ಶುಕ್ರವಾರ, ಆಗಸ್ಟ್ 19, 2022
22 °C

ವಾಚಕರ ವಾಣಿ: ವಿಶ್ವಸಂಸ್ಥೆಯ ಮಹತ್ವ ಪುಸ್ತಕದಲ್ಲಿ ಮಾತ್ರವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾವೆಲ್ಲ 30 ವರ್ಷಗಳ ಹಿಂದೆ ಶಾಲೆಗಳಲ್ಲಿ ಓದುವಾಗ ವಿಶ್ವಸಂಸ್ಥೆಯ ಶಕ್ತಿ, ಸಾಮರ್ಥ್ಯದ ಬಗೆಗೆ ಸಮಾಜ ವಿಜ್ಞಾನ ಪಾಠದಲ್ಲಿ ಬಹಳಷ್ಟು ವಿವರಣೆ ಇರುತ್ತಿತ್ತು. ಈಗಲೂ ಅನೇಕ ಸಾಧನೆಯ ವಿಷಯಗಳನ್ನು ನೀಡಲಾಗಿದೆ. ಪಠ್ಯ ವಿಷಯಗಳಿಗೆ ಪೂರಕವಾಗಿ ನಮ್ಮ ಶಿಕ್ಷಕರು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ, ಕಾಂಗೊ ದೇಶದಲ್ಲಿ ಮಾಡಿದ ಕಾರ್ಯ, ಭಾರತ- ಪಾಕಿಸ್ತಾನ ಯುದ್ಧ, ಇರಾಕ್- ಇರಾನ್ ಯುದ್ಧ ನಿಲ್ಲಿಸಿದ ಉದಾಹರಣೆಗಳನ್ನು ಸೋದಾಹರಣವಾಗಿ ನೀಡುವ ಮೂಲಕ ವಿಶ್ವಸಂಸ್ಥೆ ಸ್ಥಾಪನೆಯ ಉದ್ದೇಶವನ್ನು ಸವಿವರವಾಗಿ ನೀಡುತ್ತಿದ್ದರು. ಇದರಿಂದ ವಿಶ್ವಸಂಸ್ಥೆಯ ಬಗೆಗೆ ನಮ್ಮಲ್ಲಿ ಗೌರವ, ಹೆಮ್ಮೆಯ ಭಾವನೆ ಮೂಡುತ್ತಿತ್ತು. ಜಗತ್ತಿನಲ್ಲಿ ಶಕ್ತಿಯುತ ರಾಷ್ಟ್ರಗಳು ಯುದ್ಧ ಮಾಡಲಾರವು, ಹೀಗಾಗಿ ಜಗತ್ತು ಶಾಂತಿಯುತವಾಗಿ ಮುಂದುವರಿಯುತ್ತದೆ ಎನಿಸುತ್ತಿತ್ತು.

ಈಗ ರಷ್ಯಾ– ಉಕ್ರೇನ್ ಯುದ್ಧವನ್ನು ನೋಡಿದಾಗ, ವಿಶ್ವಸಂಸ್ಥೆ ಬಲಿಷ್ಠವಾಗಿರುವುದು ವಾಸ್ತವವಾಗಿ ಶಾಲಾ ಪಠ್ಯಕ್ರಮದಲ್ಲಿ ಮಾತ್ರ ಅನಿಸುತ್ತಿದೆ. ಬಲಿಷ್ಠ ರಾಷ್ಟ್ರವಾದ ರಷ್ಯಾವೂ ಚಿಕ್ಕ ದೇಶ ಉಕ್ರೇನ್ ಮೇಲೆ ಎರಗುವುದನ್ನು ನೋಡಿದರೆ, ವಿಶ್ವಸಂಸ್ಥೆಯು ಅಸಲಿ ಸಾಮರ್ಥ್ಯ ತೋರುವುದು ಏನಿದ್ದರೂ ಮುಂದುವರಿಯುತ್ತಿರುವ ಮತ್ತು ಹಿಂದುಳಿದ ದೇಶಗಳ ಮೇಲೆ ಮಾತ್ರ ಎಂಬುದು ತಿಳಿಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಸಾಮರ್ಥ್ಯವೂ ಅದೇ ರೀತಿ ಆಗಿದೆ. ಕೋವಿಡ್- 19 ಜಗತ್ತಿಗೆ ಹರಡಲು ಕಾರಣವಾಗಿದ್ದು ಚೀನಾವೆಂದು ಹಲವು ರಾಷ್ಟ್ರಗಳು ಪ್ರತಿಪಾದಿಸಿದರೂ ಸಂಸ್ಥೆಯು ಕೋವಿಡ್‌ಪೀಡಿತ ದೇಶಗಳ ಅಹವಾಲು ಕೇಳುವ ಹೃದಯವಂತಿಕೆಯನ್ನು ತೋರಲಿಲ್ಲ. ಹಾಗಿದ್ದಲ್ಲಿ ಈ ಸಂಸ್ಥೆಗಳ ಮಾನವೀಯ ನಡೆ ಪುಸ್ತಕಗಳಲ್ಲಿ ಮಾತ್ರವೇ?

ಮಲ್ಲಪ್ಪ ಫ. ಕರೇಣ್ಣನವರ, ಮೋಟೆಬೆನ್ನೂರು, ಬ್ಯಾಡಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು