ಜನರ ಮನಸ್ಸು ತಿರುಗಿಸುವ ತಂತ್ರ

ಶನಿವಾರ, ಜೂಲೈ 20, 2019
25 °C

ಜನರ ಮನಸ್ಸು ತಿರುಗಿಸುವ ತಂತ್ರ

Published:
Updated:

‘ಆಪರೇಷನ್‌ ಕಮಲ’ಕ್ಕೆ ಸಂಬಂಧಿಸಿದ ಆಡಿಯೊದಲ್ಲಿ ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರ ಹೆಸರು ಪ್ರಸ್ತಾಪವಾದ ಕಾರಣ, ಅದರ ಸತ್ಯಾಸತ್ಯತೆಯ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ ಅದು ಈಗ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ವರದಿಯಾಗಿದೆ (ಪ್ರ.ವಾ., ಜೂನ್‌ 24). ಇದರಿಂದಾಗಿ, ತನಿಖೆಯು ತಾರ್ಕಿಕ ಅಂತ್ಯ ಕಾಣದೆ, ಸಭಾಧ್ಯಕ್ಷರ ಮೇಲಿದ್ದ ಗುರುತರ ಆಪಾದನೆ ಹಾಗೆಯೇ ಉಳಿದುಬಿಟ್ಟಿದೆ. ಅಧಿವೇಶನದ ಸಂದರ್ಭದಲ್ಲಿ ಸಿ.ಡಿ. ಬಿಡುಗಡೆ ಮಾಡುವ 
ಮೂಲಕ ಸರ್ಕಾರ ರಾಜಕೀಯ ಲಾಭ ಮಾಡಿಕೊಂಡಂತೆ ತೋರುತ್ತದೆ. ಏಕೆಂದರೆ, ಆಗ ಪತನಗೊಳ್ಳುವ ಭೀತಿ ಸರ್ಕಾರಕ್ಕೆ ಎದುರಾಗಿತ್ತು. ಈ ಸಂಕಷ್ಟದಿಂದ ಪಾರಾಗಲು ಮುಖ್ಯಮಂತ್ರಿ ಅವರಿಗೆ ಈ ಸಿ.ಡಿ. ಸುವರ್ಣಾವಕಾಶವನ್ನೇ ಒದಗಿಸಿತು.

ಈ ನಡುವೆ, ಮೈತ್ರಿ ಸರ್ಕಾರವನ್ನು ಉರುಳಿಸಲು ವಿರೋಧ ಪಕ್ಷವಾದ ಬಿಜೆಪಿಯು ತಮ್ಮ ಪಕ್ಷದ ಶಾಸಕರಿಗೆ ತಲಾ ₹ 10 ಕೋಟಿ ಆಮಿಷ ಒಡ್ಡುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಆದರೆ ಹಿಂದಿನ ಆರೋಪ ಕುರಿತ ತನಿಖೆಗೆ ಮುಂದಾಗದೇ ಇರುವುದರಿಂದ, ಅವರ ಈಗಿನ ಆರೋಪಕ್ಕೆ ಸಾರ್ವಜನಿಕ ವಲಯದಲ್ಲಿ ಮಹತ್ವವೇನೂ ದೊರಕದು. ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಜನರಿಗೆ ಮಾಹಿತಿಯ ಕೊರತೆಯಂತೂ ಇಲ್ಲ. ಪ್ರತಿ ಬೆಳವಣಿಗೆಯನ್ನೂ ತುಲನಾತ್ಮಕವಾಗಿ ಮತ್ತು ವಸ್ತುನಿಷ್ಠವಾಗಿ ವಿಶ್ಲೇಷಿಸುವಷ್ಟು ಅವರು ಪ್ರಬುದ್ಧರೂ, ಜಾಗೃತರೂ ಆಗಿದ್ದಾರೆ.

ಇಷ್ಟಕ್ಕೂ, ಪಕ್ಷಾಂತರಕ್ಕೆ ಆಮಿಷ ಒಡ್ಡುವವರ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳಲು ಇರುವ ಅಡ್ಡಿಯಾದರೂ ಏನು? ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ, ಇದು ಜನರ ಮನಸ್ಸನ್ನು ಬೇರೆಡೆ ತಿರುಗಿಸುವ ತಂತ್ರವಾಗಿ ಗೋಚರಿಸುತ್ತದೆ.

– ಪುಟ್ಟೇಗೌಡ, ಬೆಂಗಳೂರು

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !