ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬಾಳ ಚೆಲುವ ಹರಡಿದವರು

Last Updated 25 ಆಗಸ್ಟ್ 2021, 22:15 IST
ಅಕ್ಷರ ಗಾತ್ರ

ಕುವೆಂಪು, ಬೇಂದ್ರೆ, ಪುತಿನ, ಕೆಎಸ್‍ನ, ಅಡಿಗರು ಇವರೆಲ್ಲಾ ಕನ್ನಡದ ವಿವೇಕವನ್ನು ಕಟ್ಟಿದಂಥ ನಮ್ಮ ಪ್ರಜ್ಞೆಯ ಪ್ರಮುಖ ಕವಿಗಳು. ಕನ್ನಡದ ಬದುಕು ರೂಪಿಸಿಕೊಳ್ಳುತ್ತಲೇ ಬಂದ ಪರಂಪರೆ, ಸಂಸ್ಕೃತಿಯ ಎಲ್ಲ ಅವಯವಗಳ ಕುರಿತು ಅವರಿಗೆ ವಿಶಿಷ್ಟವಾದ ಜ್ಞಾನವಿತ್ತು. ಅಷ್ಟೇಅಲ್ಲ, ಅಲ್ಲಿರುವ ಊನಗಳ ಕುರಿತು ಕೂಡ ಅವರಿಗೆ ಕೆಲವು ಪ್ರಶ್ನೆಗಳಿದ್ದವು. ಆ ತಕರಾರುಗಳನ್ನು ಅವರು ತಮ್ಮ ಕಾವ್ಯದಲ್ಲಿಯೇ ಮೂಡಿಸಿದ್ದಾರೆ. ಇವರ ಬರಹಗಳಲ್ಲಿ ಭಾಷೆಯ ಚೆಲುವು, ಸೊಬಗು ಅಷ್ಟೇಅಲ್ಲ, ಸಂಸ್ಕೃತಿ, ಸಮುದಾಯಗಳ ಬಾಳ ಚೆಲುವು ಕೂಡ ಹರಡಿಕೊಂಡಿದೆ. ದುಡಿಯುವ ಸಂಸ್ಕೃತಿ,ಮಾನವನ ಅಭ್ಯುದಯ, ಮಾನವೀಯ ಗುಣಗಳ ಸಹಕಾರದ ಕುರಿತು ಅವರ ಕಾವ್ಯದ ತುಡಿತ ಇದೆ. ಇದೆಲ್ಲವನ್ನೂ ಬಿಟ್ಟು ಕವಿಯನ್ನು ಜಾತಿ, ವರ್ಗ, ವರ್ಣಕ್ಕೆ ಅನ್ವಯಿಸಿಕೊಂಡು ವಿಮರ್ಶಿಸುವಂತಹ ತಾಲಿಬಾನಿ ಗುಣವನ್ನು ರಘುನಾಥ ಚ.ಹ. ಅವರು ಸರಿಯಾಗಿ ಗುರುತಿಸಿ, ಚರ್ಚಿಸಿದ್ದಾರೆ (ಪ್ರ.ವಾ., ಆ. 25).

ಮತ್ತೆ ಮತ್ತೆ ಸ್ವಯಂಘೋಷಿತ ವಿಮರ್ಶಕರ ನ್ಯಾಯಾಲಯದ ಕಟಕಟೆಗೆ ಒಳಗಾಗುತ್ತಿರುವ ನಮ್ಮ ಬೇಂದ್ರೆ
ಯವರಾಗಲೀ ಅಡಿಗರಾಗಲೀ ಇವರೆಲ್ಲ ನಮ್ಮ ಆಧುನಿಕ ಪೂರ್ವಸೂರಿಗಳೆ. ಇವರು ಕಟ್ಟಿದ್ದು ಕಾವ್ಯವನ್ನೇ. ಯಾವುದೇ
ಜಾತಿ, ಗುಂಪು, ಸಿದ್ಧಾಂತ, ಪಂಥಗಳನ್ನಲ್ಲ. ವರ್ತಮಾನದ ಕನ್ನಡ ವಿಮರ್ಶೆಯನ್ನು ಆರೋಗ್ಯಕರವಾಗಿ ಬೆಳೆಸಬಹುದಾದ, ವಿವೇಕದಿಂದ ವಿಸ್ತರಿಸಬಹುದಾದ ನಮ್ಮ ತಲೆಮಾರಿನ ಹಲವು ವಿಮರ್ಶಕ ಗೆಳೆಯರೇ ಇಂಥದ್ದೊಂದು ವಿಮರ್ಶೆಯ ದುಸ್ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೈಹಾಕಿದ್ದಾರೆ. ಅದು ಖಂಡಿತ ಬೇಂದ್ರೆ, ಅಡಿಗರಂಥವರಿಗೆ ಕೇಡನ್ನು ಬಯಸಲಾರದು. ಆದರೆ, ನಮ್ಮ ಕನ್ನಡದ ಪ್ರಾಣವಾಯುವಿನಂತಹ ಕಾವ್ಯ ಪ್ರಕಾರಕ್ಕೆ ಖಂಡಿತ ಕಂಟಕವಾಗಬಲ್ಲದು. ಹೊಸ ತಲೆಮಾರಿಗೆ ಇಂತಹ ಸಾಮಾಜಿಕ ಜಾಲತಾಣದ ವಿಮರ್ಶೆಯನ್ನು ಆದರ್ಶವೆಂದು ನೀಡಿದರೆ, ಅವರ ಮಾನಸಿಕ ಸ್ಥಿತಿ ಮತ್ತು ಓದಿನ ಗ್ರಹಿಕೆಯು ಕವಿಯನ್ನು, ಆತನ ಕವಿತೆಗಳನ್ನು ನೋಡುವ ಕ್ರಮ, ದೃಷ್ಟಿಕೋನ ಎಲ್ಲವೂ ಪೂರ್ವಗ್ರಹಪೀಡಿತವೇ ಆಗಿ ಕಾಣಿಸಿಬಿಡಬಲ್ಲದು. ಈ ಕುರಿತು ಇನ್ನೂ ಆರೋಗ್ಯಕರ ಚರ್ಚೆಗಳಾಗಬೇಕು.

ಡಾ. ನಿಂಗಪ್ಪ ಮುದೇನೂರು,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT