ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಸರ್ಕಾರ ನಷ್ಟ ಭರಿಸಬೇಕೆ?

Last Updated 16 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಕೊಡಗಿನಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟವನ್ನು ಭರಿಸಲು ತಮಿಳುನಾಡು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಸರ್ಕಾರಕ್ಕೆ ಪತ್ರ ಬರೆದಿರುವುದು ವರದಿಯಾಗಿದೆ (ಪ್ರ.ವಾ., ನ.16). ಭೈರಪ್ಪ ಅವರ ವಾದವು ಕಾವೇರಿ ಕಣಿವೆಯ ವ್ಯಾಪ್ತಿಯಲ್ಲಿನ ಜನರಿಗೆ ತಕ್ಷಣಕ್ಕೆ ಸರಿ ಎನಿಸಿದರೂ ಮುಂದಿನ ದಿನಗಳಲ್ಲಿ ಇದು ನಮಗೇ ಮಾರಕವಾಗುವುದು ಖಚಿತ.

ಏನೂ ಇಲ್ಲದೆಯೇ ಕಾವೇರಿ ನದಿ ನೀರಿಗೆ ತಮಿಳುನಾಡು ತನ್ನ ಹಕ್ಕೊತ್ತಾಯವನ್ನು ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಗಳ ಮುಂದೆ ಮಂಡಿಸುತ್ತಿದೆ. ಕೊಡಗಿನ ಪುನರ್‌ನಿರ್ಮಾಣಕ್ಕೆ ಹಾಗೂ ಕಾಡು ಬೆಳೆಸುವುದಕ್ಕೆ ತಮಿಳುನಾಡಿನಿಂದ ಹಣವನ್ನು ಪಡೆದಲ್ಲಿ, ನಮ್ಮ ಕಾವೇರಿ ನದಿಯ ಹಕ್ಕನ್ನು ಸಂಪೂರ್ಣವಾಗಿ ಅವರಿಗೇ ಬಿಟ್ಟುಕೊಡಬೇಕಾಗಬಹುದು. ಇದರಿಂದ ಮುಂದಿನ ದಿನಗಳಲ್ಲಿ ‘ಕಾವೇರಿ ನಮ್ಮದು ಕೊಡಗು ನಮ್ಮದು’ ಎಂಬ ಘೋಷಣೆಯು ಕೊಡಗಿಗಿಂತ ಗಟ್ಟಿಯಾಗಿ ತಮಿಳುನಾಡಿನಲ್ಲಿ ಮೊಳಗುವುದು ಖಚಿತ. ತಮಿಳುನಾಡು ಸರ್ಕಾರವು ಕೊಡಗಿನ ಮರು ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿ ಕೊಟ್ಟಲ್ಲಿ, ಅಲ್ಲಿನ ಅಭಿವೃದ್ಧಿಯ ಲಾಭವನ್ನು ಪಡೆಯಲೂ ಅದು ಮುಂದಾಗದೆ ಇರದು.

ಈ ಹಿನ್ನೆಲೆಯಲ್ಲಿ ನೋಡಿದರೆ, ಭೈರಪ್ಪನವರ ಸಲಹೆಯನ್ನು ಪರಿಗಣಿಸುವುದು ಎಷ್ಟು ಸೂಕ್ತ ಎಂಬುದನ್ನು ವಿಷಯ ತಜ್ಞರು, ಜನಪ್ರತಿನಿಧಿಗಳು ಹಾಗೂ ಬುದ್ಧಿಜೀವಿಗಳು ಚರ್ಚಿಸುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ತಮಿಳುನಾಡು ಸರ್ಕಾರಕ್ಕೆ ಹಣಕ್ಕಾಗಿ ಕೋರಿಕೆ ಸಲ್ಲಿಸುವುದು ಬೇಡ, ಪ್ರಕೃತಿ ವಿಕೋಪಕ್ಕೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ನಿಯಮಾನುಸಾರ ಅದು ತನ್ನ ಕಾರ್ಯವನ್ನು ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸುವುದು ನಮ್ಮ ಹಕ್ಕು. ಅದನ್ನು ಮಾಡುವುದೇ ಸೂಕ್ತ. ಕೊಡಗಿನ ಪುನರ್ ನಿರ್ಮಾಣಕ್ಕಾಗಿ ಹಣ ಹೊಂದಿಸುವುದು ಕಾವೇರಿ ಕಣಿವೆಯ ಮಕ್ಕಳಿಗೆ ಕಷ್ಟದ ಕೆಲಸವೇನಲ್ಲ, ಆ ನಿಟ್ಟಿನಲ್ಲಿ ಯೋಜನೆ ಆಗಲಿ.

-ಮಿರ್ಲೆಚಂದ್ರಶೇಖರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT