ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಂಡು ಧೋರಣೆ ಸರಿಯಲ್ಲ

ಅಕ್ಷರ ಗಾತ್ರ

ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಆರಂಭಿಸುವ ವಿಚಾರದ ಬಗ್ಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ‘ಈ ವಿಚಾರದಲ್ಲಿ ಪಕ್ಷದವರು ನೂರಾರು ಅಭಿಪ್ರಾಯ ಹೇಳಬಹುದು, ನನ್ನ ಅಭಿಪ್ರಾಯವೂ ಬೇರೆ ಇರಬಹುದು. ಆದರೆ ಮುಂದಿನ ವರ್ಷದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವುದು ಸರ್ಕಾರದ ನಿಲುವು’ (ಪ್ರ.ವಾ., ಜ. 8) ಎಂದಿದ್ದಾರೆ. ಇದೇನು, ಎಲ್ಲರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಆಡಳಿತ ನಡೆಸುವ ಸರ್ಕಾರವೋ ಅಥವಾ ಸರ್ವಾಧಿಕಾರಿ ಧೋರಣೆಯ ಸರ್ಕಾರವೋ?

84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿಗಳು, ವಿದ್ವಾಂಸರು ಹಾಗೂ ಶಿಕ್ಷಣ ತಜ್ಞರು, ಶಿಕ್ಷಣ ಮಾಧ್ಯಮದ ವಿವಿಧ ಆಯಾಮಗಳ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದಾರೆ. ಅವರೆಲ್ಲರೂ ಒಕ್ಕೊರಲಿನಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ವಿರೋಧ ವ್ಯಕ್ತಪಡಿಸುವ ನಿರ್ಣಯ ಕೈಗೊಂಡಿದ್ದಾರೆ. ಈ ನಿರ್ಣಯವನ್ನು ಸಮ್ಮೇಳನದ ಸಭಾಂಗಣದಲ್ಲಿ ನೆರೆದಿದ್ದ ಸಹಸ್ರಾರು ಜನರು ಬೆಂಬಲಿಸಿದ್ದಾರೆ. ಅದಕ್ಕೆ ಕಿಮ್ಮತ್ತಿಲ್ಲವೇ?

ಸಚಿವ ಎಚ್.ಡಿ. ರೇವಣ್ಣ, ಸಮ್ಮೇಳನದ ಈ ನಿರ್ಣಯದ ವಿರುದ್ಧ ಕಿಡಿಕಾರಿದ್ದು, ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳ ಜೊತೆಗೆ ಇನ್ನೂ ಒಂದು ಸಾವಿರ ಶಾಲೆಗಳನ್ನು ಆರಂಭಿಸಲು ಬೆಂಬಲ ನೀಡುವುದಾಗಿ ಉಡಾಫೆಯ ಮಾತುಗಳನ್ನಾಡಿದ್ದಾರೆ. ಇಂಗ್ಲಿಷ್ ಮಾಧ್ಯಮದಿಂದ ಬಡಮಕ್ಕಳಿಗೆ ದೊರಕುವುದು ನ್ಯಾಯವಲ್ಲ, ಬದಲಿಗೆ ಅವರ ಕಲಿಕಾ ಶಕ್ತಿ, ಸೃಜನಶೀಲತೆಯನ್ನು ಕುಂಠಿತಗೊಳಿಸಿ ಯಾವ ಭಾಷೆಯೂ ಬಾರದಂತೆ ಮಾಡುವ ವ್ಯವಸ್ಥೆ. ಪ್ರಾಥಮಿಕ ಹಂತದಲ್ಲಿ ವಿಜ್ಞಾನ ಮತ್ತು ಗಣಿತವನ್ನು ಬೋಧನೆ ಮಾಡಲು ಇಂಗ್ಲಿಷ್ ಭಾಷೆಯೇ ಬೇಕಿಲ್ಲ. ಕನ್ನಡದಲ್ಲಿ ಸಮರ್ಥವಾಗಿ ಬೋಧಿಸಿ ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿಯನ್ನು ಹೆಚ್ಚಿಸಬಹುದು. ಮಾತೃಭಾಷೆಯಲ್ಲಿ ಅಥವಾ ಹುಟ್ಟಿನಿಂದ ಪರಿಚಿತವಾದ ಪ್ರಾದೇಶಿಕ (ಇಲ್ಲಿ ಕನ್ನಡ) ಭಾಷೆಯಲ್ಲಿ ಎಲ್ಲ ವಿಷಯಗಳೂ ಸರಾಗವಾಗಿ ಮನದಟ್ಟಾಗಿ, ವಿದ್ಯಾರ್ಥಿಗಳು ತಮ್ಮ ಆಲೋಚನಾ ಶಕ್ತಿ, ಸೃಜನಶೀಲತೆಯಿಂದ ಪ್ರತಿಭಾವಂತರಾಗಬಹುದು. ಕನ್ನಡ ಮಾಧ್ಯಮದಲ್ಲಿ ಓದಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸೃಜನಶೀಲ ಪ್ರಯೋಗಗಳು ನಮ್ಮನ್ನು ದಂಗುಬಡಿಸುತ್ತಿವೆ.

ಬಡಮಕ್ಕಳಿಗೆ ನ್ಯಾಯ ದೊರಕಿಸಬೇಕೆಂಬ ಕಾಳಜಿ ರೇವಣ್ಣ ಅವರಿಗೆ ಹಾಗೂ ಸರ್ಕಾರಕ್ಕೆ ಇದ್ದರೆ ಕನ್ನಡ ಶಾಲೆಗಳಿಗೆ ಎಲ್ಲಾ ಸೌಕರ್ಯಗಳನ್ನು ಈ ಕೂಡಲೇ ಒದಗಿಸಿ ಶ್ರೀಮಂತಗೊಳಿಸಲಿ. ಇಚ್ಛಾಶಕ್ತಿ ಇದ್ದರೆ ಇದು ಸಾಧ್ಯ. ಆರ್‌ಟಿಇ ಮೂಲಕ ಖಾಸಗಿ ಶಾಲೆಗಳನ್ನು ಮತ್ತಷ್ಟು ಶ್ರೀಮಂತಗೊಳಿಸುವ ಯೋಜನೆಯನ್ನು ಕೈಬಿಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT