ಹೆಸರು ಬದಲಿಸಬೇಡಿ

7

ಹೆಸರು ಬದಲಿಸಬೇಡಿ

Published:
Updated:

‘ಮೈಸೂರು ವಿಶ್ವವಿದ್ಯಾಲಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ (ಪ್ರ.ವಾ., ಅ. 11). ಇದು ದುಡುಕಿನ ನಿರ್ಧಾರವಾಗಿದ್ದು, ಯಾವ ಕಾರಣಕ್ಕೂ ಮೈಸೂರು ವಿಶ್ವವಿದ್ಯಾಲಯದ ಹೆಸರನ್ನು ಬದಲಿಸಬಾರದು.

ವಿಶ್ವವಿದ್ಯಾಲಯದ ಸ್ಥಾಪಕರಾದ ಕೃಷ್ಣರಾಜ ಒಡೆಯರ್‌ ಅವರು ಈ ನಾಡಿಗೆ ಸಲ್ಲಿಸಿರುವ ಸೇವೆ ಅಪಾರವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತನ್ನದೇ ಆದ ಒಂದು ವಿಶ್ವವಿದ್ಯಾಲಯವನ್ನು ಹೊಂದಬೇಕೆಂಬ ಇಚ್ಛೆಯಿಂದ, ಮದ್ರಾಸ್‌ ವಿಶ್ವವಿದ್ಯಾಲಯದಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮತ್ತು ಮೈಸೂರಿನ ಮಹಾರಾಜ ಕಾಲೇಜುಗಳನ್ನು ಬೇರ್ಪಡಿಸಿ ಹುಟ್ಟಿಕೊಂಡ ಈ ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ವೈಶಿಷ್ಟ್ಯ ಇದೆ. ‘ಈ ನಾಡಿನ ಪ್ರಜೆಗಳು ಉನ್ನತ ಶಿಕ್ಷಣ ಪಡೆಯಲು ಇನ್ನು ನೆರೆರಾಜ್ಯಕ್ಕೆ ಹೋಗಬೇಕಾಗಿಲ್ಲ’ ಎಂದು ಜನರಲ್ಲಿ ಭರವಸೆ ಮೂಡಿಸಿದ್ದ ವಿಶ್ವವಿದ್ಯಾಲಯವಿದು. ಮೈಸೂರು ಆಗ ಒಂದು ನಗರದ ಹೆಸರಷ್ಟೇ ಆಗಿರಲಿಲ್ಲ. ಇಡೀ ರಾಜ್ಯದ ಹೆಸರಾಗಿತ್ತು. ಈ ನಾಡಿನ ಅಸ್ಮಿತೆಯನ್ನು ಸಾರುವ ರೀತಿಯಲ್ಲಿ ನಾಲ್ವಡಿಯವರು ಆಗ ತಾವು ಪ್ರಾರಂಭಿಸಿದ (1916) ವಿಶ್ವವಿದ್ಯಾಲಯಕ್ಕೆ ‘ಮೈಸೂರು ವಿಶ್ವವಿದ್ಯಾಲಯ’ ಎಂದು ಹೆಸರು ಇಟ್ಟಿದ್ದರು. ಮೈಸೂರಿನ ಮೇಲೆ ಅವರಿಗೆ ಅಷ್ಟು ಪ್ರೇಮವಿತ್ತು.

ಮೈಸೂರಿನ ಪೇಟ, ಕೆಆರ್‌ಎಸ್‌ ಹಾಗೂ ಮಲ್ಲಿಗೆಗಳು ಮೈಸೂರನ್ನು ಹೇಗೆ ಪ್ರಸಿದ್ಧಗೊಳಿಸಿವೆಯೋ, ಹೇಗೆಯೇ ರಾಜ್ಯದ ಅತ್ಯಂತ ಹಳೆಯ ವಿಶ್ವವಿದ್ಯಾಲಯದ ಕಾರಣಕ್ಕೂ ಮೈಸೂರು ಪ್ರಸಿದ್ಧವಾಗಿದೆ. ಇಲ್ಲಿ ಪ್ರಾರಂಭವಾದ ಪ್ರಚಾರೋಪನ್ಯಾಸಮಾಲೆಯ ಅಂಗೈಯಗಲದ ನಾಲ್ಕಾಣೆ ಪುಸ್ತಕಗಳು ಇಂಗ್ಲೆಂಡಿನ ಆಕ್ಸ್‌ಫರ್ಡ್‌ನಲ್ಲೂ ‘Mysore Experiment’ ಎಂದು ಚರ್ಚೆಯಾಗಿ ಖ್ಯಾತವಾಯಿತು.

ನಾಲ್ವಡಿಯವರ ಹೆಸರನ್ನು ಇನ್ನಾವುದಾದರೂ ಮಹತ್ವದ ಸಂಸ್ಥೆಗೋ, ಹೊಸದಾಗಿ ಪ್ರಾರಂಭವಾಗುವ ವಿಶ್ವವಿದ್ಯಾಲಯಕ್ಕೋ ಇಟ್ಟು ಕೃತಜ್ಞತೆಯನ್ನು ತೋರಿಸಬಹುದು. ಹಾಗೆ ನೋಡಿದರೆ ವ್ಯಕ್ತಿಗಳ ಹೆಸರನ್ನು ವಿಶ್ವವಿದ್ಯಾಲಯಗಳಿಗೆ ಇಡುವ ಪರಿಪಾಟವೇ ಅಷ್ಟು ಸರಿಯಲ್ಲವೇನೋ!

ಡಾ. ಆರ್. ಲಕ್ಷ್ಮೀನಾರಾಯಣ, ಬೆಂಗಳೂರು

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !