ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಶಿಕ್ಷಣ: ಶ್ವೇತಪತ್ರ ಹೊರತರಲಿ

Last Updated 24 ಡಿಸೆಂಬರ್ 2018, 19:53 IST
ಅಕ್ಷರ ಗಾತ್ರ

ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಆರಂಭಿಸುವ ಸರ್ಕಾರದ ತೀರ್ಮಾನವನ್ನು, ‘ಬಡವರ ಮಕ್ಕಳ ಏಳಿಗೆಗೆ ದಾರಿ ಮಾಡಿಕೊಡುವ ಸಮಾನತೆಯ ಹೆಜ್ಜೆ’ ಎಂಬಂತೆ ಬಿಂಬಿಸಲಾಗುತ್ತಿದೆ. ನಾನು ನನ್ನ ಮಗನನ್ನು ಬೆಂಗಳೂರಿನ ಒಂದು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದೇನೆ. ಅದೇನೂ ಹೇಳಿಕೊಳ್ಳಬೇಕಾದ ವಿಷಯ ಅಲ್ಲದಿದ್ದರೂ ಭಾಷಾ ಮಾಧ್ಯಮದ ಬಗ್ಗೆ ಮಾತನಾಡಲು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಿರಬೇಕು ಅನ್ನುವುದು ಮುಖ್ಯವಾದ ಅರ್ಹತೆ ಎಂದು ಚರ್ಚಿಸಲಾಗುತ್ತಿರುವ ಕಾರಣ ಇಲ್ಲಿ ಪ್ರಸ್ತಾಪಿಸಿದ್ದೇನೆ ಅಷ್ಟೇ.

ಜಗತ್ತಿನ ಎಲ್ಲ ಮುಂದುವರಿದ ದೇಶಗಳು ತಮ್ಮ ಎಲ್ಲ ಹಂತದ ಕಲಿಕೆಯನ್ನು ತಮ್ಮದೇ ನುಡಿಗಳಲ್ಲಿ ಮಾಡಿಕೊಳ್ಳುತ್ತಿವೆ. ವಸಾಹತುಶಾಹಿಗೆ ಒಳಪಟ್ಟಿದ್ದ ಆಫ್ರಿಕಾ ಮತ್ತು ಏಷ್ಯಾದ ದೇಶಗಳಲ್ಲಿ ಮಾತ್ರವೇ ತಾಯ್ನುಡಿಯಲ್ಲಿ ಕಲಿಕೆಯಾಗಬೇಕೋ ಬೇಡವೋ ಅನ್ನುವ ಚರ್ಚೆ ನಡೆಯುತ್ತಿದೆ. ಮಕ್ಕಳ ಕಲಿಕೆಗೆ ಮೂರು ಹಂತಗಳಿವೆ. ಮೊದಲ ಮೂರು ವರ್ಷ ಮನೆಯೊಳಗೆ, ನಂತರ ಮನೆಯಾಚೆ ಪರಿಸರದಲ್ಲಿ, ಆನಂತರ ಶಾಲೆಯಲ್ಲಿ ಕಲಿಕೆ ನಡೆಯುತ್ತದೆ. ಇಲ್ಲಿ ಮೊದಲ ಎರಡು ಹಂತಗಳಲ್ಲಿ ಮಗು ಕಲಿಯುವುದು ತನ್ನ ತಾಯ್ನುಡಿ ಇಲ್ಲವೇ ಪರಿಸರದ ನುಡಿಯಲ್ಲಿ. ಹಾಗೆ ಪಡೆದ ಅರಿವಿನ ಬುನಾದಿಯ ಮೇಲೆ ಶಾಲೆಯ ಕಲಿಕೆ ಇದ್ದಾಗ ಮಗುವಿನ ಬೌದ್ಧಿಕ ವಿಕಾಸ ಚೆನ್ನಾಗಿ ನಡೆಯುತ್ತದೆ. ಹೀಗಾಗಿಯೇ ಶಾಲೆಯ ಹಂತದಲ್ಲಿ ಮಗುವಿಗೆ ಆಗಲೇ ತಿಳಿದಿರುವ ನುಡಿಯಲ್ಲಿ ಶಿಕ್ಷಣ ಕೊಡಬೇಕು ಅನ್ನುವ ವೈಜ್ಞಾನಿಕ ತತ್ವವನ್ನು ಮನಃಶಾಸ್ತ್ರಜ್ಞರು, ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ.

ಸಾಬೀತಾಗಿರುವ ಈ ತತ್ವವನ್ನು ಕೈಬಿಟ್ಟು, ಇಂಗ್ಲಿಷ್‌ ಮಾಧ್ಯಮದ ಹಿಂದೆ ಹೋಗುವುದು ಒಂದಿಡೀ ತಲೆಮಾರಿನ ಮಕ್ಕಳನ್ನು ಸೋಲಿಗೆ ಸಜ್ಜಾಗಿಸುವ ಹೆಜ್ಜೆಯಾಗಲಿದೆ. ಇಪ್ಪತ್ತೈದು ವರ್ಷಗಳಿಂದ ಇಂಗ್ಲಿಷ್‌ ಮಾಧ್ಯಮದ ಹುಚ್ಚು ಹಿಡಿಸಿಕೊಂಡಿರುವ ನಮ್ಮಲ್ಲಿ ಪ್ರಪಂಚವೇ ಬೆರಗಾಗುವಂತಹ ಯಾವ ಸಾಧನೆ ಬಂದಿದೆ? ಪ್ರಪಂಚವೇ ಮೂಗಿನ ಮೇಲೆ ಬೆರಳಿಡುವ ಯಾವ ಸಂಸ್ಥೆ ಕಟ್ಟಿದ್ದೇವೆ? ವೆಚ್ಚ ಉಳಿಸುವ ಸಲುವಾಗಿ ಇಲ್ಲಿಗೆ ಬಂದ ಹಲ ಕೆಲ ಐ.ಟಿ. ಕಂಪನಿಗಳ ಕೆಲಸಗಳೇ ನಮಗೆ ಮೇಲ್ಪಂಕ್ತಿಯಾಗಬೇಕೇ? ಲಕ್ಷಾಂತರ ರೂಪಾಯಿ ಪೀಕಿಸಿ, ಲಕ್ಷಲಕ್ಷ ಸಂಖೆಯಲ್ಲಿ ಅರೆಬೆಂದಪ್ರತಿಭೆಗಳನ್ನು ಹುಟ್ಟು ಹಾಕುತ್ತಿರುವ ನಾವು ಅವರಿಗೆಲ್ಲ ಯಾವ ಕೆಲಸ ಹುಟ್ಟಿಸಲು ಸಾಧ್ಯ? ಇಂಗ್ಲಿಷ್‌ ಒಂದು ಭಾಷೆಯಾಗಿ ಕಲಿಯುವುದಕ್ಕೂ ವಿಷಯ ಜ್ಞಾನಕ್ಕೂ ಯಾವ ಸಂಬಂಧವೂ ಇಲ್ಲ. ಸರ್ಕಾರವು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸುವುದರ ಜೊತೆ ಕನ್ನಡ ಮಾಧ್ಯಮದ ಕಲಿಕೆಯನ್ನು ಸುಧಾರಿಸುವತ್ತ ಗಮನ ಕೊಡಬೇಕಿತ್ತು. ಅದಕ್ಕೆ ಬೇಕಿರುವುದು ಇಚ್ಛಾಶಕ್ತಿ.

ಕಳೆದ ಹನ್ನೊಂದು ವರ್ಷಗಳಲ್ಲಿ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸುವಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ಸರ್ಕಾರ ಒಂದು ಶ್ವೇತಪತ್ರ ಹೊರತರಲಿ. ಒಂದು ಭಾಷೆಯಾಗಿಯೇ ಇಂಗ್ಲಿಷ್‌ ಅನ್ನು ಕಲಿಸುವುದು ಸಾಧ್ಯವಾಗದಿರುವಾಗ ಇಂಗ್ಲಿಷ್‌ ಮಾಧ್ಯಮದಲ್ಲೇ ಶಿಕ್ಷಣ ಕೊಡುತ್ತೇವೆ ಅನ್ನುವುದು ಮಕ್ಕಳನ್ನು ಅತ್ತ ಕನ್ನಡವೂ ಬಾರದ, ಇತ್ತ ಇಂಗ್ಲಿಷೂ ಬಾರದ ಎಡಬಿಡಂಗಿಗಳನ್ನಾಗಿ ಮಾಡುವ ಕೆಲಸವಾಗುತ್ತದೆ. ಮುಖ್ಯಮಂತ್ರಿಗೆ ಬಡ ಮಕ್ಕಳ ಬಗ್ಗೆ ಕಾಳಜಿ ಇರಬಹುದು, ಆದರೆ ಶಿಕ್ಷಣದ ವಿಷಯದಲ್ಲಿ ಅವರ ನಡೆಯಲ್ಲಿ ಯಾವುದೇ ದೂರದೃಷ್ಟಿ ಕಾಣುತ್ತಿಲ್ಲ.

-ವಸಂತ ಶೆಟ್ಟಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT