ಸಾಲ ಮನ್ನಾ ನಿಯಮಗಳು ನ್ಯಾಯೋಚಿತವಲ್ಲ!

7

ಸಾಲ ಮನ್ನಾ ನಿಯಮಗಳು ನ್ಯಾಯೋಚಿತವಲ್ಲ!

Published:
Updated:

ರೈತರು ಸಹಕಾರ ಸಂಘ ಅಥವಾ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಪಡೆದ ಸಾಲವನ್ನು ಮನ್ನಾ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರೂಪಿಸಿರುವ ಕೆಲವು ನಿಯಮಗಳು ನ್ಯಾಯೋಚಿತವಾಗಿಲ್ಲ.

ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಯ ಪ್ರಕಾರ, ‘2018ರ ಜುಲೈ 10ರಿಂದ ಅನ್ವಯವಾಗುವಂತೆ, ರೈತ ಕುಟುಂಬದ ಯಾವುದೇ ಸದಸ್ಯನು ಸರ್ಕಾರಿ ಅಥವಾ ಇತರ ಕ್ಷೇತ್ರದಲ್ಲಿ ನೌಕರನಾಗಿದ್ದು, ಮಾಸಿಕ ₹ 20 ಸಾವಿರ ಅಥವಾ ಹೆಚ್ಚು ವೇತನ ಅಥವಾ ಪಿಂಚಣಿ ಪಡೆಯುತ್ತಿದ್ದರೆ, ಅಂತಹ ರೈತ ಕುಟುಂಬದ ಯಾವ ಸದಸ್ಯನೂ ಸಾಲಮನ್ನಾ ಸೌಲಭ್ಯಕ್ಕೆ ಅರ್ಹನಲ್ಲ’ ಎಂಬ ಷರತ್ತು ವಿಧಿಸಲಾಗಿದೆ.

ಸರ್ಕಾರಿ ನೌಕರರ ವೇತನ– ಪಿಂಚಣಿಯು ಕಳೆದ ಜುಲೈ ತಿಂಗಳಿಂದ ಪರಿಷ್ಕರಣೆಯಾಗಿದೆ. ಇದಾದ ಬಳಿಕ ಬಹುತೇಕ ‘ಗ್ರೂಪ್ ಡಿ’ ನೌಕರರು ₹ 20 ಸಾವಿರದಿಂದ ₹ 25 ಸಾವಿರ ವೇತನ/ ಪಿಂಚಣಿ ಪಡೆಯುತ್ತಿದ್ದಾರೆ. ಈ ವರ್ಗದ ನೌಕರರ ಕುಟುಂಬದ ಸದಸ್ಯರು ಕೆಲವು ಕಡೆ ಕೃಷಿಯಲ್ಲಿ ತೊಡಗಿ, ಬೆಳೆಸಾಲ ಪಡೆದು ಕಾರಣಾಂತರಗಳಿಂದ ಸುಸ್ತಿದಾರರಾಗಿದ್ದಾರೆ. ಇಂಥವರನ್ನು ಸಾಲಮನ್ನಾ ಅರ್ಹತೆಯಿಂದ ಹೊರಗಿಟ್ಟಿರುವುದು ಸಮರ್ಥನೀಯವಲ್ಲ.

ಸರ್ಕಾರಿ ಉದ್ಯೋಗ ಪಡೆಯಲು ಒಬಿಸಿ ವರ್ಗಗಳಿಗೆ ₹ 8 ಲಕ್ಷದವರೆಗೆ ಕೆನೆಪದರ ಆದಾಯ ಮಿತಿಯನ್ನು ನಿಗದಿಪಡಿಸಿರುವ ಸರ್ಕಾರವು ಮತ್ತೊಂದೆಡೆ ₹ 20 ಸಾವಿರ ವೇತನ/ ಪಿಂಚಣಿ ಪಡೆಯುವವರು ಸಾಲ ಮನ್ನಾಕ್ಕೆ ಅರ್ಹರಲ್ಲ ಎಂಬ ಷರತ್ತು ವಿಧಿಸುವುದು ಎಷ್ಟು ಸರಿ?

ಸರ್ಕಾರ ಈ ಷರತ್ತನ್ನು ರದ್ದುಪಡಿಸಬೇಕು ಅಥವಾ ನಿಗದಿಪಡಿಸಿದ ವೇತನ ಅಥವಾ ಪಿಂಚಣಿಯ ಮಿತಿಯನ್ನು ಹೆಚ್ಚಿಸಬೇಕು.

–ವೈ.ಯಮುನೇಶ್, ಹೊಸಪೇಟೆ

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !