ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬುದ್ಧತೆ ಇಲ್ಲದ ವಿರೋಧ

Last Updated 3 ಫೆಬ್ರುವರಿ 2021, 17:23 IST
ಅಕ್ಷರ ಗಾತ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಕುರಿತು ಸಮಾಜದ ವಿವಿಧ ವರ್ಗಗಳ ಜನರು ಬಗೆಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷಗಳ ಮುಖಂಡರು ಮತ್ತು ಆಡಳಿತ ಪಕ್ಷದ ಮುಖಂಡರು ಏನು ಹೇಳುತ್ತಾರೆ ಎಂಬ ಬಗ್ಗೆ ಜನರು ಎಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ಕಾರಣ, ಸ್ವಾತಂತ್ರ್ಯ ಬಂದಾಗಿನಿಂದ ನಾವು ನೋಡುತ್ತಿರುವುದು ಆಡಳಿತ ಪಕ್ಷದವರೆಲ್ಲ ಬಜೆಟ್ ಅನ್ನು ಹಾಡಿಹೊಗಳಿದರೆ, ವಿರೋಧ ಪಕ್ಷದವರೆಲ್ಲ ಖಂಡತುಂಡವಾಗಿ ಖಂಡಿಸುವುದು ಅಥವಾ ಅದು ಜನಪರವಲ್ಲದ ಅತ್ಯಂತ ಪ್ರತಿಗಾಮಿ ಬಜೆಟ್ ಎಂದು ಹೇಳುವುದು. ಇದು ನಿಜಕ್ಕೂ ಜನರ ವಿನೋದಕ್ಕೆ ಕಾರಣವಾಗುವುದರ ಹೊರತು ಬೇರೇನೂ ಅಲ್ಲ.

ಆರ್ಥಿಕ ತಜ್ಞರು ಮಾಡುವ ವಿಶ್ಲೇಷಣೆ ಮಾತ್ರ ವಸ್ತುನಿಷ್ಠವಾಗಿ ಇರುವಂಥದ್ದು. ಹಿಂದೊಮ್ಮೆ ಪತ್ರಿಕೆಯೊಂದರಲ್ಲಿ ಓದಿದ್ದ ನಗೆಚಾಟಿಕೆ ನೆನಪಾಗುತ್ತದೆ. ವಿರೋಧ ಪಕ್ಷದ ಮುಖಂಡರೊಬ್ಬರು ಪತ್ರಿಕಾ ವರದಿಗಾರನೊಬ್ಬನನ್ನು ಕರೆದು, ‘ನಾಳೆ ಅರ್ಥ ಸಚಿವರು ಬಜೆಟ್ ಮಂಡಿಸಲಿದ್ದಾರೆ. ನಾನು ವೈಯಕ್ತಿಕ ಕೆಲಸದ ಮೇಲೆ ಎಲ್ಲೋ ಹೋಗುತ್ತಾ ಇದ್ದೀನಿ. ನನ್ನ ಅಭಿಪ್ರಾಯ ಬರೆದುಕೋ ಎಂದು ಹೇಳಿ- ಈ ಬಜೆಟ್‍ನಿಂದ ಸಮಾಜದ ಯಾವ ಒಂದು ವರ್ಗಕ್ಕೂ ಏನೊಂದೂ ಅನುಕೂಲವಾಗಿಲ್ಲ. ಅತ್ಯಂತ ನಿರಾಶಾದಾಯಕವೂ ಪ್ರತಿಗಾಮಿಯೂ ಯಾವುದೇ ವಿಷನ್ ಇಲ್ಲದುದೂ ಆದ ಬಜೆಟ್ ಇದು’ ಎಂದು ಹೇಳಿದರಂತೆ.

ಪತ್ರಿಕೆಗಳು ಪಕ್ಷದ ಒಲವಿನಿಂದ ಪೂರ್ತಿ ಮುಕ್ತವಾಗಿಲ್ಲವಾದರೂ ಅವುಗಳ ಅಭಿಪ್ರಾಯ ಅಥವಾ ಸಂಪಾದಕೀಯಗಳೇ ರಾಜಕಾರಣಿಗಳ ಅಭಿಪ್ರಾಯಗಳಿಗಿಂತ ಹೆಚ್ಚು ನಂಬಲರ್ಹವಾದವು. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ನಮ್ಮ ಪ್ರಜಾಪ್ರಭುತ್ವದ ವಿರೋಧ ಪಕ್ಷಗಳಲ್ಲಿ, ಅವು ಯಾವುವೇ ಆಗಿದ್ದರೂ (ಕಾರಣ, ಇಂದು ಆಡಳಿತ ಪಕ್ಷವಾಗಿರುವುದು ಮುಂದಿನ ವರ್ಷಗಳಲ್ಲಿ ವಿರೋಧ ಪಕ್ಷವಾಗಬಹುದು) ರಚನಾತ್ಮಕ ವಿರೋಧ ಮಾಡುವ ಪ್ರಬುದ್ಧತೆಯನ್ನು ರೂಢಿಸಿಕೊಳ್ಳದೆ, ವಿರೋಧಕ್ಕೋಸ್ಕರ ವಿರೋಧ ಎಂಬ ಶೈಶವಾವಸ್ಥೆಯ ಪ್ರಜಾಪ್ರಭುತ್ವದ ರೀತಿಯನ್ನೇ ಇತ್ತೀಚಿನ ವರ್ಷಗಳಲ್ಲಿ ನಾವು ಕಾಣುತ್ತಿರುವುದು.

ಆರ್.ಲಕ್ಷ್ಮೀನಾರಾಯಣ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT