ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯ

Last Updated 7 ಜನವರಿ 2019, 20:15 IST
ಅಕ್ಷರ ಗಾತ್ರ

‘ಬ್ಯಾಂಕಿಂಗ್ ನೇಮಕಾತಿಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ಕೊಡಬೇಕು’ ಎಂದು ರಾಜ್ಯಸಭೆಯಲ್ಲಿ ಜಿ.ಸಿ. ಚಂದ್ರಶೇಖರ್ ಒತ್ತಾಯಿಸಿದ್ದಾರೆ (ಪ್ರ.ವಾ., ಜ. 4). ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ನಮ್ಮ ಸಂಸದರು ಒತ್ತಡ ಹೇರಬೇಕಾದ್ದು ಅತ್ಯಗತ್ಯ.

ನೇಮಕಾತಿ ಪ್ರಕ್ರಿಯೆಯ ನಿಯಮಗಳಲ್ಲಿ ನಾಲ್ಕು ವರ್ಷಗಳ ಹಿಂದೆ ಮಾಡಿರುವ ಬದಲಾವಣೆಯಿಂದಾಗಿ ಸ್ಥಳೀಯ ಭಾಷಾ ಜ್ಞಾನವಿಲ್ಲದವರೂ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಇದರಿಂದ ರಾಜ್ಯದ ಅಭ್ಯರ್ಥಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಗ್ರಾಮೀಣ ಬ್ಯಾಂಕುಗಳೂ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಬ್ಯಾಂಕುಗಳಲ್ಲಿ ಈಗಾಗಲೇ ಹೊರರಾಜ್ಯದ ಉದ್ಯೋಗಿಗಳು ನೇಮಕವಾಗಿ ಕೆಲಸ ಮಾಡುತ್ತಿದ್ದಾರೆ. ಇಂಥವರ ಜೊತೆ ಕನ್ನಡದಲ್ಲಿ ವ್ಯವಹರಿಸಲಾಗದೇ ಗ್ರಾಹಕರು ಕಷ್ಟ ಅನುಭವಿಸುತ್ತಿದ್ದಾರೆ.

ಈ ನಾಲ್ಕು ವರ್ಷಗಳಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಬ್ಯಾಂಕಿಂಗ್ ಉದ್ಯೋಗಗಳು ಕನ್ನಡಿಗರ ಕೈತಪ್ಪಿರುವುದು ಅಂಕಿ ಅಂಶಗಳಿಂದ ತಿಳಿಯುತ್ತದೆ. ಕುಟುಂಬವೊಂದರಲ್ಲಿ ಸರಾಸರಿ ನಾಲ್ಕು ಜನರಿದ್ದಾರೆ ಎಂದುಕೊಂಡರೂ ಲಕ್ಷಕ್ಕೂ ಹೆಚ್ಚು ಕನ್ನಡಿಗರಿಗೆ ಇದರಿಂದ ಅನ್ಯಾಯವಾಗಿದೆ. ಲಕ್ಷಾಂತರ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.

ರಾಜ್ಯದ ಒಬ್ಬ ಸಂಸದರು ವಿತ್ತಸಚಿವರಿಗೆ ಈ ಬಗ್ಗೆ ಪತ್ರ ಬರೆದಿರುವುದು ವರದಿಯಾಗಿದೆ. ಉಳಿದ ಸಂಸದರು ಮತ್ತು ಶಾಸಕರು ಈ ಸಮಸ್ಯೆಯ ತೀವ್ರತೆಯನ್ನು ಅರ್ಥ ಮಾಡಿಕೊಂಡಂತೆ ಕಾಣಿಸುತ್ತಿಲ್ಲ. ಆಯಾ ರಾಜ್ಯದ ಉದ್ಯೋಗಗಳ ನೇಮಕಾತಿಗೆ ರಾಜ್ಯ ಭಾಷೆಯ ಜ್ಞಾನವನ್ನು ಕಡ್ಡಾಯಗೊಳಿಸುವುದರ ಜೊತೆಗೆ ಇಂಥ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳನ್ನು ಸಹ ಸ್ಥಳೀಯ ಭಾಷೆಯಲ್ಲಿ ನಡೆಸುವಂತಾಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಜನರಿಗೆ ನ್ಯಾಯ ಒದಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT