ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ವಸ್ತ್ರಸಂಹಿತೆ: ವಿವೇಕಯುತ ಸುತ್ತೋಲೆ

Last Updated 19 ಜುಲೈ 2021, 19:30 IST
ಅಕ್ಷರ ಗಾತ್ರ

ವಸ್ತ್ರಸಂಹಿತೆಯು ಇದೀಗ ಒಳ್ಳೆಯ ಕಾರಣಕ್ಕೆ ಸುದ್ದಿಯಲ್ಲಿದೆ. ಸಲ್ವಾರ್ ಕಮೀಜ್ ಅಥವಾ ಚೂಡಿದಾರ್ ಎಲ್ಲ ರೀತಿಯಲ್ಲೂ ಸೂಕ್ತವಾದ ಕಂಫರ್ಟಬಲ್ ಉಡುಗೆ ಆಗಿರುವುದರಿಂದ ಸೀರೆಯ ಜೊತೆಗೆ ಅದನ್ನೂ ತಮ್ಮ ದೈನಂದಿನ ಉಡುಗೆ ಮಾಡಿಕೊಳ್ಳಲು ಬಹುತೇಕ ಯುವ ಅಧ್ಯಾಪಕಿಯರು ಬಯಸುವುದಿದೆ. ಆದರೆ ಅಧ್ಯಾಪಕಿಯರು ಕಡ್ಡಾಯವಾಗಿ ಸೀರೆಯನ್ನೇ ತೊಟ್ಟು ಬರಬೇಕು ಎಂದು ಸಂಬಂಧಪಟ್ಟ ಮುಖ್ಯಸ್ಥರು ಮೌಖಿಕ ಸೂಚನೆ ಕೊಡುವುದು, ಸಲ್ವಾರ್ ತೊಟ್ಟು ಬಂದ‌ಅಧ್ಯಾಪಕಿಯರನ್ನು ಅವಮಾನ, ಅಸಹನೆ, ಆಕ್ಷೇಪಕ್ಕೆ ಈಡು ಮಾಡುವುದು ಹಲವು ಕಡೆ ನಡೆದೇ ಇದೆ. ಹೀಗಿರುವಾಗ, ಶಿಕ್ಷಕಿಯರು ಶಾಲೆಗೆ ಸಲ್ವಾರ್‌ ಧರಿಸಿ ಬರುವುದರ ಬಗ್ಗೆ ಆಕ್ಷೇಪ
ವ್ಯಕ್ತವಾಗಿದ್ದರ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆ ಒಂದು ವಿವೇಕದ ನಡೆ. ಸಭ್ಯ ಉಡುಗೆ ಧರಿಸಿ ಕರ್ತವ್ಯ ನಿರ್ವಹಿಸುವುದು ಬೋಧಕ, ಬೋಧಕೇತರ ಸಿಬ್ಬಂದಿಯ ಸ್ವಾತಂತ್ರ್ಯವಾಗಿರುತ್ತದೆ, ನಿರ್ದಿಷ್ಟ ಉಡುಗೆಗಳನ್ನು ಧರಿಸಲು ನಿರ್ದೇಶನ ನೀಡಿ ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುವುದು ಸಾಧ್ಯವಿಲ್ಲ ಎಂದು ಅವರು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಪ್ರಶಂಸನೀಯ ಸಂಗತಿ.

ಉಡುಗೆಯ ಕಾರಣಕ್ಕೆ ಹೆಣ್ಣುಮಕ್ಕಳು ಅನುಭವಿಸುವ ಕಿರಿಕಿರಿ ಅಷ್ಟಿಷ್ಟಲ್ಲ. ಶಾಲಾ ಕಾಲೇಜು ಸಿಬ್ಬಂದಿಯ ಉಡುಪಿನ ಬಗ್ಗೆ ಯಾವುದೇ ಲಿಖಿತ ನಿಯಮ ಇಲ್ಲದಿರುವಾಗಲೂ ಸಭ್ಯತೆ, ಸಂಸ್ಕೃತಿಯ ಹೆಸರಿನಲ್ಲಿ ಇಂಥವುಗಳನ್ನು ಹೆಣ್ಣುಮಕ್ಕಳ ಮೇಲೆ ಹೇರಲಾಗುತ್ತದೆ. ಪುರುಷರು ಪ್ಯಾಂಟ್‌, ಶರ್ಟು ಧರಿಸಿಕೊಂಡು ತಮ್ಮ ಕಂಫರ್ಟ್‌ ಕಂಡುಕೊಂಡಿದ್ದಾರೆ. ಅದೇ ಹೆಣ್ಣುಮಕ್ಕಳು ಸಲ್ವಾರ್ ಕಮೀಜ್ ಸೂಕ್ತ ಉಡುಗೆ ಎಂದರೂ ಅದನ್ನು ಧರಿಸುವುದು ಸಲೀಸಲ್ಲ. ಇಲ್ಲಿ ಬಟ್ಟೆಯ ಶೀಲ, ಅಶ್ಲೀಲತೆಯ ಪ್ರಶ್ನೆಗಿಂತ ಹೆಣ್ಣುಮಕ್ಕಳು ಕಟ್ಟು ಮೀರಿ ಒಂದಿಷ್ಟು ಸ್ವತಂತ್ರವಾಗಿ ಕಾಣಲು ಬಯಸುವುದನ್ನು ಸಹಿಸದ ಮನಃಸ್ಥಿತಿ ತೋರುವ ಅಸಹನೆಯೇ ಎದ್ದು ಕಾಣುತ್ತದೆ.

ಇರುವ ಎಷ್ಟೋ ಸದುದ್ದೇಶದ ನಿಯಮಗಳನ್ನು ಜಾರಿ ಮಾಡುವಲ್ಲಿ ತೋರದ ತುರ್ತು, ಈ ವಿಷಯದಲ್ಲಿ ಇಲ್ಲದಿರುವ ನಿಯಮವನ್ನು ಸ್ಥಾಪಿಸುವಲ್ಲಿ ಕಾಣುವುದಕ್ಕೆ ಇಂತಹ ಅಸಹನೆಯೇ ಕಾರಣ. ಈ ದಿಸೆಯಲ್ಲಿ ಉಪನಿರ್ದೇಶಕರ ನಡೆಯು ವಿವೇಕದಿಂದ ಕೂಡಿದ್ದು, ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧವಾಗಿದೆ. ಆಡಳಿತ ನಡೆಸು ವವರು ಸಂವೇದನಾಶೀಲರಾಗಿದ್ದಾಗ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವುದನ್ನು ಇದು ತೋರುತ್ತದೆ. ಈ ಬಗೆಯ ವಿವೇಕ ಎಲ್ಲೆಡೆಯೂ ಕಾಣಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ.

– ಕಾವ್ಯಶ್ರೀ ನಾಯ್ಕ ಮನ್ಮನೆ, ಉಷಾರಾಣಿ ಹಡಗಲಿ, ಭಾರತಿದೇವಿ ಪಿ., ಶಿವಲೀಲಾ ಮಲ್ಲಿಕಾರ್ಜುನಪ್ಪ, ದೀಪಾ ಹಿರೇಗುತ್ತಿ, ಕೋಮಲ ಕಲ್ಲುಡಿ, ವಿಜಯಲಕ್ಷ್ಮಿ ಆರ್.ಜೆ., ಜೀನತ್ ಕಣವಿ, ಡಾ. ಜಯಲಕ್ಷ್ಮಿ, ವೃಂದಾ ಹೆಗ್ಡೆ, ಅಕ್ಷತಾ ಹುಂಚದಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT