ಸೋಮವಾರ, ನವೆಂಬರ್ 18, 2019
24 °C

ವಾಚಕರವಾಣಿ | ಮನೆಹಾಳರಲ್ಲ; ಸುಸಂಸ್ಕೃತ ನಾಗರಿಕರು

Published:
Updated:

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರ ‘ಮನೆಹಾಳರು’ ಕುರಿತ ಹೇಳಿಕೆ ಮತ್ತು ಅದಕ್ಕೆ ಖಾರವಾಗಿ 
ಪ್ರತಿಕ್ರಿಯಿಸಿರುವ ಕೆಲವು ಪ್ರತಿಷ್ಠಿತ ವ್ಯಕ್ತಿಗಳ ಹೇಳಿಕೆಗಳನ್ನು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸ್ವಲ್ಪಮಟ್ಟಿಗೆ ಮಾತ್ರ ನೋಡಿದ್ದೇನೆ. ಅದರಲ್ಲಿ ಭಾಗಿಯಾಗಿಲ್ಲದ ನಾನು ಇಷ್ಟು ಮಾತ್ರ ಹೇಳಲಿಚ್ಛಿಸುತ್ತೇನೆ. ಹಿಂದಿನ ಸರ್ಕಾರದ ಅವಧಿಯಲ್ಲಿ ವಿಶೇಷವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಪ್ರಾಧಿಕಾರ, ಅಕಾಡೆಮಿಗಳ ಜವಾಬ್ದಾರಿ ಒಪ್ಪಿಕೊಂಡಿದ್ದು ಕೆಲವು ಸ್ನೇಹಿತರು. ಉದಾ: ಡಾ. ಕೆ.ಮರುಳಸಿದ್ಧಪ್ಪ (ಕುವೆಂಪು ಭಾಷಾ ಭಾರತಿ ಪ್ರಾಧಿಕಾರ), ಡಾ. ಎಸ್.ಜಿ. ಸಿದ್ಧರಾಮಯ್ಯ (ಕನ್ನಡ ಅಭಿವೃದ್ಧಿ ಪ್ರಾಧಿಕಾರ), ನಾಗತಿಹಳ್ಳಿ ಚಂದ್ರಶೇಖರ (ಕರ್ನಾಟಕ ಚಲನಚಿತ್ರ ಅಕಾಡೆಮಿ) ಮತ್ತು ವಸುಂಧರಾ ಭೂಪತಿ (ಕನ್ನಡ ಪುಸ್ತಕ ಪ್ರಾಧಿಕಾರ).

ಇವರೆಲ್ಲ, ತಮ್ಮ ತಮ್ಮ ಕ್ಷೇತ್ರಗಳ ಜ್ಞಾನಕೋಶದಂತಿದ್ದು ನಮ್ಮ ನಾಡಿನ ಸುಸಂಸ್ಕೃತ ನಾಗರಿಕರು. ಇವರ‍್ಯಾರೂ ಯಾವುದೇ ನೆಲೆಗಟ್ಟಿನಲ್ಲಿಯೂ ‘ಮನೆಹಾಳ’ರಲ್ಲ. ಅಂತಹ ಹಣೆಪಟ್ಟಿಗೆ ಅವರು ಅರ್ಹರಾಗಿರುವುದಿಲ್ಲವೆಂದು, ಅತೀವ ಅನುಭವದ ವಿಶ್ವಾಸದಿಂದ ಹೇಳಬಯಸುತ್ತೇನೆ.

ಬಿ.ಕೆ.ಚಂದ್ರಶೇಖರ್, ಬೆಂಗಳೂರು

 

‘ಮನೆಹಾಳರು’ ಹೇಳಿಕೆ: ಪರಾಮರ್ಶೆ ನಡೆಯಲಿ

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರ ಸ್ವಾಗತ ಸಮಾರಂಭದಲ್ಲಿ, ಸಚಿವ ಸಿ.ಟಿ.ರವಿ ಅವರು ‘ಮನೆಹಾಳರು’ ಎಂಬ ಪದವನ್ನು ಬಳಸಿದ್ದು, ಮನಸ್ಸನ್ನು ಮುರಿಯುವ ಮನೋಧರ್ಮ ಮತ್ತು ಅಂಥ ವ್ಯಕ್ತಿಗಳ ವಿರುದ್ಧವಾಗಿತ್ತೇ ವಿನಾ ಸಾಹಿತಿಗಳನ್ನು ಕುರಿತದ್ದಾಗಿರಲಿಲ್ಲ. ಆದರೆ, ಅದು ಸಾಹಿತಿಗಳು ಹಾಗೂ ಕಲಾವಿದರನ್ನು ಕುರಿತದ್ದು ಎಂದು ಕೆಲವರು ಹೇಳುತ್ತಿರುವುದು ಸತ್ಯವೇ ಎಂಬುದರ ಬಗ್ಗೆ ಪರಾಮರ್ಶೆಗಳು ನಡೆಯಲಿ. ವಿರೋಧಕ್ಕಾಗಿ ವಿರೋಧ, ಪರಕ್ಕಾಗಿ ಪರ ನಡೆದರೆ ಅದು ಸಂಸ್ಕೃತಿ ಆಗದು. ಅದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಮತ್ತೊಂದು ವಾಗ್ವಾದದಂತಾಗುತ್ತದೆ.

ಕುವೆಂಪು ಅವರು ಜ್ಞಾನಪೀಠ ಪ್ರಶಸ್ತಿ ಪಡೆದಾಗ, ದೇಶವನ್ನು ಒಟ್ಟುಗೂಡಿಸುವ ಸಾಹಿತ್ಯವನ್ನು ದೈವೀ ಸಾಹಿತ್ಯ ಎಂದೂ ದೇಶವನ್ನು ಒಡೆಯುವ ಸಾಹಿತ್ಯವನ್ನು ರಾಕ್ಷಸೀ ಸಾಹಿತ್ಯ ಎಂದೂ ಕರೆದಿದ್ದರು. ಅದರ ಉದ್ದೇಶ, ಸಾಹಿತ್ಯವು ದೇಶವನ್ನು, ಮನಸ್ಸನ್ನು ಒಂದುಗೂಡಿಸಬೇಕು ಎಂಬುದಾಗಿತ್ತೇ ವಿನಾ ಸಾಹಿತಿ ಮತ್ತು ಸಾಹಿತ್ಯವನ್ನು ಅಪಮಾನಿಸುವುದಾಗಿರಲಿಲ್ಲ.

ಮನೆ ಮತ್ತು ಮನಸ್ಸನ್ನು ಹಾಳು ಮಾಡುವವರನ್ನು ನಮ್ಮ ಜನಪದರೂ ಮನೆಹಾಳರೆಂದೇ ಕರೆದಿದ್ದಾರಲ್ಲವೇ? ಮನಸ್ಸನ್ನು ಮುರಿಯುವವರಿಗೆ, ಸಮಾಜವನ್ನು ಒಡೆಯುವವರಿಗೆ ಹೇಳಿದ ಮಾತನ್ನು ಎಲ್ಲಾ ಸಾಹಿತಿ, ಕಲಾವಿದರಿಗೆ ಹೇಳಿದ್ದೆಂದು ಅಂದುಕೊಳ್ಳುವುದು ಸರಿಯೇ? ಮನಸ್ಸು ಕಲುಷಿತ ಆಗದಿರಲಿ. ಮನಸ್ಸನ್ನು ಯಾರೇ ಮುರಿದರೂ ಅದನ್ನು ಎಲ್ಲರೂ ವಿರೋಧಿಸಲೇಬೇಕಲ್ಲವೇ? ಸಾಹಿತ್ಯ, ಸಂಸ್ಕೃತಿಯು ಎಲ್ಲ ಮನಸ್ಸುಗಳನ್ನು ಒಂದುಗೂಡಿಸುವುದಕ್ಕಿದೆ. ಈ ಸೂಕ್ಷ್ಮವನ್ನು ಅರಿತು ಅಕಾಡೆಮಿಗಳ ನೂತನ ಅಧ್ಯಕ್ಷರು, ಸದಸ್ಯರು ಕೆಲಸ ಮಾಡಬೇಕು ಎಂದು ಹೇಳಿದ ಕನ್ನಡ ಮತ್ತು ಸಂಸ್ಕೃತಿ ಸಚಿವರ ಆಶಯ ಸಾಂಸ್ಕೃತಿಕವಾದದ್ದಲ್ಲವೇ? ಅಪಪ್ರಚಾರಗಳಿಂದ ಸತ್ಯವನ್ನು ಸುಳ್ಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ‘ಹರನೆಂಬುದೇ ಸತ್ಯ ಸತ್ಯವೆಂಬುದೆ ಹರನು’ ಎನ್ನುವ ರಾಘವಾಂಕನ ಮಾತು ನಿಜವಾಗಲಿ.

ಡಾ. ಬಿ.ವಿ.ವಸಂತಕುಮಾರ್, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

ಪ್ರತಿಕ್ರಿಯಿಸಿ (+)