ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75: ಬರವಣಿಗೆ ಕಲಿಸಿದ ಪತ್ರಿಕೆ

Last Updated 2 ನವೆಂಬರ್ 2022, 21:55 IST
ಅಕ್ಷರ ಗಾತ್ರ

ಬರವಣಿಗೆ ಕಲಿಸಿದ ಪತ್ರಿಕೆ

ನಮ್ಮದು ಮೊದಲ ತಲೆಮಾರಿನ ಶಿಕ್ಷಣ, ನನ್ನ ಶೈಕ್ಷಣಿಕ ಅವಧಿಯಲ್ಲಿ ಕನ್ನಡ ಅಕ್ಷರವ ತಿದ್ದಿ ತೀಡಿ ಕಲಿಸುವ ಪಾತ್ರ ವಹಿಸಿದ್ದು ನನ್ನ ಹೆಮ್ಮೆಯ ಪ್ರಜಾವಾಣಿ ಪತ್ರಿಕೆ. ಬುದ್ದಿಕಂಡಾಗಿನಿಂದಲೂ ಈ ಪತ್ರಿಕೆಯನ್ನು ಹೊರತು ಬೇರೆ ಪತ್ರಿಕೆಯನ್ನು ಓದಲು ಮನಸ್ಸು ಒಪ್ಪುವುದಿಲ್ಲ. ಒಂದು ದಿನ ಪ್ರಜಾವಾಣಿ ಓದದಿದ್ದರೆ ಶೂನ್ಯ ಅವರಿಸಿದಂತೆಯೇ. ಪತ್ರಿಕೆಯ ಜಾತ್ಯತೀತ ಸಂಕೇತ ಮತ್ತು ನಿಲುವು ನನ್ನನ್ನು ಈ ಪತ್ರಿಕೆಯ ವ್ಯಸನಿಯಾಗಿಸಿದಲ್ಲದೆ, ಸಾಮಾಜಿಕ ಜ್ಞಾನಾರ್ಜನೆ ವೃದ್ಧಿಸಿದ ಕೀರ್ತಿಯೂ ಇದರದೆ.

ನನ್ನ ದಿನಚರಿ ಸಾಗುವುದೇ ಪ್ರಜಾವಾಣಿಯೊಂದಿಗೆ. ಸಮಾಜದ ಅಂಕುಡೊಂಕುಗಳ ಬಗ್ಗೆ ನನ್ನ ಕಿರು ಬರವಣಿಗೆಗೆ ಸ್ಥಳ ಕಲ್ಪಿಸಿ ಒಂದಷ್ಟು ಮಂದಿ ನನ್ನನ್ನು ಗುರುತಿಸುವಂತೆ ಮಾಡಿದೆ. ಪತ್ರಿಕೆಯು ನಾಲ್ಕೂವರೆ ದಶಕಗಳಿಂದ ನನ್ನ ಸಂಗಾತಿ ಆಗಿರುವುದಕ್ಕೆ ಧನ್ಯವಾದಗಳು.

-ಚಂದ್ರಶೇಖರ ಪುಟ್ಟಪ್ಪ, ಚಾಮರಾಜಪೇಟೆ

ಕನ್ನಡಿಗರ ಸಾಕ್ಷಿಪ್ರಜ್ಞೆ

ನಾನು 1965ರಿಂದಲೂ ಪ್ರಜಾವಾಣಿಯನ್ನು ಓದುತ್ತಿದ್ದೇನೆ. ಸುದ್ದಿ ಅಂದರೆ ಪ್ರಜಾವಾಣಿ ಅನ್ನೋ ಮಾತಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೆಯ ಪಾತ್ರ ಮಹತ್ವದ್ದು. ಇದು ಕನ್ನಡಿಗರ ಸಾಕ್ಷಿಪ್ರಜ್ಞೆ. ಯಾರ ಭಾವನೆಯನ್ನೂ ಕೆರಳಿಸದೆ, ನಾಜೂಕಾಗಿ ಸತ್ಯದ ಅನಾವರಣ ಮಾಡೋ ಶಕ್ತಿ ಇದೆ.1990ರಲ್ಲಿ ನಾನು ಬರೆದ ‘ಆರೋಗ್ಯ ಭಾಗ್ಯ’ ಅಂಕಣ 12 ವಾರ ಪ್ರಕಟವಾಯಿತು. ಅದು ಎಲ್ಲಾ ವರ್ಗದವರ ಮೆಚ್ಚುಗೆಗೆ ಒಳಗಾಯ್ತು. ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಕೆ.ಟಿ. ಗಟ್ಟಿ, ಕೆ.ಎಸ್‌. ನಿಸಾರ್‌ ಅಹಮದ್‌ ಅವರಂಥ ದಿಗ್ಗಜರೆಲ್ಲಾ ಪ್ರತಿಕ್ರಿಯಿಸಿದರು. ಈ ಪತ್ರಿಕೆಯು ನನ್ನ ಸುಪ್ತ ಪ್ರತಿಭೆಗೆ ಅವಕಾಶ ಕೊಟ್ಟಿತು.

-ಡಾ. ಬಿ.ಟಿ. ರುದ್ರೇಶ್‌, ಹೋಮಿಯೋಪತಿ ತಜ್ಞ, ಬೆಂಗಳೂರು

ನೊಂದವರಿಗೆ ಬೆಳಕು

‘ಪ್ರಜಾವಾಣಿ’ 75ನೇ ಅಮೃತ ಮಹೋತ್ಸವ ನೋಡಿ ತುಂಬಾ ಖುಷಿಯಾಯಿತು. ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ಬರಹ ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವ ಮಾತುಗಳು ಅರ್ಥಪೂರ್ಣವಾಗಿದ್ದವು. ಕಳೆದ 75 ವರ್ಷಗಳಲ್ಲಿ ‘ಪ್ರಜಾವಾಣಿ’ಯಲ್ಲಿ ದುಡಿದ ಎಲ್ಲಾ ಕೈಗಳಿಗೆ ಮತ್ತು ಮನಸ್ಸುಗಳಿಗೆ ವಂದನೆಗಳು.

ಪತ್ರಿಕೆಯನ್ನು ಪ್ರಾರಂಭಿಸಿದವರಿಗೆ ಇಂತಹ ದೂರದೃಷ್ಟಿ ಮತ್ತು ಸಾಮಾಜಿಕ ಕಾಳಜಿಯಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ.

ನಾನು 9ನೇ ತರಗತಿಯಲ್ಲಿದ್ದಾಗ, ಯಾವುದೋ ಒಂದು ಪ್ರಶ್ನೆಗೆ ಯಾರೂ ಉತ್ತರ ಹೇಳಲಿಲ್ಲ. ಕನ್ನಡದ ಮೇಷ್ಟ್ರು ನರಸಿಂಹಾಚಾರ್, ‘ನೀವು ನಾಳೆಯಿಂದ ಪತ್ರಿಕೆ ಓದಿ ಒಂದೊಂದು ವಿಷಯದ ಬಗ್ಗೆ ಹೇಳಬೇಕು’ ಎಂದರು. ಆ ಮಾತು, ‘ಪ್ರಜಾವಾಣಿ’ಯನ್ನು ಓದುವಂತೆ ಮಾಡಿತು. ದಲಿತರ ಮೇಲೆ ದೌರ್ಜನ್ಯವಾದಾಗಲೆಲ್ಲಾ ಅತಿ ಹೆಚ್ಚು ಸಂಪಾದಕೀಯವನ್ನು ಬರೆದ ಪತ್ರಿಕೆ ‘ಪ್ರಜಾವಾಣಿ’ ಒಂದೇ. ಪತ್ರಿಕೆ ಹೀಗೆಯೇ ಸಾಗಿ ಶತಮಾನೋತ್ಸವಕ್ಕೆ ಮುನ್ನಡೆಯಲಿ.

-ಸುಬ್ಬು ಹೊಲೆಯಾರ್ ಕವಿ, ಬೆಂಗಳೂರು

ಆರು ದಶಕದ ನಂಟು

ಪ್ರಜ್ಞಾವಂತ ಕನ್ನಡ ಜನತೆಯ ನೆಚ್ಚಿನ ಪತ್ರಿಕೆಯಾಗಿರುವ ಪ್ರಜಾವಾಣಿಯೊಡನೆ ನನಗಿರುವ ಬಾಂಧವ್ಯ ಸುಮಾರು ಅರವತ್ತು ವರ್ಷಗಳಷ್ಟು ಹಿಂದಿನದು.

ಅಲ್ಲಿನ ಒಂದು ಕಾಲದ ಹಿರಿಯರ ಪ್ರೀತಿಯ ಮತ್ತು ಸಾಮಾಜಿಕ ನ್ಯಾಯದ ಪರವಾದ ಆತ್ಮೀಯತೆಯ ಒಡನಾಟ ಅಸಾಧಾರಣವಾದದ್ದು.

ನನ್ನ ಹೆಚ್ಚಿನ ಕಥೆ, ಕವನ, ವಿಮರ್ಶೆ, ವೈಚಾರಿಕ ಬರಹಗಳು - ಈ ಪತ್ರಿಕೆಯಲ್ಲಿ ಉದ್ದಕ್ಕೂ ಬೆಳಕು ಕಂಡಿವೆ. ನಮ್ಮ ವಿಚಾರವಾದಿ ಹೋರಾಟಗಳು, ಸರಳ ಮದುವೆಯ ಚಳವಳಿ, ಬಂಡಾಯ ಸಾಹಿತ್ಯ ಸಮ್ಮೇಳನ ಹಾಗೂ ಸೂಕ್ಷ್ಮ ಸಂವೇದನಾಶೀಲ ಚಿಂತನೆಗಳ ಗೋಷ್ಠಿ-ಶಿಬಿರ-ಉಪನ್ಯಾಸಗಳಿಗೆ ಈ ಪತ್ರಿಕೆ ನೀಡಿದ ಉತ್ತೇಜನ ನಿಜಕ್ಕೂ ದೊಡ್ಡದು.

ಈ ಆಪತ್ಕಾಲದಲ್ಲೂ ಕೂಡ ಕನ್ನಡಿಗರ ಅಂತರಂಗದ ಸತತ ಕನ್ನಡಿಯಾಗಿರುವ ಪ್ರಜಾವಾಣಿ ಪತ್ರಿಕೆಯು ಜನತೆಯ ಬದುಕಿನ ಜೀವನಾಡಿಯಾಗಿ ಬೆಳೆಯಲೆಂದು ಹೃದಯ ತುಂಬಿ ಹಾರೈಸುತ್ತೇನೆ.

- ಪ್ರೊ.ಕಾಳೇಗೌಡ ನಾಗವಾರ, ಸಾಹಿತಿ, ಮೈಸೂರು

ನಿಮ್ಮ ಅನಿಸಿಕೆಗಳನ್ನು pvat75@prajavani.co.in ಗೆ ಕಳುಹಿಸಿ ಇನ್ನಷ್ಟು ಪ್ರತಿಕ್ರಿಯೆಗಳನ್ನು prajavani.net ನಲ್ಲಿ ಓದಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT