ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕರಣೀಯ ಸಾಧನೆ

Last Updated 4 ಡಿಸೆಂಬರ್ 2020, 20:30 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಪ್ರಾಥಮಿಕ ಶಾಲೆಯ ಶಿಕ್ಷಕ ರಂಜಿತ್ ಸಿಂಹ ದಿಸಾಳೆ ಅವರು ಪ್ರತಿಷ್ಠಿತ ‘ಗ್ಲೋಬಲ್‌ ಟೀಚರ್‌ ಪ್ರೈಜ್‌’ ಗೌರವಕ್ಕೆ ಪಾತ್ರರಾಗಿರುವುದು ದೇಶದ ಇಡೀ ಪ್ರಾಥಮಿಕ ಶಾಲಾ ಶಿಕ್ಷಕ ಸಮುದಾಯಕ್ಕೆ ಸಂದ ಗೌರವವಾಗಿದೆ. ಅದೂ ಮಕ್ಕಳಿಗೆ ಕನ್ನಡ ಬೋಧಿಸಲು ಅವರು ಅನುಸರಿಸಿದ ಮಾರ್ಗಕ್ಕಾಗಿ ಈ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಎಲ್ಲ ಶಾಲೆಗಳಲ್ಲಿ ಈ ರೀತಿಯ ವಿನೂತನ ಮಾದರಿಯ ಕಲಿಕಾ ಪ್ರಯತ್ನಗಳ ಅಗತ್ಯವಿದೆ. ಕಾರವಾರದ ಗಡಿ ಶಾಲೆಗಳಲ್ಲಿ ಕೊಂಕಣಿ ಭಾಷೆಯ ಮೂಲಕ ಕನ್ನಡ ಕಲಿಸುವುದು, ಬೆಳಗಾವಿಯ ಗಡಿ ಭಾಗದಲ್ಲಿ ಮರಾಠಿ ಮೂಲಕ ಕನ್ನಡ, ಕನ್ನಡದ ಮೂಲಕ ಮರಾಠಿ ಹೇಳಿಕೊಡುವುದು ಅಲ್ಲಲ್ಲಿ ಮೊದಲಿನಿಂದಲೂ ನಡೆಯುತ್ತಿದೆ. ಮಕ್ಕಳ ಮನಸ್ಸು ಮುಟ್ಟಲು ಮತ್ತು ಕಲಿಕೆಯನ್ನು ಗಟ್ಟಿಗೊಳಿಸುವ ದಿಸೆಯಲ್ಲಿ ಇದು ಅನಿವಾರ್ಯ ಅಗತ್ಯ. ಆಂಧ್ರಪ್ರದೇಶ, ತಮಿಳುನಾಡು ಗಡಿ ಭಾಗಗಳಲ್ಲೂ ತುಳು ಪರಿಸರದಲ್ಲೂ ಈ ಕ್ರಮ ಇರಬಹುದು.

ಉತ್ತರ ಕರ್ನಾಟಕದ ಲಂಬಾಣಿ ತಾಂಡಾಗಳ ಮಕ್ಕಳಿಗೆ ನಮ್ಮ ಶಿಕ್ಷಕರು ಬಹಳ ಪರಿಶ್ರಮದಿಂದ ಕನ್ನಡ ಕಲಿಸುತ್ತ ತಾಂಡಾದ ಚಿತ್ರಣವನ್ನೇ ಬದಲಿಸಿದ್ದಾರೆ. ಗ್ರಾಮೀಣ ಶಾಲೆಗಳಲ್ಲಿ ಹೊಸ ಹೊಸ ಕಲಿಕಾ ಕ್ರಮಗಳಿಂದ ಶಿಕ್ಷಕರು ಮಕ್ಕಳ ಮನ ಗೆಲ್ಲಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಬೇರೆಯದೇ ಆದ ಸಮಸ್ಯೆಗಳಿರುತ್ತವೆ. ಅಂಥಲ್ಲಿ ಶಿಕ್ಷಕರಿಗೆ ಸ್ವಲ್ಪ ಸ್ವಾತಂತ್ರ್ಯ ನೀಡಿದರೆ ಅವರು ಹೊಸ ಹಾದಿ ತುಳಿಯಬಲ್ಲರು. ಹಾಗೆ ಅನೇಕರು ತಾವೇ ಸ್ವತಂತ್ರ ಮಾರ್ಗ ಹುಡುಕಿಕೊಂಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಲಿಕೆಯಲ್ಲಿ ಮಾರ್ಗದರ್ಶಕವಾಗಬಲ್ಲ ಜಪಾನಿ ಭಾಷೆ ಮೂಲದ ‘ತೊತ್ತೊ-ಚಾನ್’, ಗುಜರಾತಿ ಭಾಷೆ ಮೂಲದ ‘ಹಗಲುಗನಸು’ ಕೃತಿಗಳು ಕೈಪಿಡಿ ಆಗಬಲ್ಲವು. ಶಿಕ್ಷಕರಲ್ಲಿ ಅಪಾರ ಸೃಜನಶೀಲ ಶಕ್ತಿ, ಸಾಮರ್ಥ್ಯ ಇರುತ್ತದೆ. ಅದನ್ನು ಅವರು ಬಳಸಿಕೊಳ್ಳಬೇಕಷ್ಟೆ.

ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT