷಣ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT