ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭದ್ರತಾ ಭಾವನೆ ನಿವಾರಿಸಬೇಕಿದೆ

Last Updated 20 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಹುಬ್ಬಳ್ಳಿಯ ಎಂಜಿನಿಯರಿಂಗ್ ಕಾಲೇಜಿನ, ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಈ ವಿದ್ಯಾರ್ಥಿಗಳು ಪೊಲೀಸರ ವಶದಲ್ಲಿದ್ದಾಗಲೇ ಕೆಲವರು ಅವರ ಮೇಲೆ ಹಲ್ಲೆ ಪ್ರಯತ್ನವನ್ನೂ ಮಾಡಿದ್ದಾರೆ. ಭಾರತೀಯರಾದ ಯಾರೇ ಆದರೂ ತಮಗೆ ಉಪಟಳವಾಗಿ ಪರಿಣಮಿಸಿರುವ ಮತ್ತೊಂದು ದೇಶದ ಪರ ಘೋಷಣೆ ಕೂಗುವುದನ್ನು ಸಹಿಸಲು ಸಾಧ್ಯವಿಲ್ಲ. ಆದರೆ, ಈ ವಿದ್ಯಾರ್ಥಿಗಳು ಸರಿದಾರಿಯಿಂದ ಒಂದಿಷ್ಟು ಬದಿಗೆ ಸರಿದಿರಬಹುದೇ ಹೊರತು, ಸಂಪೂರ್ಣವಾಗಿ ದಾರಿ ತಪ್ಪಿದ್ದಾರೆ ಎನ್ನುವುದು ತಪ್ಪಾಗಬಹುದು.

ಕೆಲವು ಬಾರಿ ಯುವಜನರು ಯಾವುದೋ ಹೊರಗಿನ ಪ್ರಭಾವ, ಭ್ರಮೆ ಅಥವಾ ಆಕರ್ಷಣೆಗೊಳಗಾಗಿ ಇಂಥ ತಪ್ಪು ಮಾಡುತ್ತಾರೆ. ಹದಿಹರೆಯದ ಹುಡುಗ ತನ್ನ ಗೆಳೆಯರೊಡನೆ ಸೇರಿ, ಯಾವುದೋ ಗೋಡೆ ಮರೆಯಲ್ಲಿ ನಿಂತು ಸಿಗರೇಟು ಸೇದುತ್ತಾ ನಾನು ‘ದೊಡ್ಡವ’ನಾದೆ ಎಂಬ ಭಾವ ತಳೆಯುವಂತೆ ಇದೂ ಇರಬಹುದು. ‘ಪಾಕ್ ಜಿಂದಾಬಾದ್’ ಎಂದು ಹೇಳುವ ಮೂಲಕ ತಾವು ಏನೋ ಒಂದು ಸಾಧನೆ ಮಾಡಿಬಿಟ್ಟೆವು ಎಂಬಂಥ ಸುಳ್ಳು ಹೆಮ್ಮೆಯ ಅಮಲಿಗೆ ಈ ಹುಡುಗರು ಬಲಿಯಾಗಿರಬಹುದು.

ಇಂಥವರಿಗೆ ಶಿಕ್ಷೆಗಿಂತಲೂ ಹೆಚ್ಚಾಗಿ ಅಗತ್ಯವಿರುವುದು ಸಮಾಲೋಚನೆ. ಹೀಗೆ ಮಾಡಿದ್ದೇಕೆ ಎಂದು ಇವರನ್ನು ಕೇಳಬೇಕು. ಇವರಲ್ಲಿ ಅಭದ್ರತೆಯ ಭಾವನೆ ಮೂಡಿದ್ದರೆ ಅದನ್ನು ನಿವಾರಿಸಬೇಕು. ಕಾಶ್ಮೀರಿಗರು ಭಾರತವೆಂಬ ಕುಟುಂಬದ ಪ್ರೀತಿಯ ಸದಸ್ಯರು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಇವರು ಭಾರತ ವಿರೋಧಿ ಧೋರಣೆ ತಳೆಯುವಂಥ ಮನಃಸ್ಥಿತಿಗೆ ತಲುಪುವ ರೀತಿಯಲ್ಲಿ ನಾವು ವರ್ತಿಸಬಾರದು.

-ಎಂ.ವ್ಯೋಮಕೇಶ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT