ಮಂಗಳವಾರ, ಜುಲೈ 27, 2021
21 °C

ವಾಚಕರ ವಾಣಿ: ಗಂಡುಮಕ್ಕಳು ಸಂವೇದನಾಶೀಲರಾಗಲಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಪಿರಿಯಾಪಟ್ಟಣದಲ್ಲಿ ಮಗಳನ್ನು ತಂದೆಯೇ ಕುತ್ತಿಗೆ ಸೀಳಿ ಕೊಲೆ ಮಾಡಿರುವುದು (ಪ್ರ.ವಾ., ಜೂನ್‌ 19) ಜಾತೀಯತೆಯ, ಪುರುಷ ಅಹಂಕಾರದ ಅತಿರೇಕದ ಘಾತುಕತನ ವಾಗಿದೆ. ಇಂತಹ ಕ್ರೂರತನಕ್ಕೆ ಒಡ್ಡಿಕೊಳ್ಳುವ ಮನಸ್ಸು ಈ ಗಂಡಸರಾದ ಅಪ್ಪ-ಅಣ್ಣಂದಿರಿಗೇಕೆ ಇರುತ್ತದೆ? ತನ್ನ ಮಗಳ, ಸಹೋದರಿಯ ಪ್ರೀತಿಯ ಮನಸ್ಸನ್ನು, ಆಕೆಗೂ ಇರುವ ಸಂವಿಧಾನದತ್ತ ಸಮಾನತೆ, ಸಮಾನ ಆಯ್ಕೆ, ಸಮಾನ ಗೌರವದ ಹಕ್ಕುಗಳನ್ನು ಒಪ್ಪಿಕೊಳ್ಳುವ ಮನಸ್ಸೇಕೆ ಇವರಿಗೆ ಬರಲೊಲ್ಲದು?

ಮನುಷ್ಯಸಮಾಜದ ಇಂತಹ ಕ್ರೂರ ಕೃತ್ಯಗಳಿಗೆ ವಿಚಾರವಂತ ಹೆಣ್ಣುಮಕ್ಕಳು ಮತ್ತು ಮಹಿಳಾಸಂವೇದಿ ಪುರುಷರು ಧಿಕ್ಕಾರ ಹೇಳುತ್ತಲೇ ಇದ್ದಾರೆ. ಶತಶತಮಾನಗಳಿಂದ ಇಂದಿನವರೆಗೂ ಸಮಾನತೆಗೆ ಆಗ್ರಹಿಸಿ ಹೋರಾಡುತ್ತಿರುವವರ ಶ್ರಮ ಸಾರ್ಥಕವಾಗುವುದು ಯಾವಾಗ? ಪ್ರಪಂಚದಾದ್ಯಂತ ನಡೆಯುತ್ತಿರುವ ಇಂತಹ ಹೋರಾಟಗಳು ಮತ್ತು ಅಂತರರಾಷ್ಟ್ರೀಯ ಒಪ್ಪಂದಗಳ ಫಲವೆಂಬಂತೆ ಸಮಾಜದಲ್ಲಿ ಗಂಡಸರ ದೌರ್ಜನ್ಯ, ಹಲ್ಲೆ, ಶೋಷಣೆಗಳನ್ನು ಹತ್ತಿಕ್ಕಲು ಬಂದ ಅನೇಕ ಕಾಯ್ದೆಗಳಿಗೆ ಪುರುಷ ಅಹಂಕಾರಕ್ಕೆ ಪೆಟ್ಟುಬೀಳದಂತೆ ಬಹಳ ಎಚ್ಚರಿಕೆಯಿಂದ ಹೆಸರಿಡಲಾಗಿದೆ: ದೇವದಾಸಿ ಪದ್ಧತಿ ನಿರ್ಮೂಲನಾ ಕಾಯ್ದೆ, ವರದಕ್ಷಿಣೆ ಕಿರುಕುಳ/ ಹತ್ಯೆ ನಿಷೇಧ ಕಾಯ್ದೆ, ಭ್ರೂಣಹತ್ಯೆ ತಡೆ ಕಾಯ್ದೆ, ಜಾತಿಪದ್ಧತಿ ನಿಷೇಧ ಕಾಯ್ದೆ, ಕೌಟುಂಬಿಕ ಕಿರುಕುಳ, ದೌರ್ಜನ್ಯ ತಡೆ ಕಾಯ್ದೆ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ಕಿರುಕುಳ, ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯ, ಹಲ್ಲೆ ತಡೆ ಕಾಯ್ದೆ ಇತ್ಯಾದಿ. ಈ ಕಾಯ್ದೆಗಳ ಗುರಿಯು ಇಂತಹ ಕೃತ್ಯಗಳ ನಿಗ್ರಹ ಅಥವಾ ಅಂತ್ಯ ಎಂದಿಲ್ಲದೆ, ಬರಿಯ ತಡೆ (ಪ್ರಾಹಿಬಿಷನ್) ಮತ್ತು ನಿಯಂತ್ರಣವೆಂದು (ರೆಗ್ಯುಲೇಷನ್) ಇರುವುದರಿಂದ ಇವುಗಳನ್ನು ಕೊನೆಗಾಣಿಸುವಲ್ಲಿ ನಾವು ಸೋಲುತ್ತಿದ್ದೇವೆ.

ನಮ್ಮ ಸಮಾಜದ, ಕುಟುಂಬದ, ನೆರೆಹೊರೆಯ ಗಂಡಸರು ನಮ್ಮ ಮೇಲೆ ಇಂತಹ ದೌರ್ಜನ್ಯಗಳನ್ನು ನಡೆಸದಿದ್ದರೆ ನಮಗೆ ಈ ಕಾನೂನುಗಳೇ ಬೇಕಿಲ್ಲ. ಸುರಕ್ಷಿತವಾಗಿ ಜನ್ಮತಳೆದು, ಪ್ರೀತಿ ವಾತ್ಸಲ್ಯಗಳಲ್ಲಿ ಮಿಂದು, ಧೈರ್ಯದಿಂದ ಬೆಳೆದು ಸ್ವತಂತ್ರವಾಗಿ ಜೀವಿಸಬಹುದು. ಅಂತಹ ಸಮಾಜವನ್ನು ನಾವು ನಿರ್ಮಿಸಬೇಕಾಗಿದೆ. ಕ್ರೂರ ಸಮಾಜವನ್ನು ಪೋಷಿಸುವ ಮನೋಭಾವವನ್ನು ನಾವಿಂದು ತಿರಸ್ಕರಿಸಬೇಕಾಗಿದೆ. ಈ ದಿಸೆಯಲ್ಲಿ ನಮ್ಮ ಮಕ್ಕಳನ್ನು ವಿಚಾರವಾದಿಗಳಾಗಿ ಬೆಳೆಸಬೇಕಿದೆ. ವಿಶೇಷವಾಗಿ ಗಂಡುಮಕ್ಕಳನ್ನು ಸೂಕ್ಷ್ಮಮತಿ ಹಾಗೂ ಸಂವೇದನಾಶೀಲರನ್ನಾಗಿ ಬೆಳೆಸುವ ಅಗತ್ಯವಿದೆ.

ಅಖಿಲಾ ವಿದ್ಯಾಸಂದ್ರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.