ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರಿಗೆ ಕಠಿಣ ಶಿಕ್ಷೆಯಾಗಲಿ

Last Updated 26 ನವೆಂಬರ್ 2018, 20:00 IST
ಅಕ್ಷರ ಗಾತ್ರ

‘ಮುಖ್ಯ ಎಂಜಿನಿಯರ್ ಹುದ್ದೆಗೆ ₹ 10 ಕೋಟಿ ಕಪ್ಪ!’ (ಪ್ರ.ವಾ., ಒಳನೋಟ, ನ. 25) ವರದಿಯು ಸರ್ಕಾರಿ ಆಯಕಟ್ಟಿನ ಹುದ್ದೆಗಳಲ್ಲಿ ಮೇಯುವ ಸಮೃದ್ಧ ‘ಹಣಗಾವಲಿ’ನ ನೋಟವನ್ನು ತೆರೆದಿಟ್ಟಿದೆ. ಬಹುತೇಕ ಸರ್ಕಾರಿ ಇಲಾಖೆಗಳಲ್ಲಿನ ಕರ್ಮಕಾಂಡ ಇದು. ಓದುತ್ತಿದ್ದಂತೆ ಭ್ರಷ್ಟತೆಯ ಪರಾಕಾಷ್ಠೆಗೆ ಎಂಥವರ ರಕ್ತವೂ ಕುದಿಯಬೇಕು. ಪ್ರಜೆಗಳು ಪಾವತಿಸುವ ತೆರಿಗೆಯ ಹಣ ರಾಜ್ಯದ ಬೊಕ್ಕಸದಿಂದ ಜನಹಿತದ ಹಣೆಪಟ್ಟಿ ಹಚ್ಚಿಕೊಂಡ ಕಾಮಗಾರಿಗಳ ಹೆಸರಿನಲ್ಲಿ ಪೋಲಾಗುವ ಪರಿ, ಆ ಮೂಲಕ ಜನಪ್ರತಿನಿಧಿಗಳ, ಸರ್ಕಾರಿ ಅಧಿಕಾರಿಗಳ, ಗುತ್ತಿಗೆದಾರರ ಖಜಾನೆ ತುಂಬುವಂತಹ ಕ್ರಮಬದ್ಧ ಕುಟಿಲತೆಗೆ ಯಾವ ಪಾರಿತೋಷಕ ಕೊಟ್ಟರೂ ಕಡಿಮೆಯೇ. ಇಂಥಲ್ಲಿ ಕಾಮಗಾರಿಗಳ ಅನುಷ್ಠಾನದೊಂದಿಗೆ ಅವುಗಳ ಗುಣಮಟ್ಟದ ಫಲಿತಾಂಶವನ್ನು ನಾವು ನಿರೀಕ್ಷಿಸಲು ಸಾಧ್ಯವೇ? ಹಣ ನುಂಗುವಲ್ಲಿ ವ್ಯವಸ್ಥಿತವಾಗಿ ರೂಪುಗೊಂಡ ನಾಚಿಕೆಗೇಡಿನ ಒಳಹಾದಿಗಳು ಹೇಸಿಗೆ ಹುಟ್ಟಿಸುವಂತಿವೆ. ಭ್ರಷ್ಟರ ಈ ಜಾಲವನ್ನು ವಿವರಿಸಲು ಶಬ್ದಗಳೇ ನಾಚಬೇಕು.

‘ನೀ ನನಗಾದರೆ ನಾ ನಿನಗೆ’ ಎನ್ನುವ ಭ್ರಷ್ಟತತ್ವ ರಕ್ಷಾಕವಚವಾಗಿರುವಾಗ, ಬೇಲಿಯೇ ಎದ್ದು ಹೊಲ ಮೇಯುವಂತಹ ರೀತಿಯ ನಾಯಕರು, ಅಧಿಕಾರಿಗಳು, ಗುತ್ತಿಗೆದಾರರು, ದಲ್ಲಾಳಿಗಳು, ಬಾಲಬಡುಕರು ಇರುವಾಗ ಜನಸಾಮಾನ್ಯರು ಏನು ಮಾಡಲು ಸಾಧ್ಯ? ಅವರ ಅಧಿಕಾರ, ಅಂತಸ್ತು, ಹಣದ ದರ್ಪಗಳು ಎಲ್ಲದರ ಬಾಯಿ ಮುಚ್ಚಿಸುತ್ತವೆ. ತಪ್ಪಿತಸ್ಥರು ಯಾರೇ ಇರಲಿ, ನಿಷ್ಠುರವಾಗಿ, ನಿರ್ದಾಕ್ಷಿಣ್ಯವಾಗಿ, ನ್ಯಾಯಯುತವಾಗಿ ಅಂತಹವರಿಗೆ ಕಠಿಣ ಶಿಕ್ಷೆಯಾದಲ್ಲಿ ಮಾತ್ರ ಇಂತಹ ಮಾಫಿಯಾಕ್ಕೆ ಸ್ವಲ್ಪಮಟ್ಟಿನ ಕಡಿವಾಣ ಹಾಕಬಹುದು. ಆದರೆ ಕಾನೂನು ಮಾಡುವವರೇ ಅದರಡಿಯಲ್ಲಿ ನುಸುಳಿ ರಕ್ಷಣೆ ಪಡೆದರೆ ಈ ಕೃತ್ಯಗಳಿಗೆ ಅಂತ್ಯ ಹಾಡುವವರು ಯಾರು? ಯಾರು ಇದನ್ನು ಮಟ್ಟಹಾಕಬೇಕು? ನೀವು ನಾವು ಚಿಂತಿಸಬೇಕಾದ ಸಂಗತಿಯಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT