ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ–ಸಾಮಾಜಿಕ ಭಿನ್ನತೆ ಬೀರಲಿದೆ ಪ್ರಭಾವ

Last Updated 23 ಏಪ್ರಿಲ್ 2018, 18:13 IST
ಅಕ್ಷರ ಗಾತ್ರ

ಚುನಾವಣೆಯ ಜಿದ್ದಾಜಿದ್ದಿ ಹೋರಾಟದ ಗತಿ ಯಾವಾಗಲೂ ಸೂಕ್ಷ್ಮ ವಿವರದಲ್ಲಿಯೇ ಅಡಗಿರುತ್ತದೆ. ಜೈನ್‌–ಲೋಕನೀತಿ–ಸಿಎಸ್‌ಡಿಎಸ್‌ ಸಂಸ್ಥೆಗಳು ಜತೆಯಾಗಿ ನಡೆಸಿದ ಸಮೀಕ್ಷೆಯಲ್ಲಿ ಪ್ರಾದೇಶಿಕ ಭಿನ್ನತೆ ಹಾಗೂ ಮತದಾರರ ಸಾಮಾಜಿಕ ಹಿನ್ನೆಲೆ ಚುನಾವಣೆಯ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಎತ್ತಿ ತೋರಿದೆ.

ರಾಜ್ಯದ ಆರು ಭೌಗೋಳಿಕ ಪ್ರದೇಶಗಳ ಮತದಾರರು ಭಿನ್ನ ಆಯ್ಕೆಗಳನ್ನು ಹೊಂದಿದ್ದು, ಅದರಲ್ಲೂ ಮಹಿಳೆಯರಿಗೆ ಹೋಲಿಸಿದರೆ ಪುರುಷ ಮತದಾರರ ಆಯ್ಕೆಯಲ್ಲಿ ಭಿನ್ನತೆ ಪ್ರಮಾಣ ಹೆಚ್ಚಾಗಿದೆ. ರಾಜ್ಯದ ವಿವಿಧ ನಗರಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಚುನಾವಣಾ ವಾತಾವರಣಕ್ಕೂ ಬೆಂಗಳೂರು ಮತ್ತು ಹಳ್ಳಿಗಳ ಸನ್ನಿವೇಶಕ್ಕೂ ಅಜಗಜಾಂತರವಿದೆ. ಜನಸಾಮಾನ್ಯರ ಶೈಕ್ಷಣಿಕ ಹಾಗೂ ಆರ್ಥಿಕ ಹಿನ್ನೆಲೆ ಕೂಡ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವಲ್ಲಿ ಪ್ರಭಾವ ಬೀರಿದೆ. ಇಂತಹ ಪ್ರತಿಯೊಂದು ಭಿನ್ನತೆಯೂ ವಿವರವಾದ ವಿಶ್ಲೇಷಣೆಗೆ ಯೋಗ್ಯವಾಗಿದೆ.

ಚುನಾವಣಾ ವಿಶ್ಲೇಷಣೆಗಾಗಿ ಕರ್ನಾಟಕವನ್ನು ಲಾಗಾಯ್ತಿನಿಂದಲೂ ಆರು ಭೌಗೋಳಿಕ ಪ್ರದೇಶಗಳಲ್ಲಿ ವಿಂಗಡಿಸುತ್ತಾ ಬರಲಾಗಿದೆ. ಅವುಗಳೆಂದರೆ:
ಅ) ಹೈದರಾಬಾದ್‌–ಕರ್ನಾಟಕ: ಹೈದರಾಬಾದ್‌ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ರಾಜ್ಯದ ಪ್ರದೇಶ.
ಆ) ಮುಂಬೈ–ಕರ್ನಾಟಕ: ಬ್ರಿಟಿಷ್‌ ರಾಜ್ಯಭಾರದಲ್ಲಿ ಬಾಂಬೆ ಪ್ರೆಸಿಡೆನ್ಸಿ ಆಡಳಿತಕ್ಕೆ ಒಳಪಟ್ಟಿದ್ದ ಭಾಗ.
ಇ) ಕರಾವಳಿ ಕರ್ನಾಟಕ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಪ್ರದೇಶ.
ಈ) ಮಧ್ಯ ಕರ್ನಾಟಕ: ಹಳೇ ಮೈಸೂರು ಪ್ರದೇಶದ ಉತ್ತರದಲ್ಲಿರುವ ಭಾಗ ಮತ್ತು ಮಲೆನಾಡನ್ನು ಒಳಗೊಂಡ ಭೂಭಾಗ.
ಉ) ಬೆಂಗಳೂರು: ರಾಜಧಾನಿ ಮತ್ತು ಅದರ ಹೊರವಲಯವನ್ನು ಒಳಗೊಂಡ ಪ್ರದೇಶ.
ಊ) ದಕ್ಷಿಣ ಕರ್ನಾಟಕ: ಹಳೇ ಮೈಸೂರಿನ ಉಳಿದಿರುವ ಭಾಗ.

ಮುಂಬೈ–ಕರ್ನಾಟಕದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಯೇ ಮುಂದಿದೆ ಎಂಬುದು ಸಮೀಕ್ಷೆಯಲ್ಲಿ ಎದ್ದುಕಂಡಿದೆ. ಈ ಭಾಗ ಹಿಂದಿನಿಂದಲೂ ಬಿಜೆಪಿಯ ಗಟ್ಟಿ ನೆಲೆಯಾಗಿದ್ದು, ಆ ಬೆಂಬಲವನ್ನು ಮತ್ತೆ ಉಳಿಸಿಕೊಳ್ಳುವ ಸೂಚನೆಯಿದೆ. 2013ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ಗಳಿಕೆಯನ್ನು ಒಟ್ಟಾಗಿ ನೋಡಿದಾಗ ಅವುಗಳು ಪಡೆದ ಮತಗಳ ಪ್ರಮಾಣ, ಕಾಂಗ್ರೆಸ್‌ಗಿಂತ ಹೆಚ್ಚಾಗಿಯೇ ಇತ್ತು.

ಕರಾವಳಿ ಭಾಗದಲ್ಲಿ ಮೊದಮೊದಲು ಕಾಂಗ್ರೆಸ್‌ ಕೈಹಿಡಿದಿದ್ದ ಮತದಾರರು ಬರುಬರುತ್ತಾ ಕಮಲ ಅರಳಿಸುವಲ್ಲಿ ಆಸಕ್ತಿ ತೋರಿದ್ದರು. ಚುನಾವಣೆಯಿಂದ ಚುನಾವಣೆಗೆ ಈ ಒಲವು ಹೆಚ್ಚುತ್ತಲೇ ಬಂದಿತ್ತು. ಆದರೆ, 2013ರಲ್ಲಿ ಕಾಂಗ್ರೆಸ್‌ ಈ ಭಾಗದಲ್ಲಿ ಅದ್ವಿತೀಯ ಸಾಧನೆ ಮೆರೆದಿತ್ತು. ಮತದಾರರ ಒಲವಿನ ಉಯ್ಯಾಲೆ ಈ ಸಲ ಮತ್ತೆ ಬಿಜೆಪಿಯತ್ತ ತೂಗಿದಂತೆ ತೋರುತ್ತದೆ. ಹೈದರಾಬಾದ್‌–ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಪ್ರದೇಶಗಳಲ್ಲಿ ಕಾಂಗ್ರೆಸ್‌ ಮುಂಚೂಣಿಯಲ್ಲಿ ಓಡುತ್ತಿರುವುದು ಸ್ಪಷ್ಟವಾಗಿದೆ. ಈ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿದರೆ ಪ್ರಸಕ್ತ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಜಿದ್ದಾಜಿದ್ದಿ ಹೋರಾಟಕ್ಕೆ ವೇದಿಕೆಯಾಗಿದೆ ಎಂಬುದು ವೇದ್ಯವಾಗುತ್ತದೆ.

ಬೆಂಗಳೂರಿನಲ್ಲೂ ಈ ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಪೈಪೋಟಿಯಿದೆ. ಆದಾಗ್ಯೂ ಬಿಜೆಪಿ ತುಸು ಮುಂದೆ ಓಡುತ್ತಿರುವಂತೆ ಭಾಸವಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್‌ ಮುಂದಿದೆ. ಈ ಭಾಗದಲ್ಲಿ ಬಿಜೆಪಿ ಲೆಕ್ಕಕ್ಕಿಲ್ಲ. 2013ರಲ್ಲೂ ಈ ಪ್ರದೇಶದಲ್ಲಿ ಜೆಡಿಎಸ್‌ ಪಕ್ಷವೇ ಮುಂಚೂಣಿಯಲ್ಲಿತ್ತು. ಆದರೆ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವಿನ ಗಳಿಕೆಯ ಅಂತರ ಕಳೆದ ಬಾರಿಗಿಂತ ಈ ಸಲ ಹೆಚ್ಚಲಿದೆ ಎನ್ನುತ್ತದೆ ಸದ್ಯದ ವಾತಾವರಣ. ಕಾಂಗ್ರೆಸ್‌ ವಿರೋಧಿ ಮತಗಳನ್ನು ಬಿಜೆಪಿ ಹೆಚ್ಚು ಒಡೆದಷ್ಟೂ ಜೆಡಿಎಸ್‌ಗೆ ನಷ್ಟವಾಗಲಿದ್ದು, ಅದರ ಲಾಭ ಕಾಂಗ್ರೆಸ್‌ಗೆ ಸಿಗಲಿದೆ.

ರಾಜ್ಯದಲ್ಲಿ ಒಟ್ಟಾರೆಯಾಗಿ ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸಲಿದೆ ಎಂಬುದನ್ನು ನಿರ್ಧರಿಸುವಲ್ಲಿ ಹೈದರಾಬಾದ್‌–ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಪ್ರದೇಶಗಳ ಪಾತ್ರ ಮಹತ್ವದ್ದಾಗಿದೆ. ಪ್ರಚಾರ ತಾರಕಕ್ಕೇರಿದ ಮೇಲೂ ಉತ್ತರ ಕರ್ನಾಕದಲ್ಲಿ ಕಾಂಗ್ರೆಸ್‌ ತನ್ನ ಬೆಂಬಲವನ್ನು ಈಗಿನಂತೆಯೇ ಉಳಿಸಿಕೊಳ್ಳಲಿದೆಯೇ? ಹಾಗೆಯೇ ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್‌ ತನ್ನ ಪ್ರಾಬಲ್ಯಕ್ಕೆ ಕುಂದು ಬಾರದಂತೆ ನೋಡಿಕೊಳ್ಳಲಿದೆಯೇ? –ಈ ಪ್ರಶ್ನೆಗಳಿಗೆ ಸಿಗುವ ಉತ್ತರ, ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿರುವ/ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಅವಕಾಶ ಯಾರಿಗಿದೆ ಎಂಬ ಪ್ರಶ್ನೆಗೂ ಉತ್ತರವಾಗಲಿದೆ.

ಮಹಿಳಾ ಮತದಾರರನ್ನು ಗಣನೆಗೆ ತೆಗೆದುಕೊಂಡರೆ ಬಿಜೆಪಿಗಿಂತ ಕಾಂಗ್ರೆಸ್‌ಗೆ ಅವರ ಬೆಂಬಲ ಹೆಚ್ಚಾಗಿರುವಂತೆ ತೋರುತ್ತದೆ. ಎರಡೂ ಪಕ್ಷಗಳಿಗೆ ಪುರುಷರ ಬೆಂಬಲ ಹೆಚ್ಚು–ಕಡಿಮೆ ಸಮ ಪ್ರಮಾಣದಲ್ಲಿದೆ. ಲಿಂಗತ್ವದ ಆಧಾರದ ಮೇಲೆ ಜೆಡಿಎಸ್‌ ಬೆಂಬಲಿಗರನ್ನು ನೋಡಿದರೆ, ಪುರುಷ ಹಾಗೂ ಮಹಿಳೆಯರ ನಡುವೆ ಎದ್ದು ಕಾಣುವಂತಹ ವ್ಯತ್ಯಾಸ ಕಾಣುತ್ತಿಲ್ಲ. ಹೆಚ್ಚಿನ ಯುವ ಮತದಾರರ ಒಲವು ಬಿಜೆಪಿಯತ್ತ ಇದ್ದರೆ, ಹಿರಿಯರ ಬೆಂಬಲ ಗಳಿಸುವಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ ಮುಂದಿರುವುದು ಎದ್ದು ಕಾಣುತ್ತಿದೆ.

ಬೆಂಗಳೂರು ಹಾಗೂ ಗ್ರಾಮಾಂತರ ಭಾಗದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಹೆಚ್ಚು–ಕಡಿಮೆ ಸಮಬಲ ಸಾಧಿಸಿದರೆ, ಉಳಿದ ನಗರಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಾಂಗ್ರೆಸ್‌ ಮುಂದಿದೆ. ಆರ್ಥಿಕವಾಗಿ ಹಿಂದುಳಿದವರು ಕಾಂಗ್ರೆಸ್‌ ಕೈಹಿಡಿಯುವುದು ಸ್ಪಷ್ಟವಾದರೆ, ಆರ್ಥಿಕವಾಗಿ ಸಬಲಗೊಂಡವರು ಮತ್ತು ಮೇಲ್ಮಧ್ಯಮ ವರ್ಗದ ಜನ ಬಿಜೆಪಿ ಪರವಾಗಿದ್ದಾರೆ. ಜೆಡಿಎಸ್‌ನ ಬೆಂಬಲಿಗರಲ್ಲಿ ಎಲ್ಲ ವರ್ಗಗಳ ಮತದಾರರೂ ಇದ್ದಾರೆ. ಹೆಚ್ಚಿನ ಶಿಕ್ಷಣ ಪಡೆಯದವರು ಕಾಂಗ್ರೆಸ್‌ನತ್ತ ಒಲವು ತೋರಿದರೆ, ಹೆಚ್ಚು ಓದಿದವರು ಬಿಜೆಪಿಗೆ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT