ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕೋವಿಡ್ ಪರಿಹಾರಕ್ಕೆ ಕೈ ಜೋಡಿಸಲಿ

Last Updated 3 ಮೇ 2021, 20:00 IST
ಅಕ್ಷರ ಗಾತ್ರ

ನಮ್ಮ ನಾಡಿನ ಎಲ್ಲಾ ಮಠಗಳೂ ದಾಸೋಹ ಮಾಡುತ್ತಾ ಒಂದು ಉತ್ತಮ ಸಂಸ್ಕೃತಿಗೆ ನಾಂದಿ ಹಾಡಿವೆ. ಆದರೆ ಇಂದು ಕೊರೊನಾ ಕಾರಣವಾಗಿ ಅಲ್ಲಿಗೆ ಭಕ್ತಾದಿಗಳು ಬರುತ್ತಿಲ್ಲ. ಅಲ್ಲಿನ ಅಡುಗೆ ಮನೆಗಳಲ್ಲಿ ಹೆಚ್ಚು ಪ್ರಮಾಣದ ಪ್ರಸಾದ ತಯಾರು ಮಾಡಬಲ್ಲ ವ್ಯವಸ್ಥೆ ಇದೆ. ಬೃಹತ್ ಪ್ರಮಾಣದಲ್ಲಿ ಅಡುಗೆ ಸಿದ್ಧಪಡಿಸುವ ತರಬೇತಿ ಹೊಂದಿರುವ ಜನ ಕೂಡ ಇದ್ದಾರೆ. ಈ ಸೌಲಭ್ಯವನ್ನು ಇಂದಿನ ದುಸ್ತರದ ಪರಿಸ್ಥಿತಿಯಲ್ಲಿ ಕೋವಿಡ್‌ ಪೀಡಿತ ಭಕ್ತಾದಿಗಳ ಒಳಿತಿಗೆ ಯಾಕೆ ಮಠಗಳು ಬಿಟ್ಟು ಕೊಡಬಾರದು? ಅಂತೆಯೇ ಕಂಪನಿಗಳ ಗೆಸ್ಟ್ ಹೌಸುಗಳೂ ಹೋಟೆಲುಗಳೂ ದೂಳು ತಿನ್ನುತ್ತಿವೆ. ಅವನ್ನೂ ಐಸೊಲೇಷನ್ ಬೇಕಿರುವ ಕೋವಿಡ್ ಪೀಡಿತರಿಗಾಗಿ ಬಳಸಬಹುದು. ಇದಕ್ಕೆ ಎಲ್ಲಾ ದೇವಸ್ಥಾನ, ಮಸೀದಿ, ಚರ್ಚುಗಳ ವ್ಯವಸ್ಥೆಗಳನ್ನೂ ಬಳಸಿಕೊಳ್ಳಬೇಕು. ಇದರಿಂದ ಆಸ್ಪತ್ರೆಗಳ ಮೇಲಿನ ಅಸಾಧ್ಯ ಒತ್ತಡ ಸ್ವಲ್ಪವಾದರೂ ತಗ್ಗುತ್ತದೆ.

ಎಷ್ಟೋ ಮಠಗಳು ಆಸ್ಪತ್ರೆ, ಮೆಡಿಕಲ್ ಕಾಲೇಜು, ಸರ್ಸಿಂಗ್ ಕಾಲೇಜು ಇತ್ಯಾದಿಗಳನ್ನು ನಡೆಸುತ್ತಿವೆ. ನುರಿತ ಸಿಬ್ಬಂದಿ ಕೂಡ ಹೆಚ್ಚುವರಿ ಸಂಖ್ಯೆಯಲ್ಲಿ ಸಿಗಬಹುದು. ಮಠದ ಸೇವೆಗೆ ಬನ್ನಿ ಎಂದರೆ ಪ್ರೈವೇಟ್ ಪ್ರಾಕ್ಟೀಸ್ ಮಾಡುತ್ತಿರುವ ಜನ ಕೂಡ ಕೈ ಜೋಡಿಸಲು ಸಿದ್ಧರಿರುತ್ತಾರೆ. ತಕ್ಷಣದ ಅವಶ್ಯಕತೆಗೆ ಸರ್ಕಾರ ನಮ್ಮಲ್ಲಿ ಇರುವ ಇಂತಹ ಎಲ್ಲಾ ಸೌಲಭ್ಯವನ್ನೂ ಬಳಸಿಕೊಳ್ಳಬೇಕು. ಮಠಗಳೇ ಮುಂದೆ ಬಂದು ಇದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರೆ ಜನರ ಭಕ್ತಿ, ವಿಶ್ವಾಸವೂ ಬೆಳೆಯುತ್ತದೆ. ಈ ವಿಷಯದಲ್ಲಿ ಸಿಖ್ಖರು ಅಭಿನಂದನಾರ್ಹರು. ದೆಹಲಿಯ ಕೆಲವು ಪ್ರದೇಶಗಳಲ್ಲಿ ಊಟದ ಲಂಗರ್ ವ್ಯವಸ್ಥೆ ಮಾಡಿರುವಂತೆಯೇ ಕೋವಿಡ್‌ ರೋಗಿಗಳಿಗೆ ಆಕ್ಸಿಜನ್ ಕೊರತೆ ಶುರುವಾಗುತ್ತಿದ್ದಂತೆ ಅವರು ಆಕ್ಸಿಜನ್ ಲಂಗರ್ ಕೂಡ ಶುರು ಮಾಡಿದ್ದಾರೆ.

ಕಾಂಗ್ರೆಸ್‌ನ ಎಂ.ಬಿ.ಪಾಟೀಲ ತಮ್ಮ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸಾ ವೆಚ್ಚವನ್ನು ಬಹಳ ಕಡಿಮೆ, ಅಂದರೆ ಶೇ 70ರಷ್ಟು ಕಡಿಮೆ ಮಾಡಿದ್ದಾರೆ. ಇದು ಅಭಿನಂದನೀಯ ಕ್ರಮ. ಸಮಾಜ ಅಂದರೆ ಸರ್ಕಾರ ಒಂದೇ ಅಲ್ಲ, ಸಮಾಜ ಅಂದರೆ ನಮ್ಮ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಅಂಗಗಳೂ ಸೇರುತ್ತವೆ. ಮನುಷ್ಯರು ಮತ್ತೆ ಒಬ್ಬರನ್ನೊಬ್ಬರು ಭೇಟಿ ಆಗುವ ದಿನಗಳು ಬರಲಿ.

ಪ್ರೀತಿ ನಾಗರಾಜ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT