ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸಂಸ್ಕೃತಕ್ಕೆ ಅನ್ಯ ಭಾಷೆ ಪ್ರತಿಸ್ಪರ್ಧಿಯಲ್ಲ

Last Updated 27 ಆಗಸ್ಟ್ 2021, 19:54 IST
ಅಕ್ಷರ ಗಾತ್ರ

ಸಂಸ್ಕೃತ ಭಾಷೆಯ ವಾಸ್ತವಾಂಶಗಳನ್ನು ಎತ್ತಿ ತೋರಿಸುವ ಭರದಲ್ಲಿ ಡಾ. ಆರ್.ಲಕ್ಷ್ಮೀನಾರಾಯಣ ಅವರು ಕೆಲವು ಬೀಸು ಹೇಳಿಕೆ ನೀಡಿದ್ದಾರೆ(ಪ್ರ.ವಾ., ಆ. 27). ಸಂಸ್ಕೃತವನ್ನು ಮತ್ತೆ ಜನಬಳಕೆಗೆ ತರಲು ‘ಬೆಟ್ಟಕ್ಕೆ ಕಲ್ಲು ಹೊರುವ ವ್ಯರ್ಥ ಸಾಹಸ’ವನ್ನು ಅಸಂಖ್ಯಾತ ಭಾಷಾಪ್ರೇಮಿಗಳು ಮಾಡುತ್ತಿದ್ದಾರೆ. ಅದು ಯಶಸ್ವಿ ಸಾಹಸ ಅನಿಸಿಕೊಂಡಿದೆ. ‘ಗಿಳಿಪಾಠ’ದಂತೆ ಲೇಖಕರಿಗೆ ಕೇಳಿಸಿದ ವ್ಯಾವಹಾರಿಕ ಸಂಸ್ಕೃತದ ಕಲಿಕೆಯು ಜನರನ್ನು ಭಾಷೆಯ ಆಳವಾದ ಅಧ್ಯಯನದತ್ತ ಪ್ರೇರೇಪಿಸುತ್ತಿದೆ. ಸಂಸ್ಕೃತದ ವ್ಯಾಕರಣವನ್ನು ಅಭ್ಯಾಸ ಮಾಡಿದರೆ, ಕಾಲಕಾಲಕ್ಕೆ ನಡೆದ ಭಾಷಾ ಬದಲಾವಣೆಗಳನ್ನು ಹೇಗೆ ದಾಖಲಿಸಲಾಗಿದೆ ಎಂಬ ಅರಿವು ದೊರೆಯುತ್ತದೆ.

ಸಂಸ್ಕೃತವು ಸಾವಿರಾರು ಭಾಷೆಗಳ ಮುಖಾಂತರ ನಿಸ್ಸಂಶಯವಾಗಿ ಜನಬಳಕೆಯಲ್ಲಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಕನ್ನಡ ಅಥವಾ ಅನ್ಯ ಭಾಷೆಗಳು ಸಂಸ್ಕೃತದ ಪ್ರತಿಸ್ಪರ್ಧಿಗಳಲ್ಲ, ಎಲ್ಲವೂ ಒಂದಕ್ಕೊಂದು ಪೂರಕವಾಗಿವೆ. ಭಾಷಾ ಕಲಿಕೆಯ ಉತ್ಸಾಹಕ್ಕೆ ಭಾಷೆ- ದೇಶ- ಪ್ರದೇಶದ ಬೇಲಿಗಳನ್ನು ಹಾಕುವುದು ಸರ್ವಥಾ ತಪ್ಪು. ಶಾಲೆ ಕಾಲೇಜುಗಳಲ್ಲಿ ಸಂಸ್ಕೃತವನ್ನು ನಿರರ್ಗಳವಾಗಿ ಮಾತನಾಡಲು ಕಲಿಸುತ್ತಿರುವ ಸಾವಿರಾರು ಶಿಕ್ಷಕರ ಉದಾಹರಣೆಗಳಿವೆ. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಸಂಸ್ಕೃತದಲ್ಲಿ ಮಾತನಾಡುತ್ತಿದ್ದಾರೆ, ಕಲಿಯುತ್ತಿದ್ದಾರೆ ಎಂದು ಆತ್ಮವಿಶ್ವಾಸದಿಂದ ಮತ್ತು ನನ್ನ ಅನುಭವದ ಆಧಾರದಿಂದ ಹೇಳಬಲ್ಲೆ. ನೂತನ ಶಿಕ್ಷಣ ನೀತಿ ಏಕಕಾಲಕ್ಕೆ ಎರಡು ಪದವಿಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟಿದೆ. ನನ್ನ ಒಬ್ಬ ವಿದ್ಯಾರ್ಥಿನಿ ಐಐಟಿ ಚೆನ್ನೈಯಲ್ಲಿ ಕಂಪ್ಯೂಟರ್ ಪದವಿಯ ಜೊತೆಗೆ ಚಿನ್ಮಯ ಯೂನಿವರ್ಸಿಟಿಯಲ್ಲಿ ಸಂಸ್ಕೃತದ ಪದವಿಯನ್ನೂ ಅಭ್ಯಾಸ ಮಾಡುತ್ತಿದ್ದಾಳೆ. ಸಂಸ್ಕೃತದ ಲಾಭಗಳ ಬಗ್ಗೆ ಅತಿರಂಜಿತ ಹೇಳಿಕೆಗಳು ತಪ್ಪು.

ವೇದಾ ಆಠವಳೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT