ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬಾಯಿಮಾತಿನಿಂದ ಭಾಷೆ ಉದ್ಧಾರವಾದೀತೆ?

Last Updated 2 ನವೆಂಬರ್ 2021, 22:00 IST
ಅಕ್ಷರ ಗಾತ್ರ

ನಾಡಿನ ಮಕ್ಕಳಿಗೆ ಉದ್ಯೋಗ ದೊರೆತರೆ ಕನ್ನಡಕ್ಕೆ ಶಕ್ತಿ ಬರುತ್ತದೆ, ಉದ್ಯೋಗ ವಲಯದಲ್ಲಿ ಶೇ 75ರಷ್ಟನ್ನು ಕನ್ನಡಿಗರಿಗೆ ಸಿಗುವಂತೆ ಮಾಡಲಾಗುವುದು ಎಂದೆಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಘೋಷಿಸಿದ್ದಾರೆ. ಘೋಷಣೆಗಳಿಂದ ಒಂದು ಭಾಷೆ ಮತ್ತು ಅದನ್ನು ಆಡುವ ಜನರ ಅಭಿವೃದ್ಧಿ ಆಗುವುದಿದ್ದರೆ ಮುಖ್ಯಮಂತ್ರಿಗೆ ಇಂದು ಈಗ ಇಂಥ ಘೋಷಣೆ ಮಾಡುವ ಅಗತ್ಯ
ಬರುತ್ತಿರಲಿಲ್ಲ!

ರಾಜ್ಯದ ಎಲ್ಲಾ ಬಗೆಯ ಶಾಲೆಗಳಲ್ಲೂ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ನಡೆಯುವುದು ಸಾಧ್ಯವಿಲ್ಲದ
ಸ್ಥಿತಿ ಇರುವಾಗ ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಬೋಧಿಸುವ ಕೆಲಸವನ್ನು ಸರ್ಕಾರ ಆರಂಭಿಸಿದೆ ಮತ್ತು ಈ ವಿಷಯದಲ್ಲಿ ಸರ್ಕಾರದ್ದು ಗಟ್ಟಿ ನಿಲುವು ಎಂದು ಬೊಮ್ಮಾಯಿ ಅವರು ಹೇಳುತ್ತಾರೆ. ಮೊದಲ ಆದ್ಯತೆ ನೀಡಬೇಕಾದುದು ಪ್ರಾಥಮಿಕ ಶಿಕ್ಷಣಕ್ಕೆ. ಶಿಕ್ಷಣಕ್ಕೆ ಬುನಾದಿಯೇ ಅಲ್ಲಿಂದ. ಆದರೆ ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಸರ್ಕಾರವೇ ಖಾಸಗಿ ಶಾಲೆಗಳ ಮೇಲೆ ಹೇರುವಂತಿಲ್ಲ. ಸರ್ಕಾರಿ ಶಾಲೆಗಳನ್ನು ಹಿಂದಿಕ್ಕಿ ಓಡುತ್ತಿರುವ ಈ ಶಾಲೆಗಳು ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡಲು ಸುತರಾಂ ಒಪ್ಪುವುದಿಲ್ಲ. ಕನ್ನಡವನ್ನು ಒಂದು ಭಾಷೆಯನ್ನಾಗಿ ಪರಿಣಾಮಕಾರಿಯಾಗಿ ಮತ್ತು ಕಡ್ಡಾಯವಾಗಿ ಕಲಿಸಬೇಕೆಂಬ ಹಂಬಲವಿರುವ ಎಷ್ಟು ಖಾಸಗಿ ಶಾಲೆಗಳು ಪ್ರಾಮಾಣಿಕವಾಗಿ ಆ ದಿಸೆಯಲ್ಲಿ ಕಾರ್ಯನಿರತವಾಗಿವೆ ಎನ್ನುವುದರ ಲೆಕ್ಕವಿದೆಯೇ?

ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ ಎಲ್ಲಾ ಶಾಲೆಗಳೂ ಅಳವಡಿಸಲೇಬೇಕೆಂದು ಕಡ್ಡಾಯ ಮಾಡಲು ಸುಪ್ರೀಂ ಕೋರ್ಟಿನ ತೀರ್ಪು ಅಡ್ಡ ಬರುತ್ತದೆ. ತೀರ್ಪು ಬಂದ ಹೊಸತರಲ್ಲಿ ಅಂದಿನ ಸರ್ಕಾರ ವೀರೋಚಿತವಾಗಿ ಮಾತನಾಡುತ್ತ, ತಾನು ಇತರ ರಾಜ್ಯಗಳೊಡನೆ ಸಮಾಲೋಚಿಸಿ ಈ ದಿಸೆಯಲ್ಲಿ ಸಂವಿಧಾನದಲ್ಲಿ ಸೂಕ್ತ ತಿದ್ದುಪಡಿ ತರಲು ಕೇಂದ್ರದ ಮೇಲೆ ಒತ್ತಾಯ ತರಲು ಪ್ರಯತ್ನ ಮಾಡುವುದಾಗಿ ಘೋಷಿಸಿತ್ತು. ತೀರ್ಪು ಬಂದು ಎಷ್ಟು ವರ್ಷಗಳಾಗಿವೆ? ಶಿಕ್ಷಣ ಮಾಧ್ಯಮದ ಸ್ಥಿತಿಯಲ್ಲಿ ಏನಾದರೂ ಬದಲಾವಣೆ ಕಂಡಿದೆಯೇ? ಬದಲಿಗೆ, ಸರ್ಕಾರವೇ ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಶಾಲೆಗಳಲ್ಲೂ ತೆರೆಯುವ ಇಚ್ಛೆಯನ್ನು ತೋರಿತು (ಅಥವಾ, ಇಂಗ್ಲಿಷ್‌ ಮಾಧ್ಯಮ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನೇ?) ಅಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸುವ ವಿಚಾರ ಮಾಡಿತು! ಕನ್ನಡ ಮಾಧ್ಯಮದ ಕಲಿಕೆಗೆ ಕರ್ನಾಟಕದಲ್ಲಿ ಇಂಥ ದುಃಸ್ಥಿತಿ.

ಕನ್ನಡ ತಲೆಯೆತ್ತುವ ಬಗೆ ಹೇಗೆ ಎಂದು ದಶಕಗಳ ಹಿಂದೆ ಸಾಹಿತಿಗಳು ಕೊರಗಿದರು. ಈಗ ಕನ್ನಡವನ್ನು ಕರ್ನಾಟಕದಲ್ಲೇ ಉಳಿಸುವ ಬಗೆ ಹೇಗೆ ಎಂದು ತಲೆಕೆಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆಯೆಂದರೆ ತಪ್ಪಾಗದು. ಬಾಯಿಮಾತಿನಲ್ಲಿ ಭಾಷೆ ಉದ್ಧಾರವಾದೀತೆ?

ಸಾಮಗ ದತ್ತಾತ್ರಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT