ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75 | ಕಥೆಗಾರನಾದೆ ಪ್ರಜಾವಾಣಿಯಿಂದ

Last Updated 19 ನವೆಂಬರ್ 2022, 10:17 IST
ಅಕ್ಷರ ಗಾತ್ರ

ನಾನಾಗ ಏಳನೇ ತರಗತಿ. ಮನೇಲಿ ಪತ್ರಿಕೆ ತರಿಸುತ್ತಿರಲಿಲ್ಲ. ಪಕ್ಕಬೀದಿಯ ಅಂಗಡಿಯಲ್ಲಿ ತರಿಸುತ್ತಿದ್ದರು. ಸಮಯ ಆದಾಗೆಲ್ಲಾ ಅಲ್ಲಿಗೇ ಹೋಗಿ ಓದ್ತಿದ್ದೆ. ಅದೊಮ್ಮೆ ದೀಪಾವಳಿ ವಿಶೇಷಾಂಕ ಕಥಾಸ್ಪರ್ಧೆ, ಕಥೆ ಬರೆಯಿರಿ ಅಂತ ಜಾಹೀರಾತು ಇತ್ತು. ನಗದು ಬಹುಮಾನ ೫೦೦, ೨೫೦, ೧೦೦.... ಹೀಗೆಲ್ಲಾ ಇತ್ತು. ಮನೆಗೆ ಬಂದೆ. ಪಾಟೀಚೀಲದಲ್ಲಿದ್ದ ರಫ್ ನೋಟ್ ಮತ್ತು ಸೀಸದ ಕಡ್ಡಿ ತಗಂಡು ಹೋಗಿ ಇಡೀ ಜಾಹೀರಾತು, ನಿಬಂಧನೆಗಳನ್ನು ಬರೆದುಕೊಂಡು ಬಂದೆ.

ಅಂದು ಭಾನುವಾರ. ಮಾರನೇದಿನ ಸೂಳೆಕೆರೆ ರಸ್ತೆಯ ಎಡಭಾಗದಲ್ಲಿ ಅಂಚೆ ಕಚೇರಿಯಲ್ಲಿ ಹೇಗೋ ಎಪ್ಪತ್ತೈದು ಪೈಸೆ ಜೋಡಿಸಿಕೊಂಡು ಒಂದು ಇನ್ ಲ್ಯಾಂಡ್ ಲೆಟರ್ ತಂದೆ. ಸಂಜೆ ಶಾಲೆಯಿಂದ ಬಂದು ಅಮ್ಮನ ಮಗ್ಗುಲಿಗೆ ಕೂತು ಬಟ್ಟೆ ಅಂಗಡಿ ಮಲ್ಲಣ್ಣರಿಂದ ಸೀರೆ ಒಳಗಡೆ ಇಡುತ್ತಿದ್ದ ದಪ್ಪ ರಟ್ಟು ಪರೀಕ್ಷೆಗಂತ ತಂದಿದ್ದೆ. ಅದಕ್ಕೆ ಈ ಲೆಟರಿಟ್ಟು, ಅಮ್ಮನ ತಲೆಯ ಹೇರ್ ಪಿನ್ ಸಿಕ್ಕಿಸಿ ಅಲ್ಲಾನ ಹೆಸರು ತಗಂಡು ಒಂದಾನೊಂದು ಕಾಲದಲ್ಲಿ......ಅಂತ ಅಜ್ಜಿ ಹೇಳಿದ್ದ ರಾಜಕುಮಾರಿ, ರಾಕ್ಷಸನ ಕತೆ ಬರೆದು ಕೆಂಪು ಡಬ್ಬಕ್ಕೆ ಹಾಕಿದೆ. ಇದುವರೆಗೂ ಅದರ ಫಲಿತಾಂಶ ಬಂದಿಲ್ಲ!

ಕತೆ ಎಂದರೆ ಏನೆಂದು ತಿಳಿಯದ ವಯಸ್ಸಲ್ಲಿ ಕತೆ ಬರೆಸಿದ ಪ್ರಜಾವಾಣಿಗೆ ಇದೀಗ ಎಪ್ಪತ್ತೈದರ ಹರೆಯ. ಅದರ ಒಡನಾಟ ಇಂದಿಗೂ ನಮ್ಮ ಮನೆಯೊಳಗೆ ಒಬ್ಬ ಬಂಧುವಿನಂತೇ ಇದೆ. ವರ್ಷಕ್ಕೊಮ್ಮೆ ಕಾರಮಂಡಕ್ಕಿ ಅಂಗಡಿಯವನಿಗೆ ಒಟ್ಟು ಮಾಡಿ ಕೊಡುವಾಗ ಮನ ಮಗಳ ಕಳಿಸುವ ಭಾವ.

ಸಣ್ಣ ಪುಟ್ಟ ಲೇಖನ ಬರೆಯುತ್ತಾ.....ಅಂತೂ ಒಂದು ಕಥಾ ಸಂಕಲನದ ಜೊತೆಯಲ್ಲಿ ಎಂಟ್ಹತ್ತು ಕೃತಿಗಳು ಬಂದವು. ಬರಹಗಾರನಾಗಲು ಪ್ರಜಾವಾಣಿ ಪಾತ್ರ ಹಿರಿದು. ಪ್ರಜಾವಾಣಿ ಬಾಂಧವ್ಯ ಉತ್ತಮವಾಗಿ ಜಾರಿಯಿದೆ ಬಹುಶಃ ನನ್ನ ಅಂತ್ಯದ ತನಕವೂ ಮತ್ತು ನಂತರವೂ ಸಾಗಬಹುದು.

ಒಟ್ಟಾರೆ ಪ್ರಜಾವಾಣಿ ಬಾಳಲಿ ಬೆಳಗಲಿ.

ಸಂತೆಬೆನ್ನೂರು ಫೈಜ್ನಟ್ರಾಜ್

ಸಂತೆಬೆನ್ನೂರು

ಶಿಕ್ಷಕರು, ಕವಿ, ಸಾಹಿತಿ

ಚನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ

---

ಆಚಂದ್ರಾರ್ಕವಾಗಿ ಹೀಗೆ ಸಾಗಲಿ

ಓದುವ ಎಲ್ಲಾ ಮನಸುಗಳಿಗೆ ಪ್ರಸಾದ ದೀಕ್ಷೆ ನೀಡುವ ದಿನಪತ್ರಿಕೆ ಪ್ರಜಾವಾಣಿ ಎಂದರೆ ಅತಿಶಯೋಕ್ತಿಯಾಗದು. ಪ್ರಜಾವಾಣಿ ನಮ್ಮ ಮನೆ ಮನದ ದೈನಂದಿನ ಒಡನಾಡಿ ಮತ್ತು ರಾಜ್ಯದ ಜೀವನಾಡಿ ಎಂದರೆ ತಪ್ಪಾಗಲಾರದು.

ಪ್ರಜಾವಾಣಿ ಹಲವಾರು ದಶಕದಿಂದ ನಮ್ಮ ಮನೆಯ ಅಬಾಲವೃದ್ಧರಿಗೆ ಮುಂಜಾನೆಯ ಸಂಗಾತಿ. ನನಗೆ ಪ್ರತಿಯೊಂದುವಿಷಯದಲ್ಲೂ ಜಿಗ್ಞ್ಯಾಸೆ ಮೂಡಿಸಿ ಜ್ಞಾನ ಹೆಚ್ಚಿಸುವಲ್ಲಿ ನೆರವಾಗಿದೆ. ಪ್ರಜಾವಾಣಿಯಲ್ಲಿನ ಅತ್ಯುತ್ತಮ ಗುಣಮಟ್ಟದ ವಿಷಯ ವಿಚಾರ ವಿವರ ಎಲ್ಲವೂ ಅಪ್ಯಾಯಮಾನವಾಗಿವೆ.ಎಲ್ಲದಕ್ಕಿಂತ ಮುಖ್ಯವಾಗಿ ವಸ್ತುನಿಷ್ಠಗೆ ಒತ್ತು ಕೊಟ್ಟ ಪತ್ರಿಕೆ.ಎಪ್ಪತೈದು ವರ್ಷಗಳ ನಿರಂತರ ಸಮಾಜಮುಖಿ ವಾರ್ತಾ ಸೇವೆ ಸಾಮಾನ್ಯವಲ್ಲ. ವಿಜ್ಞಾನ, ತಂತ್ರಜ್ಞಾನ, ರಾಜಕೀಯ , ಕ್ರೀಡೆ, ಆರೋಗ್ಯ, ಹಣಕಾಸು, ಭವಿಷ್ಯ, ಅಭಿಮತ ಇತ್ಯಾದಿ ಇತ್ಯಾದಿ ಎಲ್ಲವೂ ಓದುಗನಿಗೆ ರಸದೌತಣ. ಪತ್ರಿಕೆಯಲ್ಲಿನ ಸಮಯೋಚಿತ ಫೋನ್ ಇನ್ ಕಾರ್ಯಕ್ರಮದ ಚರ್ಚಾ ವಿಷಯ, ಫ್ಯಾಕ್ಟ್ ಚೆಕ್, ದಿನದ ಟ್ವೀಟ್, ಪ್ರಶ್ನೋತ್ತರ, ಬೆರಗಿನ ಬೆಳಕು, ಪ್ರಜಾಧ್ವನಿ , ಚಿನಕುರಳಿ, ಗುಂಡಣ್ಣ, ಸುದ್ದಿ 2 ನಿಮಿಷ ಎಲ್ಲವೂ ಸೂಪರ್. ಅಮೃತ ಮಹೋತ್ಸವ ಮುಂದೆ ಶತಮಾನೋತ್ಸವ ಪೂರೈಸಿ ಆಚಂದ್ರಾರ್ಕವಾಗಿ ಹೀಗೆ ಸಾಗಲಿ ಎಂಬುದು ನನ್ನ ಆಶಯ. ದೇಶ ಅಷ್ಟೇ ಅಲ್ಲದೆ ಡಿಜಿಟಲ್ ಮಾಧ್ಯಮದಿಂದ ವಿದೇಶದ ಓದುಗರಿಗೆ ಪ್ರಜಾವಾಣಿಯನ್ನು ದಿನಂಪ್ರತಿ

ನೀಡುತ್ತಿರುವ ತನ್ನ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಶುಭಾಶಯಗಳು.

ವಿಜಯಕುಮಾರ್ ಎಚ್.ಕೆ.

ರಾಯಚೂರು

---

ನಾನು ಪ್ರಜಾವಾಣಿ ಪ್ರತ್ರಿಕೆಯನ್ನು ಸುಮಾರು 1989ರಿಂದ ಓದುತ್ತಿದ್ದೇನೆ, ನಿಜವಾಗಲೂ ನಿಖರ, ಸತ್ಯಸಂಗತಿ, ಸಮಾಜಕ್ಕೆ ಓಳ್ಳೇ ಸಂದೇಶವನ್ನು ನೀಡುವ ಏಕೈಕ ಪತ್ರಿಕೆಯಾಗಿದೆ ನನ್ನ ದೈನಂದಿನ ದಿನಚರಿ ಪತ್ರಿಕೆ ಓದುವ ಮುಖಾಂತರ ಪ್ರಾರಂಭವಾಗುತ್ತದೆ. ಅಂದು ಪತ್ರಿಕೆ ಓದಿಲ್ಲ ಅಂದರೆ ಏನೋ ಕಳುದುಕೊಂಡಂತೆ ಅನಿಸುತದೆ. ಸಮಗ್ರ ವಿಷಯವನ್ನು ಓದುಗರಿಗೆ ನೀಡುವ ಮೂಲಕ ಓದುಗರ ಮನ ಮನಸುರಿಗೋಳಿಸಿದೆ. 75ವಸಂತ ಪೂರೈಸಿದ ಈ ಶುಭ ಸಂದರ್ಭದಲ್ಲಿ ಇನ್ನೂ ಅನೇಕ ವಸಂತ ಪೂರೈಸಲಿ ಎಂದು ಅರಿಸುತ್ತೇನೆ. ಮೌನೇಶ ಹಿರೇಹಣಗಿ, ಅಧ್ಯಕ್ಷರು, ಕ. ರಾ. ಪ್ರೌಢ ಶಾಲಾ ಸ ಶಿಕ್ಷಕರ ಸಂಘ( ರಿ )ಸಿರವಾರ.

***

ದಿನಪತ್ರಿಕೆಗಳ ಏಜೆಂಟ ಮತ್ತು ವಿತರಕರಾಗಿದ್ದ, ನನ್ನ ತಂದೆಯವರೊಡನೆ , ಚಿಕ್ಕ ವಯಸ್ಸಿನಲ್ಲಿಯೇ ಪ್ರಜಾವಾಣಿ ಪತ್ರಿಕೆ ವಿತರಣೆ ಮಾಡುವ ಹವ್ಯಾಸ ನನಗೆ. ಹಾಗೇ ನನ್ನ ಶಿಕ್ಷಣ ಅವಧಿಯಲ್ಲಿ ಪ್ರತಿ ನಿತ್ಯ ಪ್ರಜಾವಾಣಿ ಲೇಖನಗಳ ಓದು ನನ್ನ ಬೆಳವಣಿಗೆಗೆ ಪೂರಕವಾಗಿತ್ತು. ಸರ್ಕಾರದ ಉನ್ನತ ಹುದ್ದೆ ಪಡೆಯುವಲ್ಲಿಯೂ ಸಹಕಾರಿಯಾಯಿತು. 1992 ರಿಂದಾ 2001 ರ ಅವಧಿಯಲ್ಲಿ ಪ್ರಾಧಿಕಾರ ಮತ್ತು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗೆ ಸ್ಪಂದಿಸುವ ಅವಕಾಶ ಸಿಕ್ಕಿತು . ವಿವಿಧ ಬೇರೆ ಪತ್ರಿಕೆ ಗಳಿಗೆ ಹೋಲಿಸಿದರೆ ಪ್ರಜಾವಾಣಿ ಶುದ್ಧಿ , ಸಮಾಚಾರ , ತಲೆಬರಹಗಳು ವಿಶಿಷ್ಟ ಮತ್ತು ನನಗೆ ತುಂಬಾ ಆಕರ್ಷಣೆಯ. ಸಂಪಾದಕೀಯ, ಅಭಿಮತ ಪುಟ, ಚಿನಕುರಳಿ, ಚುರುಮುರಿ, ವಾಚಕರ ವಾಣಿ, ಸಂಗತ, ಇವುಗಳನ್ನು ದಿನ ನಿತ್ಯ ಓದುವ ಹವ್ಯಾಸ. ನನ್ನ ಪತ್ನಿಯು ಶನಿವಾರ ಪ್ರಕಟವಾಗುವ " ಸವಿ ರುಚಿಯ ಸಿಹಿ ಭಕ್ಷಗಳು " ನೋಡಿ ಮಾಡುವದು ಒಂದು ವಿಶೇಷ. ನಾವು ಆಗಾಗ ವಿದೇಶ ಗಳಿಗೆ ಭೇಟಿ ನೀಡಿದಾಗಲೂ , ಜಾಲತಾಣದ ಮೂಲಕ ಪ್ರಕಟವಾಗುವ ಈ ಪತ್ರಿಕೆಯನ್ನು ದಿನ ನಿತ್ಯ ಸಂಪರ್ಕಿಸುತ್ತಿದ್ದೆವು .ಪ್ರಜಾವಾಣಿಯ "ಅಮೃತ ಮಹೋತ್ಸವ ಆಚರಣೆ" ಮಾಡುತ್ತಿರುವುದು ಅತ್ಯಂತ ಸಂತೋಷ, ಅಭಿನಂದನೆಗಳು.

ಚಿನ್ನಪ್ಪ ಗುರುಸಿದ್ಧಪ ಶೆಟ್ಟರ,

-ನಿವೃತ್ತ ಜಂಟಿ ನಿರ್ದೇಶಕ, ಯು ಸೇ ಇ ಬೆಂಗಳೂರು

***

ವಿಶಿಷ್ಟ ಮೈಲಿಗಲ್ಲನ್ನು ದಾಟಿದ ಪ್ರಜಾವಾಣಿಗೆ ಅಮೃತ ಮಹೋತ್ಸವದ ಅಭಿನಂದನೆಗಳು.

ಕಳೆದ 45 ವರ್ಷಗಳಿಂದ ಪ್ರಜಾವಾಣಿಯ ಓದುಗ.

ಬಾಲ್ಯದಲ್ಲಿ ಆಕರ್ಷಿಸಿದ್ದು ಪ್ರಜಾವಾಣಿಯ ಕ್ರೀಡಾ ವರದಿಗಳು; ತದನಂತರ ಸಾಪ್ತಾಹಿಕ ಪುರವಣಿಯ ಮೌಲಿಕ ಲೇಖನಗಳು ಪ್ರಜಾವಾಣಿಯನ್ನು ಮತ್ತಷ್ಟು ಹತ್ತಿರಗೊಳಿಸಿದವು.

90ರ ದಶಕದಲ್ಲಿ ಉದ್ಯೋಗದ ನಿಮಿತ್ತ ಹೊರದೇಶದಲ್ಲಿದ್ದಾಗ ಅಂತರ್ಜಾಲದ ಆವೃತ್ತಿಯ ಮೂಲಕ ಮುಂದುವರಿದ ಪ್ರಜಾವಾಣಿಯ ನಂಟು ತಾಯ್ನಾಡಿನ ದೂರವನ್ನು ಹತ್ತಿರಗೊಳಿಸಿತು.

ಕನ್ನಡ ದಿನಪತ್ರಿಕೆಗಳಲ್ಲಿ ಪ್ರಥಮವಾಗಿ ಅಂತರ್ಜಾಲದ ಆವೃತ್ತಿಯ ಮೂಲಕ ವಿಶ್ವದಾದ್ಯಂತ ಕನ್ನಡ ಓದುಗರನ್ನು ತಲುಪಿದ ಹೆಮ್ಮೆ ಪ್ರಜಾವಾಣಿಯದ್ದು.

ಪತ್ರಿಕಾ ಮುದ್ರಣದಲ್ಲಿ ನಿರಂತರವಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಕನ್ನಡ ಪತ್ರಿಕಾ ವಲಯದಲ್ಲಿ ಮೇಲ್ಪಂಕ್ತಿಯನ್ನು ಹಾಕಿರುವ ಹಿರಿಮೆ ಪ್ರಜಾವಾಣಿಗೆ ಸಲ್ಲುತ್ತದೆ.

ಈ ಎಲ್ಲಾ ವಿಶೇಷತೆಗಳ ನಡುವೆ, ಮುಖ ಮತ್ತು ಮಧ್ಯ ಪುಟದ ಲೇಖನಗಳಲ್ಲಿ (ಎಡ-ಬಲ ವೈರುಧ್ಯಗಳ ನಡುವೆ ಎಲ್ಲಾ ಇಸಂಗಳಿಂದ ಅತೀತವಾಗಿ) ತುಸು ಸಮತೋಲನವನ್ನು ಕಾಪಾಡಿಕೊಂಡಲ್ಲಿ ಅದು ಪ್ರಜಾವಾಣಿಯನ್ನು ಮತ್ತಷ್ಟು ಎತ್ತರಕ್ಕೆ ಏರೀಸೀತು..

-ಚಂದ್ರಶೇಖರ್ ಗೋಪಾಲಭಟ್

ಜಯನಗರ, ಬೆಂಗಳೂರು-70

****

ಪ್ರತಿದಿನ ಮುಂಜಾನೆ ಜ್ಞಾನದ ಬಾಗಿಲನ್ನು ತೆಗೆಯುವ ಏಕೈಕ ದಿನಪತ್ರಿಕೆ ಪ್ರಜಾವಾಣಿ 2000 ಇಸ್ವಿಯಿಂದ ಜನಪ್ರಿಯ ಪತ್ರಿಕೆಯಾಗಿದೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಎಲ್ಲಾ ಮಾಹಿತಿಯನ್ನು ಒಳಗೊಂಡಿದೆ ಏಕೈಕ ಎಲ್ಲರ ಒಡನಾಡಿಯ ಪತ್ರಿಕೆಯಾಗಿದೆ ನಾನು ಧಾರವಾಡದಲ್ಲಿ 2015 ನೇ ಇಸ್ವಿಯಿಂದ ಈ ಪತ್ರಿಕೆಯನ್ನು ಓದಲು ಪ್ರಾರಂಭಿಸಿದೆ ಯಾವ ಪತ್ರಿಕೆ ತೆಗೆದುಕೊಂಡರು ಇಷ್ಟವಾಗದೇ ಇರುವ ಅಂಶಗಳು ಈ ಪತ್ರಿಕೆಯಲ್ಲಿ ಕಂಡುಬಂದಿತು ವಾರದಲ್ಲಿ ಬರುವ ವಿಶ್ಲೇಷಣೆ ಸಂಘಟ ವಾಚಕರವಾಣಿ ಸುಭಾಷಿತ ಹೀಗೆ ಹತ್ತು ಹಲವಾರು ಅಂಶಗಳನ್ನು ಒಳಗೊಂಡಿರುವ ಪ್ರಜಾವಾಣಿ ಪತ್ರಿಕೆಯು ಎಲ್ಲರ ಅಚ್ಚುಮೆಚ್ಚಿನ ಪತ್ರಿಕೆಯಾಗಿದೆ ಸ್ಪರ್ಧಾತ್ಮಕ ಪರೀಕ್ಷೆಗೆ ನನಗೆ ಬಹಳ ಅನುಕೂಲವಾಗಿತ್ತು ಯಾವ ಸಮಯದಲ್ಲಿಯೂ ಸಹ ಒಂದು ದಿನ ಬಿಡದೆ ಈ ಪತ್ರಿಕೆಯನ್ನು ಓದುತ್ತಾ ಬಂದಿದ್ದೇನೆ ಈ ಪತ್ರಿಕೆಯು ನನ್ನ ಜೀವನಾಡಿಯಾಗಿದೆ ಈಗಲೂ ಸಹ ಅತ್ಯುತ್ತಮವಾದ ಅಂಶಗಳನ್ನು ಒಳಗೊಂಡ ಮಾಹಿತಿಗಳ ಪ್ರಕಟವಾಗುತ್ತಿವೆ..

- ಆಬಿದ್ (ಸಹ ಶಿಕ್ಷಕ ಸ ಹಿ ಪ್ರಾ ಶಾಲೆ ಗುಂಡೂರು) ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು, ಮುಸ್ಟೂರು

***

ಭವಿಷ್ಯದ ಪತ್ರಕರ್ತರಿಗೆ ಮಾರ್ಗದರ್ಶಿ :

ಪತ್ರಕರ್ತರಾಗಬೇಕೆಂಬ ಆಸಕ್ತಿಯಿಂದ ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರಜಾವಾಣಿ ಪತ್ರಿಕೆಯು ಮಾರ್ಗದರ್ಶಿಯಂತೆ ಕಾರ್ಯ ನಿರ್ವಹಿಸುತ್ತಿದೆ. ಪತ್ರಿಕೆಯಲ್ಲಿ ಬರುವ ಲೇಖನಗಳು ಪ್ರಸ್ತುತ ಜಾಯಮಾನದ ವಿಷಯಾಧಾರಿತವಾಗಿದ್ದು , ಓದಿದ ಪ್ರತಿಯೊಂದು ಲೇಖನಗಳಿಂದ ಜ್ಞಾನಾರ್ಜನೆ ಹೆಚ್ಙಾಗುತ್ತ ಹೋಗುತ್ತದೆ. ಸುದ್ದಿ ಮಾಡುವ ಕಲೆ , ಲೇಖನ , ಬರೆಯುವ ವಿಧಾನ ಪುಟದ ವಿನ್ಯಾಸ ಎಲ್ಲವು ಒಂದು ರೀತಿಯ ವಿಭಿನ್ನವಾಗಿರುತ್ತವೆ.

ಪ್ರತಿಯೊಬ್ಬ ಕನ್ನಡ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕನಸು ಪ್ರಜಾವಾಣಿಯ ಸಂಪಾದಕೀಯ ಪುಟದಲ್ಲಿಯೋ ಅಥವಾ ಪುರವಣಿಯಲ್ಲೋ ಒಂದು ಲೇಖನ ಪ್ರಕಟಗೊಳ್ಳಬೇಕು ಎನ್ನುವುದಾಗಿರುತ್ತದೆ. ಪ್ರಜಾವಾಣಿಯಲ್ಲಿ ಲೇಖನವೊಂದು ಪ್ರಕಟವಾದರೆ ದೊಡ್ಡ ಪ್ರಶಸ್ತಿಯೇ ಸಿಕ್ಕಂತೆ ಸಂತಸಗೊಳ್ಳುವ ವಿದ್ಯಾರ್ಥಿಗಳು ಇದ್ದಾರೆ.

-ಮಾಳಿಂಗರಾಯಮಾದ್ಯಮ ವಿದ್ಯಾರ್ಥಿ

****

ಓದುಗಳಿಂದ ಬರಹಗಾರಳನ್ನಾಗಿಸಿದ ಪ್ರಜಾವಾಣಿಗೆ ನಮನ

ಓದುಗಳಿಂದ ಪ್ರಜಾವಾಣಿ ಬರಹಗಾರಳಾಗಿದ್ದು ಇನ್ನೂ ಸಂಭ್ರಮದ ಸಂಗತಿ.

ಮೊಟ್ಟ ಮೊದಲಿಗೆ ಕೊರೋನಾ ಬರುವ ಮೊದಲು ಪ್ರತಿ ಗುರುವಾರದಂದು ಬರುತ್ತಿದ್ದ ಕಾಮನಬಿಲ್ಲು (ಸ್ಪೆಷಲ್ ಎಡಿಷನ್) ನಲ್ಲಿ ಆಗಾಗ್ಗೆ ಓದುಗರಿಗಾಗಿಯೇ ಒಂದು ಪುಟ ಮೀಸಲಿಟ್ಟು ವಿಷಯವನ್ನು ಕೊಟ್ಟು ಬರಹವನ್ನು ಆಹ್ವಾನಿಸುತ್ತಿದ್ದಾಗ, ಒಮ್ಮೆ ಬಾಲ್ಯದ ನೆನಪು ಶೀರ್ಷಿಕೆಯಡಿಯಲ್ಲಿ ನಾನು ಬರೆ

"ಗುಬ್ಬಚ್ಚಿ ತಿಥಿ" ಲೇಖನ ಪ್ರಕಟವಾದಾಗ ಆದ ಸಂಭ್ರಮ ಅವರ್ಣನೀಯ. ಏಕೆಂದರೆ ಪ್ರಜಾವಾಣಿಯಲ್ಲಿ ಯಾರದೇ, ಯಾವುದೇ ಒಂದು ಬರಹ ಪ್ರಕಟವಾಯಿತೆಂದರೆ ಜನ ನೋಡುತ್ತಿದ್ದ ರೀತಿಯೇ ಬೇರೆ. ನಂತರ ಸಾಪ್ತಾಹಿಕ ಪುರವಣಿ, ಭಾನುವಾರದ ಪುರವಣಿಯಲ್ಲಿ ನನ್ನ ಕೆಲ ಹಾಸ್ಯ ಲೇಖನ, ಲಘು ಬರಹ ಪ್ರಕಟವಾದವು. ದೀಪಾವಳಿ ಸಂಚಿಕೆಯಲ್ಲಿ ಓದುಗರ ವೇದಿಕೆಯಲ್ಲಿ ಕಳೆದುಕೊಂಡವರ ನೆನಪಲ್ಲಿ ಶೀರ್ಷಿಕೆಯಡಿ "ಹೆರದಿದ್ದರೂ ಹೊರದಿದ್ದರೂ ತಾಯಂತೆ ಸಲಹಿದವಳ ನೆನಪಲ್ಲಿ" ಎಂಬ ಬರಹ ಪ್ರಕಟವಾಯ್ತು. ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಲೇಖನವನ್ನು ಓದಿದ ಸ್ಥಳೀಯ ಪತ್ರಿಕಾ ಸಂಪಾದಕರು ನಿಮ್ಮ ಲೇಖನ ಓದಿದೆ ಚನ್ನಾಗಿ ಬರೀತೀರ ನಮ್ಮ ಪತ್ರಿಕೆಗೇಕೆ ಬರೆಯುವುದಿಲ್ಲ ಬರೆಯಿರಿ ಎಂದರು. ನಿಜವಾಗಿ ಸಂತೋಷವಾಯ್ತು. ಅಂದರೆ ಪ್ರಜಾವಾಣಿ ಪತ್ರಿಕೆಯಲ್ಲಿ ಬರಹ ಪ್ರಕಟವಾದರೆ ಅದರ ಘನತೆಯೇ ಬೇರೆಯದಾಗಿರುತ್ತಿತ್ತು ಎನಿಸುತ್ತದೆ. ಅಲ್ಲಿ ಓದಿದ ಬಹಳಷ್ಟು ಸಾಹಿತಿಗಳು ಮೆಚ್ಚುಗೆ ಸೂಸಿದರು ಬಹುಷಃ ಅದು "ಹೂವಿನಿಂದ ನಾರು ಸ್ವರ್ಗ ಸೇರಿದಂತೆ "ಪತ್ರಿಕೆಯ ಘನತೆಯಿಂದ ಎನಿಸಿತು . ಇತ್ತೀಚೆಗೆ ಕೊರೋನಾ ನಂತರ ಹಾಸ್ಯ ಲೇಖನ ಲಘು ಬರಹಗಳಿಗೆ ಅವಕಾಶವಿಲ್ಲವಾಗಿದೆ.

ರಾಜೇಶ್ವರಿ. ಹುಲ್ಲೇನಹಳ್ಳಿ.ಲೇಖಕಿ. 9141350600

---

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT