ಕಂದಮ್ಮನ ಕೈಗೆ ಕೂಸು

7

ಕಂದಮ್ಮನ ಕೈಗೆ ಕೂಸು

Published:
Updated:

72ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯಲ್ಲಿದ್ದ ನಮಗೆ, ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಹತ್ತನೇ ತರಗತಿಯ ಹೆಣ್ಣುಮಗಳು ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಸುದ್ದಿ ದಿಗ್ಭ್ರಮೆ ಮೂಡಿಸಿತು. ಇಂಥ ಘಟನೆಗಳನ್ನು ತಡೆಯಲು ಸರ್ಕಾರವು ಕಾಯ್ದೆ, ಕಾನೂನುಗಳ ಮೂಲಕ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೂ ‘ಇವೆಲ್ಲ ನಮಗಲ್ಲ’ ಎಂಬಂತೆ ಪೋಷಕರು, ಮಕ್ಕಳಿಗೆ ಬಾಲ್ಯದಲ್ಲೇ ವಿವಾಹದ ಸಂಕೋಲೆಯನ್ನು ತೊಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಮಕ್ಕಳಿಗೆ ಮದುವೆ ಮಾಡಿ ‘ತಮ್ಮ ಜವಾಬ್ದಾರಿಯನ್ನು ಮುಗಿಸಿದೆವು’ ಎಂದು ಪೋಷಕರು ಭಾವಿಸಿದರೂ ಆ ಮಗುವಿನ, ಆಕೆ ಜನ್ಮನೀಡುವ ಮಕ್ಕಳ ಭವಿಷ್ಯ ಮಣ್ಣಾಗಿಸುತ್ತಿರುವುದಂತೂ ಸುಳ್ಳಲ್ಲ. ಕರ್ನಾಟಕದಲ್ಲಿ ಶೇ 21ರಷ್ಟು ಮಹಿಳೆಯರು 18 ವರ್ಷಕ್ಕಿಂತ ಮೊದಲೇ ವಿವಾಹದ ಬಂಧನಕ್ಕೆ ಒಳಪಟ್ಟವರಾಗಿದ್ದು, ಶೇ 8ರಷ್ಟು ಮಹಿಳೆಯರು 15 ರಿಂದ 19 ವರ್ಷದೊಳಗೆ ಗರ್ಭಿಣಿಯರಾಗಿರುವುದನ್ನು ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015- 16’ರ ವರದಿಯು ಬಯಲಿಗೆಳೆದಿದೆ. ಅದರಲ್ಲೂ, ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿರುವುದರಿಂದ (ಶೇ 35.9) ಹಲವು ಹಿರಿಮೆ- ಗರಿಮೆಗಳನ್ನು ಮುಡಿಗೇರಿಸಿಕೊಂಡಿರುವ ರಾಜ್ಯವು ತಲೆತಗ್ಗಿಸುವಂತಾಗಿದೆ.

ದೇಶದಲ್ಲಿ ಹೆಣ್ಣುಮಕ್ಕಳು ಘನತೆಯಿಂದ ಬದುಕನ್ನು ರೂಪಿಸಿಕೊಳ್ಳಬೇಕಾದರೆ, ಆರೋಗ್ಯದಿಂದ ಬದುಕಬೇಕಾದರೆ ಇಂತಹ ಸಾಮಾಜಿಕ ಕಟ್ಟಳೆಗಳಿಂದ ಮುಕ್ತಿ ದೊರೆಯಬೇಕು. ಕಾನೂನನ್ನು ರೂಪಿಸಿ ಅನುಷ್ಠಾನಗೊಳಿಸುವ ಹೊಣೆ ಹೊಂದಿರುವ ಸರ್ಕಾರವು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಮಕ್ಕಳ ಭವಿಷ್ಯವನ್ನು ರೂಪಿಸುವ ಪೋಷಕರು ಜಾಗೃತಗೊಳ್ಳಬೇಕು. ಶಾಲೆಗಳು, ಪೊಲೀಸ್ ಇಲಾಖೆ ಸದಾ ಎಚ್ಚರದಿಂದಿರಬೇಕು. ಒಟ್ಟಾರೆ, ಸಮಾಜವು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಹೊಂದಿ, ಹೆಣ್ಣುಮಕ್ಕಳ ಬಾಲ್ಯವನ್ನು ಸಹನೀಯಗೊಳಿಸಬೇಕು.

–ಆನಂದ ಎನ್.ಎಲ್., ಅಜ್ಜಂಪುರ

 

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !