ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#MeToo : ಸೂಕ್ಷ್ಮತೆಯ ಪಾಠ

Last Updated 26 ಅಕ್ಟೋಬರ್ 2018, 20:01 IST
ಅಕ್ಷರ ಗಾತ್ರ

ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವ ಮಹಿಳೆಯ ಚಾರಿತ್ರ್ಯವಧೆ ಮಾಡುವುದು, ಆಕೆಯನ್ನು ಬೆಂಬಲಿಸುವವರ ತೇಜೋವಧೆ ನಡೆಸುವುದು ಸಹಜ ಎನಿಸುವಷ್ಟು ಸಾಮಾನ್ಯವಾಗಿದೆ. ಶ್ರುತಿ ಹರಿಹರನ್‌ ಹಾಗೂ ಅವರನ್ನು ಬೆಂಬಲಿಸಿದವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಟೀಕೆಗಳೇ ಇದಕ್ಕೆ ನಿದರ್ಶನ. ಮಹಿಳೆಯರು # ಮೀ ಟೂ ಅಭಿಯಾನದ ಮೂಲಕ ವ್ಯಕ್ತಪಡಿಸುತ್ತಿರುವ ಬಿಚ್ಚುನುಡಿಗಳಿಗೆ ಪುರುಷಾಧಿಪತ್ಯದ ಮನಸ್ಸುಗಳು ಕೆಂಡಾಮಂಡಲವಾಗುತ್ತಿವೆ.

ತಲತಲಾಂತರದಿಂದ ಮೌನವಾಗಿರಿಸಿದ್ದ ಮಹಿಳೆಯರ ಧ್ವನಿ ಈಗ ಹೊರಹೊಮ್ಮುತ್ತಿದೆ ಎಂದಾಗ, ಸಮಾಜ ಅದನ್ನು ತಾಳ್ಮೆಯಿಂದ ಆಲಿಸಬೇಕು. ದೇಶದ ಅರ್ಧದಷ್ಟಿರುವ ಮಹಿಳಾ ಸಮುದಾಯವು ಕೃಷಿ, ಮನೆಗೆಲಸ, ಕೈಗಾರಿಕೆ, ಸಿನಿಮಾ, ಶಿಕ್ಷಣ, ಆರೋಗ್ಯ, ಸಾರಿಗೆ... ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ದುಡಿಯುತ್ತಾ ಸಮಾನತೆಯತ್ತ ಹೆಜ್ಜೆ ಹಾಕುತ್ತಿರುವಾಗ, ಲೈಂಗಿಕ ಕಿರುಕುಳ ಎಂಬ ಅಸ್ತ್ರವನ್ನು ಬಳಸಿ ಪುರುಷಾಹಂಕಾರ ಅವಳನ್ನು ಕುಗ್ಗಿಸುವ ಯತ್ನದಲ್ಲಿದೆ.

ದೌರ್ಜನ್ಯಕ್ಕೊಳಗಾದ ಹೆಣ್ಣಿನತ್ತ ಸಾವಿರ ಪ್ರಶ್ನೆಗಳನ್ನು ಎಸೆಯುವ ಸಮಾಜ, ಆರೋಪಿಯ ಪರ ಮರುಕ ವ್ಯಕ್ತಪಡಿಸುತ್ತದೆ. ಉದ್ಯೋಗ ಭದ್ರತೆಯಿಲ್ಲದೆ ದುಡಿಯುತ್ತಿರುವ ಬಹುಸಂಖ್ಯಾತ ಮಹಿಳೆಯರು ಕೆಲಸದ ಕ್ಷೇತ್ರಗಳಲ್ಲಿ ದಿನನಿತ್ಯ ಲೈಂಗಿಕ ಕಿರುಕುಳಕ್ಕೆ ತುತ್ತಾಗುತ್ತಿದ್ದರೂ ಅದರ ವಿರುದ್ಧ ಧ್ವನಿ ಎತ್ತುವ ಸಾಮರ್ಥ್ಯವನ್ನು ಈ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ. ದೂರಿತ್ತೊಡನೆಯೇ ಅವಳು ಕೆಲಸ ಕಳೆದುಕೊಳ್ಳುವ ಸ್ಥಿತಿ ನಮ್ಮಲ್ಲಿದೆ.

ಇಂತಹ ವ್ಯವಸ್ಥೆಗೆ ಸವಾಲೊಡ್ಡಿರುವ # ಮೀ ಟೂ ಚಳವಳಿಯು ಮಹಿಳೆಯರ ಆತ್ಮಸ್ಥೈರ್ಯವನ್ನು ಹೆಚ್ಚಿಸಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾ ಮಹಿಳೆಯರ ವಿಷಯದಲ್ಲಿ ಗಾಢನಿದ್ರೆಯಲ್ಲಿದ್ದ ವ್ಯವಸ್ಥೆಯನ್ನು ಚಿವುಟಿ ಎಚ್ಚರಿಸಿದೆ. ಯಾರು ಏನೇ ಅಪಸ್ವರ ನುಡಿಯಲಿ, ಸಂವೇದನಾರಹಿತವಾದ ಸಮಾಜವನ್ನು ಸೂಕ್ಷ್ಮಗೊಳಿಸುವ ಅಭಿಯಾನ ಇದಾಗಿದೆ.

-ಜ್ಯೋತಿ ಎ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT