ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗಾಡಿ, ಹಿಂಗಾಡಿ ಕನ್ನಂಬಾಡಿ…

Last Updated 18 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಮಂಡ್ಯ- ಮೈಸೂರು ಜಿಲ್ಲೆಗಳ ಹೆಮ್ಮೆಯ ಪ್ರತೀಕ, ಹಲವು ನಗರ- ಗ್ರಾಮಗಳ ಜನರ ಕುಡಿಯುವ ನೀರಿನ ಮೂಲವೂ ಆಗಿರುವ ಕನ್ನಂಬಾಡಿ ಅಣೆಕಟ್ಟೆಯ (ಕೆಆರ್‌ಎಸ್‌) ಪಕ್ಕದ ಬೃಂದಾವನ ಉದ್ಯಾನದಲ್ಲಿ 125 ಅಡಿ ಎತ್ತರದ ‘ಕಾವೇರಿ’ ಪ್ರತಿಮೆ ಸ್ಥಾಪನೆ ಮತ್ತು ಸುತ್ತಲ ಜಮೀನಿನಲ್ಲಿ ಡಿಸ್ನಿಲ್ಯಾಂಡ್ ಮಾದರಿಯ ಮನರಂಜನಾ ಪಾರ್ಕ್ ನಿರ್ಮಿಸಲು ಚಿಂತಿಸುತ್ತಿರುವ ರಾಜ್ಯ ಸರ್ಕಾರದ ಮನಸ್ಥಿತಿ ಜೀವವಿರೋಧಿ, ಜನವಿರೋಧಿ ಮತ್ತು ನಮ್ಮ ಪರಂಪರೆಯನ್ನು ನಾಶಪಡಿಸುವಂಥದ್ದಾಗಿದೆ.

ಕಾವೇರಿಯ ಪ್ರತಿಮೆಯನ್ನು ಸ್ಥಾಪಿಸಲು ಹೊರಟಿರುವುದು ಮೊದಲನೆಯದಾಗಿ ಹಣದ ಅಪವ್ಯಯ. ಎರಡನೆಯದಾಗಿ ಮಾನವ ಪರಿಶ್ರಮದ ವೃಥಾ ವ್ಯರ್ಥ. ಯಾರೋ ಬಂಡವಾಳಶಾಹಿಗೆ ಇದರಿಂದ ಅನುಕೂಲವಾಗುವುದಲ್ಲದೆ ಬೇರೇನೂ ಲಾಭವಿಲ್ಲ. ನಮ್ಮ ದೃಷ್ಟಿ ಮಾನವ ಕೇಂದ್ರಿತವಾಗಬೇಕೇ ಹೊರತು ಪ್ರತಿಮೆ ಕೇಂದ್ರಿತವಾಗಬಾರದು.

ಜೊತೆಗೆ ಈ ಯೋಜನೆಗಾಗಿ ಕನ್ನಂಬಾಡಿಯ ಸುತ್ತಮುತ್ತಲ 400 ಎಕರೆ ಸಂಪದ್ಭರಿತ ಭೂಮಿಯನ್ನು ಹಾಳುಗೆಡವಿ, ‘ಮನೆಗೆ ಮಾರಿ ಪರರಿಗೆ ಉಪಕಾರಿ’ ಎಂಬ ಗಾದೆಗೆ ಪೂರಕವಾಗಿ ಕೆಲಸ ಮಾಡಲೇನಾದರೂ ನಮ್ಮ ಸರ್ಕಾರ ಮನಸ್ಸು ಮಾಡಿದೆಯೊ? ನೆನಪಿರಲಿ, ನಾವು ಮಂಗಳದ ಅಂಗಳಕ್ಕೆ ಹೋದರೂ ಹಸಿದಾಗ ಉಣ್ಣಬೇಕಾದುದು ಈ ಭೂಮಿಯ ಅಂಗಳದಲ್ಲಿ ಬೆಳೆದ ಬೇಳೆಯನ್ನಲ್ಲದೆ ಅನ್ಯತ್ರ ಅಲ್ಲ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಒಬ್ಬರಿಗೊಬ್ಬರು ತಳ್ಳಾಡಿಕೊಂಡೇ ಬರುತ್ತಿದೆ. ಆ ತಳ್ಳಾಟದಲ್ಲಿ ‘ಹಂಗಾಡಿ ಹಿಂಗಾಡಿ ಕನ್ನಂಬಾಡಿ ಉಂಟುಸಿದ್ರು’ ಅನ್ನುವಂತಾಗಬಾರದು ಅಷ್ಟೇ.

ಹೊರೆಯಾಲ ದೊರೆಸ್ವಾಮಿ, ಮೈಸೂರು

***

ಪ್ರತಿಮೆ ಬೇಡ, ವಿದ್ಯುತ್‌ ಉತ್ಪಾದಿಸಿ

ಕೆಆರ್‌ಎಸ್‌ನಿಂದ ವಿವಿಧ ತಾಲ್ಲೂಕುಗಳ ಕೃಷಿ ಜಮೀನುಗಳಿಗೆ ನೀರು ಹರಿಸುವ ಕಾಲುವೆಯ ನೀರಿನಲ್ಲಿ ಗಮನಾರ್ಹ ಪ್ರಮಾಣದ ನೀರು ಸೂರ್ಯನ ಶಾಖದಿಂದಾಗಿ ಆವಿಯಾಗಿ ಹೋಗುತ್ತಿದೆ. ಇದನ್ನು ತಡೆಯಲು ಸರ್ಕಾರ ಯೋಜನೆ ರೂಪಿಸಬೇಕು. ರಾಜ್ಯವನ್ನು ವಿದ್ಯುತ್‌ ಬರ ಕಾಡುತ್ತಿದೆ. ರಾಜ್ಯದ ಆಲಮಟ್ಟಿ ಬಳಿ ಕಾಲುವೆಯ ಮೇಲೆ 700 ಮೀಟರ್ ಉದ್ದಕ್ಕೆ ಸೌರ ಫಲಕಗಳನ್ನು ಅಳವಡಿಸಿ ಒಂದು ವರ್ಷದಲ್ಲಿ 14 ಲಕ್ಷ ಯೂನಿಟ್ ಸೌರವಿದ್ಯುತ್ ಉತ್ಪಾದಿಸುವಲ್ಲಿ ಯಶಸ್ಸು ಕಂಡಿದ್ದೇವೆ. ಅದೇ ಪ್ರಕಾರ ಇಲ್ಲಿಯೂ ವಿದ್ಯುತ್‌ ಉತ್ಪಾದಿಸಲು ಅವಕಾಶವಿದೆ.

ಸಾವಿರಾರು ಕೋಟಿ ರೂಪಾಯಿ ವೆಚ್ಚಮಾಡಿ ಕನ್ನಂಬಾಡಿ ಅಣೆಕಟ್ಟೆಯ ಬಳಿ ಕಾವೇರಿಯ ಪ್ರತಿಮೆ ಸ್ಥಾಪಿಸುವ ಬದಲು ಅದೇ ಹಣವನ್ನು ಬಳಸಿ ವಿದ್ಯುತ್ ಉತ್ಪಾದಿಸಬಹುದಲ್ಲವೇ? ಇದರಿಂದ ಕಾಲುವೆಯ ನೀರು ಆವಿಯಾಗಿ ಹೋಗುವುದನ್ನು ತಪ್ಪಿಸಿ ಕೃಷಿಗೆ ಹೆಚ್ಚಿನ ನೀರು ಒದಗಿಸಲು ಸಾಧ್ಯವಾಗಬಹುದು.

ಬಸವರಾಜ ಹುಡೇದಗಡ್ಡಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT