ಗುರುವಾರ , ನವೆಂಬರ್ 21, 2019
27 °C

ಶಾಲೆಯಲ್ಲಿ ಬಿಸಿಯೂಟ ಅಡುಗೆ ಸಿಬ್ಬಂದಿಯ ಅಳಲು ಆಲಿಸಿ

Published:
Updated:

ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿ, ಅರೆಮನಸ್ಸಿನಿಂದ ಕೆಲಸಕ್ಕೆ ಬರುತ್ತಿದ್ದಾರೆ. ಬೆಳಿಗ್ಗೆ 9.30ಕ್ಕೆ ಹಾಲು ಕಾಯಿಸಲು ಬರಬೇಕೆಂದು ಹೇಳಿದರೆ ‘ನಮಗೆ ಕೊಡುವ ಸಂಬಳ ಏನೇನೂ ಅಲ್ಲ’ ಎನ್ನುತ್ತಾರೆ. ಅವರಿಗೆ ತಿಂಗಳಿಗೆ ಸಿಗುತ್ತಿರುವುದು 2,700 ರೂಪಾಯಿ. ‘ನಾವು ಹೊರಗಡೆ ಕೆಲಸಕ್ಕೆ ಹೋದರೆ ತಿಂಗಳಿಗೆ 8 ಸಾವಿರದಿಂದ 10 ಸಾವಿರ ರೂಪಾಯಿವರೆಗೂ ಸಂಪಾದಿಸುತ್ತೇವೆ. ಬೇಡವಾದರೆ ಈಗಲೇ ಕಳುಹಿಸಿಬಿಡಿ’ ಎನ್ನುತ್ತಾರೆ. ‘ನಾವು ಇಲ್ಲಿ ಅಡುಗೆ ಮಾಡಿ, ಮಕ್ಕಳಿಗೆ ಬಡಿಸಿ, ಎಲ್ಲವನ್ನೂ ತೊಳೆದು ಹೋಗುವಷ್ಟರಲ್ಲಿ ಮಧ್ಯಾಹ್ನ 3 ಗಂಟೆಯಾಗುತ್ತದೆ. ಆ ಬಳಿಕ ಬೇರೆ ಎಲ್ಲಿಗಾದರೂ ಕೂಲಿಗೆ ಹೋಗೋಣ ಎಂದರೆ ಆಗ ನಮ್ಮನ್ನು ಯಾರು ಕರೆಯುತ್ತಾರೆ? ಈ ಸಂಬಳವನ್ನೇ ನಂಬಿಕೊಂಡು ಜೀವನ ಮಾಡುವುದು ಹೇಗೆ? ನಮಗೂ ಗಂಡ–ಮಕ್ಕಳು ಇಲ್ಲವೇ? ಸಂಬಳವನ್ನಾದರೂ ಹೆಚ್ಚಿಸಿದರೆ ಹೇಗೋ ನಿಭಾಯಿಸಬಹುದು’ ಎನ್ನುತ್ತಾರೆ. ಇವರ ಅಳಲನ್ನು ಸರ್ಕಾರ ಗಮನಿಸಲಿ.

–ಸಾ.ಮ. ಶಿವಮಲ್ಲಯ್ಯ, ಸಾಸಲಾಪುರ, ಕನಕಪುರ

ಪ್ರತಿಕ್ರಿಯಿಸಿ (+)