ಮಂಗಳವಾರ, ಮಾರ್ಚ್ 28, 2023
26 °C

ವಾಚಕರ ವಾಣಿ | ನೈತಿಕ ಶಿಕ್ಷಣ: ಬೇಕಿಲ್ಲ ಭಾರವಾದ ಗ್ರಂಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಕಲಿಸುವ ವ್ಯವಸ್ಥೆಯನ್ನು ಆರಂಭಿಸುವ ಲಕ್ಷಣಗಳು ಕಾಣಿಸುತ್ತಿವೆ. ಆದರೆ, ಈ ಸಂಬಂಧವಾಗಿ ಮಠಾಧೀಶರು ಮತ್ತು ಅವರಂತೆಯೇ ಇರುವ ಇನ್ನೊಂದಿಷ್ಟು ಜನರನ್ನು ಸರ್ಕಾರ ಕರೆದಿದ್ದು, ಐಡಿಯಾಲಜಿಗಳ ಭರಾಟೆಯ ಈ ಕಾಲದಲ್ಲಿ ವಿವಾದಾಸ್ಪದವಾಗಿದೆ. ಅಲ್ಲಿಗೆ ಬಂದಿದ್ದವರು ಭಗವದ್ಗೀತೆ, ಕುರಾನ್‌, ಬೈಬಲ್‌ ಬಗ್ಗೆಯೆಲ್ಲ ಮಾತನಾಡಿದ್ದಾರೆ. ಇದರಿಂದಾಗಿ, ಸರಳವಾಗಿ ಮುಗಿಯಬಹುದಾಗಿದ್ದ ವಿಷಯ ತಾನಾಗಿಯೇ ಜಟಿಲವಾಗಿದೆ.

ನಮ್ಮ ತಲೆಮಾರಿನವರಲ್ಲಿ ಹೆಚ್ಚಿನವರು ಸರ್ಕಾರಿ ಶಾಲೆಗಳಲ್ಲಿ ಓದಿದವರು. ಆಗ ನಮ್ಮ ಮೇಷ್ಟ್ರುಗಳು ದಿನವೂ ಮಧ್ಯಾಹ್ನದ ನಂತರ ಒಂದು ಪೀರಿಯಡ್‌ನಲ್ಲಿ ನಮಗೆಲ್ಲ ಕತೆಗಳನ್ನು ಹೇಳುತ್ತಿದ್ದರು. ಅವು ಪಂಚತಂತ್ರ, ರಾಮಾಯಣ, ಮಹಾಭಾರತ, ಈಸೋಪ, ಅರೇಬಿಯನ್ ನೈಟ್ಸ್, ಜಾನಪದ ಹೀಗೆ ಹಲವು ಮೂಲಗಳದ್ದಾಗಿದ್ದವು. ಕೆಲವೊಮ್ಮೆ ಹಾಡುಗಳ ರೂಪದಲ್ಲೂ ನಮಗೆ ನೀತಿ, ಸಂದೇಶವನ್ನು ರವಾನಿಸಲಾಗುತ್ತಿತ್ತು. ನಮಗೆ ಇದ್ದ ದೈಹಿಕ ಶಿಕ್ಷಣ ಶಿಕ್ಷಕರು ಕೆಲವು ಆಟಗಳ ಮೂಲಕ ಹಿಂಸೆ, ಅಹಿಂಸೆಗೆ ಸಂಬಂಧಿಸಿದ ಸಂದೇಶಗಳನ್ನು ದಾಟಿಸು ತ್ತಿದ್ದರು. ನಾವೂ ನಮಗೆ ದಕ್ಕಿದಷ್ಟನ್ನು ಜಾತಿ, ಧರ್ಮ, ಪಂಗಡಗಳನ್ನೆಲ್ಲ ನೋಡದೆ ಕಲಿತುಕೊಂಡೆವು. ಪುಟ್ಟ ಮಕ್ಕಳ ಮನಸ್ಸು ಕೋಮಲವಾಗಿರುತ್ತದೆ. ಆ ವಯಸ್ಸಿನಲ್ಲೇನಿದ್ದರೂ ಸರಳವಾದ ಕತೆಗಳು, ಲಯಬದ್ಧ ಪದ್ಯಗಳು ಚೆನ್ನಾಗಿ ಹಿಡಿಸುತ್ತವೆ. ಶ್ಲೋಕಗಳನ್ನೇನಿದ್ದರೂ ಬಾಯಿಪಾಠ ಮಾಡಬಹುದಷ್ಟೆ. ಆದ್ದರಿಂದ ಚಿಕ್ಕ ಮಕ್ಕಳಿಗೆ ಭಗವದ್ಗೀತೆ, ಕುರಾನ್‌, ಬೈಬಲ್‌ನಂತಹ ಭಾರವಾದ ಗ್ರಂಥಗಳು ಬೇಕಾಗಿಲ್ಲ. ಬದುಕಿನಲ್ಲಿ ಧರ್ಮ, ಅಧ್ಯಾತ್ಮ, ತತ್ವಜ್ಞಾನ, ಹುಟ್ಟು, ಸಾವು, ಮೋಕ್ಷದಂತಹವುಗಳ ಬಗ್ಗೆ ಕುತೂಹಲ, ಜಿಜ್ಞಾಸೆ ಶುರುವಾದಾಗ ಬೇಕಾಗುವ ಗ್ರಂಥಗಳಿವು.

–ಬಿ.ಎಸ್.ಜಯಪ್ರಕಾಶ ನಾರಾಯಣ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು