ಎಲ್ಲ ನಗರಗಳೂ ಸ್ವಚ್ಛವಾಗಲಿ

7

ಎಲ್ಲ ನಗರಗಳೂ ಸ್ವಚ್ಛವಾಗಲಿ

Published:
Updated:

ಪದ್ಧತಿ ಬದಲಾಗಬೇಕು
ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ)  ತನ್ನ ಮಾನ್ಯತೆ ಪಟ್ಟಿಯಿಂದ ಹನ್ನೊಂದು ಕನ್ನಡ ಜರ್ನಲ್‌ಗಳನ್ನು ಕೈಬಿಟ್ಟಿರುವ ಸುದ್ದಿ ಪ್ರಕಟವಾಗಿದೆ. ಕನ್ನಡ ಮಾತ್ರವಲ್ಲದೆ ಒಟ್ಟಾರೆ 4,305 ಜರ್ನಲ್‌ಗಳ ಮಾನ್ಯತೆಯನ್ನು ರದ್ದು ಮಾಡಲಾಗಿದೆ (ಪ್ರ.ವಾ., ಆ. 6). ಕನ್ನಡ ಜರ್ನಲ್‌ಗಳ ಮಾನ್ಯತೆ ರದ್ದತಿಯಿಂದ ಕನ್ನಡ ಸಂಶೋಧನಾ ವಿದ್ಯಾರ್ಥಿಗಳು ಕಂಗಾಲಾಗುವುದು ಸಹಜ. ಈಗ ಮಾನ್ಯತೆ ರದ್ದತಿಯನ್ನು ವಾಪಸ್ ಪಡೆಯಬೇಕೆಂಬ ಒತ್ತಾಯವೂ ಸಹಜ. ಆದರೆ ನಾವೀಗ ಈ ಮಾನ್ಯತೆಯ ರದ್ದತಿಯ ಬದಲು ‍ಪದ್ಧತಿಯನ್ನೇ ವಿರೋಧಿಸಬೇಕು. ಒಂದು ನಿಯತಕಾಲಿಕಕ್ಕೆ ಯುಜಿಸಿಯು ಮಾನ್ಯತೆ ನೀಡಿ, ಆದರಲ್ಲಿ ಪ್ರಕಟವಾದ ಬರಹಗಳು ಮಾತ್ರ ಮೌಲಿಕ ಎಂದು ಪರಿಗಣಿಸುವುದೇ ಅವೈಜ್ಞಾನಿಕ, ಅವೈಚಾರಿಕ. ಅಷ್ಟೇಅಲ್ಲ ಸಂಶೋಧನೆಯನ್ನು ಇಂತಹ ತಾಂತ್ರಿಕ ಮಾನ್ಯತೆಯಿಂದ ಅಳೆಯುವ ಕ್ರಮವೇ ಅಧ್ಯಯನ ವಿರೋಧಿಯಾದುದು. ಉತ್ತಮ ಬರಹವೊಂದು ಯಾವ ಕಡೆ ಪ್ರಕಟವಾದರೂ ಅದರ ಮೌಲ್ಯ ಕಡಿಮೆಯಾಗುವುದಿಲ್ಲ. ಅಭ್ಯರ್ಥಿಯು ಅಧ್ಯಯನದಲ್ಲಿ ತೊಡಗಿದ್ದಾರೆಯೇ ಇಲ್ಲವೆ ಎಂದು
ತಿಳಿಯಲು ನಿಯತಕಾಲಿಕಗಳಲ್ಲಿ ಬಂದ ಬರಹಗಳನ್ನು ಅಂಕ ನೀಡಿಕೆಗಾಗಿ ಪರಿಗಣಿಸಲಾಗುತ್ತಿದ್ದು, ಇದೇ ಮಾನದಂಡವನ್ನು ಮುಕ್ತವಾಗಿಡಬೇಕು. ಇಷ್ಟಕ್ಕೂ ಮಾನ್ಯತೆ ಕೊಡುವ ಮಾನದಂಡವಾದರೂ ಏನೆಂಬುದೇ ಚರ್ಚಾರ್ಹವಾದುದು. ಈಗ ಮಾನ್ಯತೆಯನ್ನು ರದ್ದು ಮಾಡಲು ‘ಹೆಚ್ಚಿನ ಪತ್ರಿಕೆಗಳಿಗೆ ಸ್ವತಂತ್ರ ವೆಬ್‌ಸೈಟ್ ಇಲ್ಲ’ ಎಂಬ ಪ್ರಾಥಮಿಕ ಕಾರಣ ನೀಡಲಾಗಿದೆ. ಬರಹದ ಮೌಲಿಕತೆ ಏನಾದರೂ ಇರಲಿ ಪತ್ರಿಕೆಗಳಿಗೆ ವೆಬ್‌ಸೈಟ್ ಇರಬೇಕು ಮತ್ತು ಯುಜಿಸಿ ಮಾನ್ಯತೆ ನೀಡಿದ ಜರ್ನಲ್‌ಗಳಲ್ಲಿ ಪ್ರಕಟವಾಗಿದ್ದರೆ ಸಾಕು ಎಂಬ ಮಾನದಂಡವೇ ಅನುಚಿತ ಮತ್ತು ಹಾಸ್ಯಾಸ್ಪದ. ಸಂಶೋಧನೆ ಅಥವಾ ಅಧ್ಯಯನಕ್ಕೆ ಆಧಾರವಾಗಿ ಬರವಣಿಗೆಯ ಮೌಲಿಕತೆ ಮತ್ತು ನಿರಂತರತೆಯನ್ನು ಪರಿಗಣಿಸಬೇಕೇ ಹೊರತು ಪ್ರಕಟಣೆಯ
ಪತ್ರಿಕೆಯನ್ನಲ್ಲ.

ಇದೇ ರೀತಿ ಪುಸ್ತಕಗಳಿಗೆ ಐಎಸ್‌ಬಿಎನ್ ಕೋಡ್ ಇರಬೇಕೆಂದೂ ಒಂದು ಮಾನದಂಡವಿದೆ. ಕೋಡ್ ಇದ್ದರೆ ‘ಮೌಲಿಕತೆಯ ಕೋಡು!’ ಎಂಥ ವಿಪರ್ಯಾಸ! ಹಾಗಾದರೆ ಈ ಪದ್ಧತಿ ಬರುವುದಕ್ಕೆ ಮುಂಚೆ ಪ್ರಕಟಗೊಂಡ ನಮ್ಮ ಅನೇಕ ಹಿರಿಯ ಸಾಧಕರ ಪುಸ್ತಕಗಳು ಮೌಲಿಕವಲ್ಲವೇ? ಐಎಸ್‌ಬಿಎನ್ ಕೋಡ್ ಇಲ್ಲದ ಈಗಿನ ಎಲ್ಲ ಪ್ರಕಟಣೆಗಳೂ ಕಳಪೆಯೇ? ಒಂದು ಸಣ್ಣ ತಾಂತ್ರಿಕ ಅಂಶದ ಆಧಾರದಲ್ಲಿ ಮೌಲ್ಯ ನಿರ್ಣಯ ಮಾಡುವ ಈ ಯುಜಿಸಿ ಮಾನ್ಯತೆಯನ್ನೇ ನಾವು ಮೂಲಭೂತವಾಗಿ ವಿರೋಧಿಸಬೇಕು. ಸಂಘಟಿತ ಒತ್ತಾಯ ಮಾಡಬೇಕು. ಅಗತ್ಯವಾದರೆ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಮುಂದಾಗಬೇಕು.

–ಬರಗೂರು ರಾಮಚಂದ್ರಪ್ಪ, ಬೆಂಗಳೂರು
**

ಫ್ಲೆಕ್ಸ್‌ ತೆರವು: ವಿಸ್ತರಿಸಲಿ
ಹೈಕೋರ್ಟ್‌ ಚಾಟಿ ಬೀಸಿದ್ದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿಯು ಬೆಂಗಳೂರಿನಲ್ಲಿ ಅಕ್ರಮವಾಗಿ ಹಾಕಿದ್ದಸಾವಿರಾರು ಫ್ಲೆಕ್ಸ್‌ಗಳನ್ನು ಅರ್ಧದಿನದೊಳಗೆ ತೆರವುಗೊಳಿಸಿದೆ. ಇದರಿಂದ ನಗರದ ಸೌಂದರ್ಯವೂ ಹೆಚ್ಚಾಗಿದೆ. ಈ ಕೆಲಸ ನಿರಂತರವಾಗಿ ನಡೆಯಬೇಕು ಮತ್ತು ಅಕ್ರಮವಾಗಿ ಪ್ಲೆಕ್ಸ್ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಈ ಪ್ರಕ್ರಿಯೆ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದಎಲ್ಲ ನಗರ– ಪಟ್ಟಣಗಳಿಗೂ ವಿಸ್ತರಿಸಿದರೆ ಬೆಂಗಳೂರಿನಂತೆ ಇತರ ಊರುಗಳೂ ಸುಂದರವಾಗಿ ಕಾಣಬಹುದಲ್ಲವೇ?

–ಮಲ್ಲಿಕಾರ್ಜುನ ಕೆ.ಆರ್., ಶ್ರೀನಿವಾಸಪುರ
**

ಚಟುವಟಿಕೆ ದಿನವಾಗಲಿ
ಶಾಲೆಗಳಲ್ಲಿ ‘ಬ್ಯಾಗ್‌ರಹಿತ ದಿನ’ ಆಚರಿಸುವ ಚಿಂತನೆ ನಡೆದಿರುವುದು ಒಳ್ಳೆಯ ಬೆಳವಣಿಗೆ. ಈ ದಿನವನ್ನು ಸಾಂಸ್ಕೃತಿಕ ದಿನವಾಗಿ ಬಳಸಿಕೊಂಡರೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಬಹುದು.

ಪ್ರತಿ ಶನಿವಾರವನ್ನು ‘ಬ್ಯಾಗ್‌ ರಹಿತ’ ದಿನವಾಗಿ ಆಚರಿಸಿ, ಒಂದು ವಾರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಶಾಲೆಯ ಶಿಕ್ಷಕರೂ ಮಕ್ಕಳೊಂದಿಗೆ ಭಾಗವಹಿಸುವುದು, ಇನ್ನೊಂದು ವಾರ ಕ್ರೀಡಾ ದಿನ, ಮತ್ತೊಂದು ವಾರ ಯಾವುದಾದರೂ ಸಮಾಜ ಸೇವೆಯ ಕೆಲಸ, ಇನ್ನೊಂದು ವಾರ ‘ಕಸದಿಂದ ರಸ’ ಎಂದರೆ ಮಕ್ಕಳಲ್ಲಿನ ಕ್ರಿಯಾತ್ಮಕತೆಗೆ ಅವಕಾಶ ಕೊಡುವುದು, ಇನ್ನೊಂದು ವಾರ ಪಿಕ್ನಿಕ್... ಹೀಗೆಲ್ಲಾ ಆಚರಿಸಬಹುದು. ಇದರಿಂದ ಪ್ರತಿವಾರವೂ ಆ ದಿನಕ್ಕಾಗಿ ಮಕ್ಕಳು ಉತ್ಸಾಹದಿಂದ ಕಾಯುವಂತಾಗುತ್ತದೆ.

–ಸನ್ಮತಿ ಆಶಿಹಾಳ್, ಹೊಸನಗರ
**

ಹೊಟ್ಟೆ ಭಾರವಲ್ಲವೇ?
ಪೊಲೀಸರ ಟೋಪಿ ಬದಲಿಸಲು ಇಲಾಖೆಯು ಚಿಂತನೆನಡೆಸಿದೆಯಂತೆ (ಪ್ರ.ವಾ., ಆ. 5). ‘ಈಗಿರುವ ಟೋಪಿಯು ಹೆಚ್ಚು ಭಾರವಾಗಿದ್ದು, ಪೊಲೀಸರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಕೇಂದ್ರ ಆರೋಗ್ಯ ಇಲಾಖೆಯು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವುದರಿಂದ ಇಲಾಖೆಯು ಈ ಕ್ರಮಕ್ಕೆ ಮುಂದಾಗಿದೆಯಂತೆ!

ಹಲವು ಮಂದಿ ಪೊಲೀಸರಿಗೆ ಟೋಪಿಗಿಂತ ಹೆಚ್ಚಾಗಿ ಡೊಳ್ಳು ಹೊಟ್ಟೆಯೇ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದು ಕೇಂದ್ರ ಆರೋಗ್ಯ ಇಲಾಖೆಗೆ ಕಾಣಿಸಲಿಲ್ಲವೇ? ಅದಕ್ಕೇನೂ ಕ್ರಮ ಶಿಫಾರಸು ಮಾಡಿಲ್ಲವೇ? ಮಹಾನಿರ್ದೇಶಕರು ಏನೂ ಕ್ರಮ ಕೈಗೊಂಡಿಲ್ಲವೇ?

ಪೊಲೀಸ್ ಮಹಾನಿರ್ದೇಶಕರಲ್ಲಿ ನನ್ನದೊಂದು ಮನವಿ: ಕರ್ನಾಟಕ ಪೊಲೀಸರಿಗೆ ಅವರ ಟೋಪಿಯೇ ಹೆಗ್ಗುರುತು. ಆದ್ದರಿಂದ ಅದನ್ನು ಬದಲಿಸಬೇಡಿ, ಭಾರ ಕಡಿಮೆ ಮಾಡಿ. ಆದರೆ ವಿನ್ಯಾಸ ಹಾಗೆಯೇ ಇರಲಿ.
–ಗೋ.ರಾ. ಶ್ರೀನಿವಾಸ, ಚನ್ನಪಟ್ಟಣ
**

ವಾದ– ವಿವಾದ, ಹೋರಾಟ
‘ಒಗ್ಗೂಡಿ ಹೋರಾಡೋಣ’ ಎಂದು ಬಿ. ರಮೇಶ್ ಅವರು ‘ಹಿಂದಿ ಹೇರಿಕೆ’ಯ ವಿರುದ್ಧ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. (ವಾ.ವಾ., ಆ. 2). ನಮ್ಮ ಹೋರಾಟಗಳು ರಾಜ್ಯ– ರಾಜ್ಯಗಳ ನಡುವಿನ ಗಡಿ, ಭಾಷೆ, ನೀರಿನ ಹಂಚಿಕೆ, ಜಾತಿ–ಧರ್ಮಗಳಿಗೇ ಸೀಮಿತವಾಗಿ, ನಮ್ಮೊಳಗೇ ಭೇದ ಭಾವಗಳನ್ನು ಸೃಷ್ಟಿಸುತ್ತಾ ಹೋಗುತ್ತಿರುವುದು ನಿತ್ಯ ನಿರಂತರ ಸತ್ಯವಾಗಿದೆ.

ಹಿಂದಿ ಭಾಷೆಯನ್ನು ವಿರೋಧಿಸುವ ನಮ್ಮ ಜನರು ನಮ್ಮ ದೇಶದ್ದೇ ಅಲ್ಲದ ಇಂಗ್ಲಿಷ್ ಭಾಷೆಯ ಹೇರಿಕೆಯನ್ನು ಯಾಕೆ ವಿರೋಧಿಸುತ್ತಿಲ್ಲ? ಹಿಂದಿ ಫಲಕ ಕಂಡೊಡನೆ ಗಲಾಟೆ ಎಬ್ಬಿಸಿ ಸಾರ್ವಜನಿಕ ಸೊತ್ತುಗಳನ್ನು ಹಾಳು ಮಾಡುವ ನಮ್ಮ ಜನರು, ತಮ್ಮ ಮಕ್ಕಳನ್ನು ಯಾಕೆ ಕನ್ನಡ ಶಾಲೆಗಳಿಗೆ ಕಳುಹಿಸುವುದಿಲ್ಲ? ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ಧೋರಣೆಯನ್ನು ಯಾಕೆ ವಿರೋಧಿಸುತ್ತಿಲ್ಲ? ನಮ್ಮ ದೇಶದೊಳಗಿನ ಯಾವ ಜನಾಂಗವಾಗಲಿ, ಧರ್ಮವಾಗಲಿ, ಜಾತಿಯಾಗಲಿ, ಭಾಷೆಯಾಗಲಿ ಅದನ್ನು ದ್ವೇಷಿಸುವ ಬದಲು ಗೌರವಿಸೋಣ. ನಮ್ಮ ನಮ್ಮೊಳಗಿನ ಹೊಡೆದಾಟ, ಬಡಿದಾಟ, ಹಗೆತನ ಕಡಿಮೆ ಮಾಡಿ, ಭವ್ಯ ಭಾರತದ ನಿರ್ಮಾಣ ಮಾಡೋಣ.
–ಲಲಿತಾ, ಉಡುಪಿ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !