ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಇವು ಚುನಾವಣಾ ಸುದ್ದಿಗಳೇ?!

ಅಕ್ಷರ ಗಾತ್ರ

ಇವು ಚುನಾವಣಾ ಸುದ್ದಿಗಳೇ?!

ವಿಧಾನಪರಿಷತ್‌ ಚುನಾವಣೆಗೆ ಸಂಬಂಧಿಸಿದ ವರದಿಗಳನ್ನು ಓದುತ್ತಿದ್ದರೆ (ಪ್ರ.ವಾ., ಡಿ. 2), ಇವೇನು ಚುನಾವಣೆ ವರದಿಗಳೋ ಅಥವಾ ಅಪರಾಧಕ್ಕೆ ಸಂಬಂಧಿಸಿದ ವರದಿಗಳೋ ಎನಿಸುತ್ತದೆ. ಒಬ್ಬ ಅಭ್ಯರ್ಥಿಯ ವಿರುದ್ಧ ಅತ್ಯಾಚಾರದ ಆರೋಪವಿದೆ. ‘ಚುನಾವಣೆ ಮುಗಿದ ನಂತರ ಯುದ್ಧವೇ ಆಗಲಿ’ ಎಂದು ಒಬ್ಬರು ಗುಡುಗಿದ್ದಾರೆ. ಇನ್ನೊಬ್ಬರ ವಿರುದ್ಧ ಆರೋಪ ಮಾಡುವವರ ಮೇಲೆಯೂ ಗುರುತರವಾದ ಪ್ರಕರಣಗಳು ದಾಖಲಾಗಿವೆ. ಕೆಲವು ಕಡೆ ಶಾಸಕರು ಕೈಕೈ ಮಿಲಾಯಿಸಿದ್ದಾರೆ. ಶಾಸಕರೊಬ್ಬರ ಕೊಲೆಗೆ ಸುಪಾರಿ ನೀಡಿದ್ದಾರೆನ್ನಲಾದ ಭಯಾನಕ ಸುದ್ದಿಯಿದೆ. ದಿನಾಲು ಹಿಂಬಾಲಕರು ಹೊಡೆದಾಡಿಕೊಳ್ಳುವುದು ಸಾಮಾನ್ಯವಾಗಿದೆ.

ಇಂತಹ ಚಾರಿತ್ರ್ಯವುಳ್ಳವರೇ ಹೆಚ್ಚಾಗಿ, ಅವರಲ್ಲಿ ಕೆಲವರು ಈಗಾಗಲೇ ಶಾಸನಸಭೆಯಲ್ಲಿ ಇದ್ದಾರೆ ಅಥವಾ ಮುಂದೆ ಅದರ ಮೆಟ್ಟಿಲು ಏರಲಿದ್ದಾರೆ. ಅರಾಜಕತೆಯೆಂದರೆ ಇದೇ ಅಲ್ಲವೇ? ಇಂತಹವರು ನಡೆಸುವ ಅನ್ಯಾಯ, ಅಕ್ರಮಗಳನ್ನು ಪ್ರಶ್ನಿಸುವುದು ಸಾಮಾನ್ಯರಿಂದ ಸಾಧ್ಯವೇ? ಹವಾಮಾನ ಬದಲಾವಣೆ, ಆರೋಗ್ಯ, ಶಿಕ್ಷಣ ಕುರಿತು ಯಾವ ನಾಯಕರೂ ಮಾತನಾಡುವುದಿಲ್ಲ. ಏಕೆಂದರೆ ಜನರಿಗೆ ಬೇಕಿರುವುದು ಧರ್ಮ, ಜಾತಿ ಮತ್ತು ಹಣ. ಮೂವತ್ತು– ನಲವತ್ತು ವರ್ಷಗಳ ಕೆಳಗೆ ಇಂತಹ ಭಯಾನಕ ಪರಿಸ್ಥಿತಿ ಉತ್ತರಪ್ರದೇಶ, ಬಿಹಾರದಲ್ಲಿ ಇತ್ತೆಂದು ಕೇಳಿದ್ದೆವು. ಈಗ ಕರ್ನಾಟಕದಲ್ಲಿಯೂ ಸಾಮಾನ್ಯ ಎಂಬಂತೆ ಆಗಿಹೋಗಿರುವುದು ದುರಂತ.

-ಪ್ರೊ. ಶಶಿಧರ ಪಾಟೀಲ್‌, ಬಾಗಲಕೋಟೆ

ಅರ್ಥ ಕಳೆದುಕೊಳ್ಳುತ್ತಿದೆಯೇ ಅಂಗವಿಕಲರ ದಿನ?

ವಿಶ್ವ ಅಂಗವಿಕಲರ ದಿನಾಚರಣೆಯನ್ನು ನಿಗದಿತ ಡಿಸೆಂಬರ್‌ 3ರ ಬದಲಾಗಿ ರಾಜ್ಯ ಸರ್ಕಾರ ಕಳೆದ ಮೂರ್ನಾಲ್ಕು ವರ್ಷಗಳಿಂದ ವಿವಿಧ ಕಾರಣಗಳನ್ನೊಡ್ಡಿ, ತನಗೆ ಅನುಕೂಲವಾಗುವ ದಿನದಂದು ಆಚರಿಸುತ್ತಾ ಬರುತ್ತಿದೆ. ಇದರಿಂದ ವಿಶ್ವ ಅಂಗವಿಕಲರ ದಿನಾಚರಣೆ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ.

ಅಂಗವಿಕಲ ನೌಕರರಿಗೆ ಬಡ್ತಿ ನೀಡಲಾಗಿಲ್ಲ. ಸರ್ಕಾರಿ ಸೇವೆಯಲ್ಲಿರುವ ಅಂಗವಿಕಲರಿಗೆ ವಿಶೇಷ ದೌರ್ಬಲ್ಯ ರಜೆ, ಸೇವಾ ಸೌಲಭ್ಯ ನೀಡಲಾಗುತ್ತಿಲ್ಲ. ಅಂಗವಿಕಲರ ಕುಂದುಕೊರತೆಗಳಿಗೆ ಸಂಬಂಧಿಸಿದ ಕಡತಗಳನ್ನು ಸರ್ಕಾರಿ ಕಚೇರಿಗಳಲ್ಲಿ ತ್ವರಿತವಾಗಿ ವಿಲೇವಾರಿ ಮಾಡುತ್ತಿಲ್ಲ. ಅಂಗವಿಕಲರಿಗೆ ಅತ್ಯಗತ್ಯವಾದ ದೂರಶಿಕ್ಷಣದ ಶುಲ್ಕ ಮರುಪಾವತಿ ಇಲ್ಲ. ಅಂಗವಿಕಲರ ಹಕ್ಕುಗಳ ಅಧಿನಿಯಮ ಆಯುಕ್ತರ ನೇಮಕವಾಗಿಲ್ಲ. ಇಷ್ಟೇ ಅಲ್ಲದೆ ಇಲ್ಲದ ಮಕ್ಕಳ, ಇಲ್ಲದ ಶಿಕ್ಷಕರ ಹೆಸರಿನಲ್ಲಿ ಅನುದಾನ ಬಿಡುಗಡೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಇದೆ. ಒಟ್ಟಾರೆ, ಅಂಗವಿಕಲರನ್ನು ಸಬಲೀಕರಿಸುವ ಹೆಸರಿನಲ್ಲಿ ಕೆಲವು ಸ್ವಯಂಸೇವಾ ಸಂಸ್ಥೆಗಳು ಹಾಗೂ ಅಧಿಕಾರಿಗಳ ಸಬಲೀಕರಣಕ್ಕಾಗಿಯೇ ಸ್ಥಾಪನೆಗೊಂಡಂತೆ ಅಂಗವಿಕಲರ ಸಬಲೀಕರಣ ಇಲಾಖೆಯು ಕಾರ್ಯನಿರ್ವಹಿಸುತ್ತಿರು
ವುದು ಅಂಗವಿಕಲರ ದೌರ್ಭಾಗ್ಯ.

-ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು

ಭಯ ಹೆಚ್ಚಿಸುವ ನಡೆ

ಬೆಂಗಳೂರಿನ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಶವಾಗಾರದ ದುಃಸ್ಥಿತಿಯನ್ನು ಪತ್ರಿಕೆ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ (ಪ್ರ.ವಾ., ನ. 30). ಕೋವಿಡ್‌ ಕಾರಣಕ್ಕಾಗಿ ಆಸ್ಪತ್ರೆ ಸೇರಿ ಮೃತರಾದ ಇಬ್ಬರು ವ್ಯಕ್ತಿಗಳ ಪಾರ್ಥಿವ ಶರೀರಗಳನ್ನು ವಿಲೇವಾರಿ ಮಾಡದೆ, ಅವರ ಸಂಬಂಧಿಕರಿಗೂ ಕೊಡದೆ 15 ತಿಂಗಳಿನಿಂದ ಆಸ್ಪತ್ರೆಯ ಶವಾಗಾರದಲ್ಲಿಟ್ಟು ಕೊಳೆಯುವಂತೆ ಮಾಡಿರುವುದು ಆಸ್ಪತ್ರೆಯ ನಿರ್ಲಕ್ಷ್ಯದ ಪರಮಾವಧಿಯನ್ನು ಎತ್ತಿ ತೋರಿಸುತ್ತದೆ.

ಕೋವಿಡ್‌ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಸೇರಲು ಹಿಂದೆಮುಂದೆ ನೋಡುತ್ತಿದ್ದ ಜನರಿಗೆ ಈ ಪ್ರಕರಣ ಸರ್ಕಾರಿ ಆಸ್ಪತ್ರೆಗಳೆಂದರೆ ಇನ್ನಷ್ಟು ಭಯ ಹುಟ್ಟಿಸುವಂತಿದೆ. ಹಾಗಾದರೆ ಕೋವಿಡ್‌ ಸಾವುಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕುಟುಂಬದವರಿಗೆ ಕೊಟ್ಟಿರುವ ಮರಣಪತ್ರಗಳ ಕಥೆ ಏನು? ಯಾರದೋ ಶವಕ್ಕೆ ಯಾರಿಗೋ ಮರಣಪತ್ರವನ್ನು ನೀಡಿರಬಹುದು. ತೀವ್ರ ಹದಗೆಟ್ಟಿರುವ ಇಂತಹ ಪರಿಸ್ಥಿತಿಯನ್ನು ಸರಿಪಡಿಸುವುದು ಹೇಗೆ? ಹೀಗಾದರೆ, ಮುಂದೆ ಸಾಂಕ್ರಾಮಿಕ ಗಂಭೀರ ಸ್ಥಿತಿಗೆ ಹೋದರೆ ಅದನ್ನು ನಿಭಾಯಿಸುವುದು ಹೇಗೆ?

-ಮಲ್ಲತ್ತಹಳ್ಳಿ ಡಾ. ಎಚ್.ತುಕಾರಾಂ, ಬೆಂಗಳೂರು

ಬೆಳಗಾವಿಯಲ್ಲಿ ಅಧಿವೇಶನ: ಸಲ್ಲದ ಅಪಸ್ವರ

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಉದ್ದೇಶಿಸಿರುವುದು ಸೂಕ್ತ ನಿರ್ಧಾರ. ಆದರೆ, ಅದಕ್ಕೆ ಈಗ ಕೊರೊನಾದ ರೂಪಾಂತರ ತಳಿ ಓಮೈಕ್ರಾನ್ ನೆಪದಲ್ಲಿ ಕೆಲವರು ಅಪಸ್ವರ ಎತ್ತುತ್ತಿರುವುದು ನ್ಯಾಯವೇ? ಹಾಗೆ ನೋಡಿದರೆ ಸೋಂಕಿನ ವಿಷಯದಲ್ಲಿ ಬೆಂಗಳೂರಿಗಿಂತ ಬೆಳಗಾವಿ ಸುರಕ್ಷಿತ ತಾಣವಾಗಿದೆ. ಬೆಂಗಳೂರಿಗೆ ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಜನ ಸಂಚರಿಸುವುದುಂಟು. ನೂರಾರು ವಿಮಾನಗಳು ಹಾರಾಟ ನಡೆಸುವ ಈ ತಾಣದಲ್ಲಿ ರೋಗ ಹರಡುವುದಿಲ್ಲವೇ? ಬೆಳಗಾವಿಯಲ್ಲಿ ಅಧಿವೇಶನ ನಡೆಯುವುದು ಇವರಿಗೆ ಬೇಡವಾಗಿದೆ. ಈ ಬಗೆಯ ತಾರತಮ್ಯ, ಮಲತಾಯಿ ಧೋರಣೆ ಸಲ್ಲದು. ಕೊರೊನಾ ಸೋಂಕು, ಪ್ರವಾಹ, ಅತಿವೃಷ್ಟಿ- ಅನಾವೃಷ್ಟಿಗಳಿಂದ ರಾಜ್ಯದ ಜನ ಕಂಗೆಟ್ಟಿದ್ದಾರೆ. ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಸಮಗ್ರ ಚಿಂತನೆ ಮಾಡುವುದಕ್ಕೆ ಆದ್ಯತೆ ನೀಡಬೇಕಿದೆ. ರಾಜಕೀಯ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರನ್ನು ಒಟ್ಟಿಗೇ ಸೇರಿಸುವಾಗ ಮಾತ್ರ ನಮ್ಮ ರಾಜಕಾರಣಿಗಳಿಗೆ ಈ ವೈರಸ್ಸಿನ ಭಯ ಇಲ್ಲದಿರುವುದು ಸೋಜಿಗದ ಸಂಗತಿ.

-ಆರ್.ಬಿ.ಜಿ.ಘಂಟಿ, ಅಮೀನಗಡ, ಬಾಗಲಕೋಟೆ

₹10ರ ನೋಟು ಚಲಾವಣೆಗೆ ಸಿಗಲಿ

ಭಾರತೀಯ ಸ್ಟೇಟ್‌ ಬ್ಯಾಂಕ್‌ ಗ್ರಾಹಕನಾದ ನಾನು, ಬೆಂಗಳೂರಿನ ಶಾಖೆಯೊಂದರಲ್ಲಿ ಚೆಕ್ ಸಲ್ಲಿಸಿ ₹ 10ರ ಮುಖಬೆಲೆಯ 100 ನೋಟುಗಳನ್ನು ಕೊಡುವಂತೆ ಮನವಿ ಮಾಡಿಕೊಂಡೆ. ಬ್ಯಾಂಕಿನ ಹಣ ಬಟವಾಡೆ ಕರಣಿಕರು ರಿಸರ್ವ್‌ ಬ್ಯಾಂಕು ₹ 10 ಮುಖಬೆಲೆಯ ನೋಟುಗಳ ಮುದ್ರಣ ನಿಲುಗಡೆ ಮಾಡಿದ್ದು, ಈ ನೋಟುಗಳು ಬ್ಯಾಂಕುಗಳಿಗೆ ಪೂರೈಕೆಯಾಗುತ್ತಿಲ್ಲ ಎಂದು ತಿಳಿಸಿದರು. ಹಾಗಿದ್ದರೆ ‘₹ 10ರ ನೋಟುಗಳ ಚಲಾವಣೆಯನ್ನು ನಿಲ್ಲಿಸಲಾಗುವುದೇ’ ಎಂದು ಬ್ಯಾಂಕ್‌ ಅಧಿಕಾರಿಯನ್ನು ಕೇಳಿದಾಗ ಅವರು ಆ ಕುರಿತು ಮಾಹಿತಿ ಇಲ್ಲವೆಂದು ತಿಳಿಸಿದರು. ರಿಸರ್ವ್‌ ಬ್ಯಾಂಕ್‌ ಈ ಕುರಿತು ಗೊಂದಲ ಬಗೆಹರಿಸಿ, ದೈನಂದಿನ ವ್ಯವಹಾರದಲ್ಲಿ ಅತ್ಯಗತ್ಯವಾಗಿರುವ ₹ 10ರ ನೋಟುಗಳನ್ನು ಗ್ರಾಹಕರ ಚಲಾವಣೆಗೆ ಒದಗಿಸಬೇಕಾಗಿದೆ.

-ಬಸವರಾಜ ಹುಡೇದಗಡ್ಡಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT