ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಗಿ ಪ್ರಾರ್ಥಿಸದಿರಿ, ಪ್ರವಾಹ ಬಂದೀತು!

Last Updated 5 ಜೂನ್ 2019, 17:21 IST
ಅಕ್ಷರ ಗಾತ್ರ

ಸಕಾಲದಲ್ಲಿ ಮಳೆ ಬೀಳುವಂತೆ ಪ್ರಾರ್ಥಿಸಿ ಜಪ, ಹೋಮದಂಥ ಧಾರ್ಮಿಕ ವಿಧಿಗಳನ್ನು ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರ ನಡೆಸುವವರಿಗೆ ಒಂದು ಕೋರಿಕೆಯೆಂದರೆ, ಥಾರ್ ಹಾಗೂ ಸಹರಾ ಮರುಭೂಮಿಗಳಲ್ಲಿ ನೀವು ಮೊದಲು ಪೂಜೆ ಮಾಡಿಸಿ. ಏಕೆಂದರೆ, ಪ್ರಜೆಗಳ ಮೇಲಿರುವ ನಿಮ್ಮ ಅತಿ ಪ್ರೀತಿಯಿಂದ ನಿಮ್ಮ ಪ್ರಾರ್ಥನೆ ಫಲಿಸಿ, ಇಲ್ಲಿ ಪ್ರವಾಹ ಉಂಟಾಗಿಬಿಟ್ಟರೆ ಕಷ್ಟ, ಅದಕ್ಕೆ! ಮಳೆಯ ಆವರ್ತನ ಕೊಂಡಿಗಳನ್ನು ನಾವೇ ಕತ್ತರಿಸಿ, ನೀರಿಗಾಗಿ ದೇವರನ್ನು ಕರೆಯುವುದು ಎಷ್ಟು ಸರಿ? ಬೇಡುವಿಕೆಗೊಂದು ಬೆಲೆ ಬೇಡವೇ? ಸಾಲುಮರದ ತಿಮ್ಮಕ್ಕ ನೆಟ್ಟು ಪೋಷಿಸಿದ ಮರಗಳನ್ನು ರಸ್ತೆ ವಿಸ್ತರಣೆಯಂತಹ ಯೋಜನೆಗಳಿಗಾಗಿ, ಆಕೆ ಬದುಕಿರುವಾಗಲೇ ಬಲಿ ಕೊಡುವುದರಿಂದ ಖಂಡಿತವಾಗಿಯೂ ಮುಂದಿನ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಬಹುದು!

ಒಂದು ಕೆಲಸ ಮಾಡಿ. ರಸ್ತೆಯ ವಿಸ್ತರಣೆ ಆಗಲೆಂದು ಮತ್ತೊಂದು ಹೋಮ ಮಾಡಿ. ರಾಜ್ಯದ ಆಡಳಿತಾಂಗದ ಆಯಾ ವಿಭಾಗವು ತಾನೇ ತಾನಾಗಿ ಕೆಲಸ ಮಾಡಲೆಂದು ಇನ್ನೊಂದು ಹೋಮ ಮಾಡಿ. ಆಗ ನಿಮಗೆ ಸ್ವಲ್ಪವಾದರೂ ವಿಶ್ರಾಂತಿ ಸಿಕ್ಕೀತು. ಹೋಮ– ಹವನದಿಂದ ಇಷ್ಟಾರ್ಥ ಫಲಿಸುತ್ತದೆಂಬ ಅಚಲ ನಂಬಿಕೆಯಿದ್ದರೆ, ಎಲ್ಲರಲ್ಲೂ ಪರಿಸರ ಜಾಗೃತಿ ಮೂಡಲೆಂದಾದರೂ ಹೋಮ ಮಾಡಿಸಿ. ದೂರದೃಷ್ಟಿಯ ವಿಷಯದಲ್ಲಿ ನಮ್ಮ ಆಲೋಚನೆಗಳಂತೂ ಅಷ್ಟಕ್ಕಷ್ಟೇ ಇವೆ. ಇಂತಹವುಗಳಿಂದಾದರೂ ನಮ್ಮಲ್ಲಿ ಪ್ರಜ್ಞೆ ಮೂಡಿಸಿ. ಇದರ ಹಿಂದೆ ಯಾವುದೋ ರಾಜಕೀಯ ಚಾಣಾಕ್ಷತನ ಇರುವಂತೆ ಕಾಣುತ್ತದೆ. ಹೇಗೂ ಈಗಾಗಲೇ ಮುಂಗಾರು ಕಾಲಿಟ್ಟಾಗಿದೆ. ಈಗ ಮಳೆ ಬಂದರೆ ಅದು ಪರ್ಜನ್ಯದ ದೆಸೆಯಿಂದಲೇ ಎಂದು ಪ್ರಚಾರ ಮಾಡುವುದಂತೂ ವಾಸ್ತವ. ಇಂತಹವುಗಳಿಂದ ಮೋಡ ಬಿತ್ತುವಿರೋ ಇಲ್ಲವೋ ಗೊತ್ತಿಲ್ಲ, ಜನರಲ್ಲಿ ಮೌಢ್ಯವನ್ನಂತೂ ಬಿತ್ತುತ್ತೀರಿ.

- ಸುಗತ,ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT