ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಮಾಧ್ಯಮದ ನಿರರ್ಥಕತೆಗೆ ಸಾಕ್ಷ್ಯ

Last Updated 27 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ನಮ್ಮ ನೆರೆಯ ಪಾಕಿಸ್ತಾನದ ಪಂಜಾಬ್ ರಾಜ್ಯದ ಸರ್ಕಾರವು 2009ರಲ್ಲಿ ಏಕಾಏಕಿ ಅಲ್ಲಿನ ಶಾಲಾ ಶಿಕ್ಷಣದಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಬೇಕೆಂಬ ನಿಯಮ ಜಾರಿಗೆ ತಂದಿತು. ಈ ಪ್ರಯೋಗದ ಬಗ್ಗೆ ಆನಂತರ ಕೆಲವು ಅಧ್ಯಯನಗಳು ನಡೆದವು. ಅದರಿಂದ ತಿಳಿದು ಬಂದಿರುವ ಮಾಹಿತಿಗಳು, ನಮ್ಮಲ್ಲಿ ಈಗ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಜಾರಿಗೆ ತರುವ ನಿರ್ಧಾರದ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಉಪಯುಕ್ತವಾದ ಸಾಕ್ಷ್ಯಾಧಾರಗಳನ್ನು ಒದಗಿಸಬಲ್ಲವು.

ಬ್ರಿಟಿಷ್ ಕೌನ್ಸಿಲ್‌ನವರು ಈ ಪ್ರಯೋಗದ ಬಗ್ಗೆ ಪ್ರಕಟಿಸಿರುವ, ಅಂತರ್ಜಾಲದಲ್ಲಿ ಲಭ್ಯವಿರುವ, ‘Can English Medium Education Work In Pakisthan? Lessons From Punjab, (www.britishcouncil.org.pk) ಎಂಬ ಲೇಖನವನ್ನು ನಾವು ಈ ನಿಟ್ಟಿನಲ್ಲಿ ನೋಡಬಹುದು.

ಈ ಅಧ್ಯಯನದಲ್ಲಿ ಆ ರಾಜ್ಯದ 18 ಜಿಲ್ಲೆಗಳಲ್ಲಿನ, 2008 ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಇಂಗ್ಲಿಷ್ ಭಾಷಾ ಜ್ಞಾನವನ್ನು ಪರೀಕ್ಷಿಸಲಾಯಿತು. ಅದರಿಂದ ತಿಳಿದು ಬಂದದ್ದು, ಖಾಸಗಿ ಶಾಲೆಗಳ ಶೇ 62ರಷ್ಟು ಶಿಕ್ಷಕರಲ್ಲಿ ಮತ್ತು ಸರ್ಕಾರಿ ಶಾಲೆಗಳ ಶೇ 56ರಷ್ಟು ಶಿಕ್ಷಕರಲ್ಲಿ ಇಂಗ್ಲಿಷ್‌ ಭಾಷೆಯ ಮೂಲಭೂತ ಜ್ಞಾನದ ಕೊರತೆ ಇತ್ತು. ಇನ್ನುಳಿದ ಶಿಕ್ಷಕರಲ್ಲಿ ಹೆಚ್ಚಿನವರು ಪ್ರಾರಂಭಿಕ ಹಂತದವರೆಂದು ವರ್ಗೀಕರಿಸಬಹುದಾದಷ್ಟು ಅಂಕಗಳನ್ನು ಮಾತ್ರ ಪಡೆದಿದ್ದರು.

‘ಲಾಹೋರ್ ಸ್ಕೂಲ್ ಆಫ್ ಎಕನಾಮಿಕ್ಸ್’ನ ಸಂಶೋಧಕಿಯರಾದ ಸೋದಾ ಬಷೀರ್ ಮತ್ತು ಫಿಜ್ಜಾ ಬತೂಲ್ ಅವರು ಅಲ್ಲಿನ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಂದರ್ಶಿಸಿ ‘English As A Medium Of Instruction In Punjab: The 2009 Experiment’ ಎಂಬ ಲೇಖನ ಬರೆದಿದ್ದಾರೆ. ‘ಇಂಗ್ಲಿಷ್ ಮಾಧ್ಯಮದಿಂದಾಗಿ ವಿದ್ಯಾರ್ಥಿಗಳ ಕಲಿಕೆ ಕುಂಠಿತವಾಗಿದೆ’ ಎಂದುಬಹುತೇಕ ಶಿಕ್ಷಕರು ಹೇಳಿದ್ದಾಗಿ ಅವರು ಬರೆದಿದ್ದಾರೆ.

‘ಉರ್ದು ಮಾಧ್ಯಮ ಇದ್ದಾಗಲೂ ನೀವು ಕಂಠಪಾಠ ಮಾಡುತ್ತಿದ್ದಿರಿ, ಈಗಲೂ ಅದನ್ನೇ ಮಾಡುತ್ತೀರಿ. ಏನು ವ್ಯತ್ಯಾಸವಾಗಿದೆ’ ಎಂದುಈ ಸಂಶೋಧಕಿಯರು ಹಲವು ವಿದ್ಯಾರ್ಥಿಗಳನ್ನು ಕೇಳಿದ್ದಾರೆ. ಅದಕ್ಕೆ ಹೈಸ್ಕೂಲ್‌ನ ವಿದ್ಯಾರ್ಥಿನಿಯೊಬ್ಬಳು ನೀಡಿದ ಉತ್ತರವೆಂದರೆ, ‘ಉರ್ದು ಭಾಷೆಯಲ್ಲಿ ಕಂಠಪಾಠ ಮಾಡುವಾಗ ನಮಗೆ ವಿಷಯ ಅರ್ಥವಾಗುತ್ತಿತ್ತು. ಇಂಗ್ಲಿಷ್‌ನಲ್ಲಿ ಕಂಠಪಾಠ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ಬೇಗಮರೆತುಹೋಗುತ್ತದೆ’ ಎಂಬುದು. ಇಂಗ್ಲಿಷ್‌ ಮಾಧ್ಯಮದ ನಿರರ್ಥಕತೆಯನ್ನು ಕಂಡುಕೊಳ್ಳಲು ಇಷ್ಟು ಸಾಕೆಂದು ಕಾಣುತ್ತದೆ.

-ಗಿರೀಶ್ ವಿ. ವಾಘ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT