ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75 | ಬರವಣಿಗೆಯ ಬೆಳವಣಿಗೆಗೆ ನೆರವು -ಸ. ಗಿರಿಜಾಶಂಕರ

Last Updated 19 ನವೆಂಬರ್ 2022, 10:18 IST
ಅಕ್ಷರ ಗಾತ್ರ

ಬರವಣಿಗೆಯ ಬೆಳವಣಿಗೆಗೆ ನೆರವು
7ನೇ ತರಗತಿಯಲ್ಲಿ ಇದ್ದಾಗ ‘ಪ್ರಜಾವಾಣೆ’ಗೆ ಮುಖಾಮುಖಿಯಾದೆ. ಅಂದಿನಿಂದ ಇಂದಿನವರೆಗೆ ನಾನು ಈ ಪತ್ರಿಕೆ ಓದುಗ.

ವಿಶೇಷವೆಂದರೆ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟಾಗ ‘ಪ್ರಜಾವಾಣಿ’ಯೇ ನನ್ನಗುರು. ಅದೊಂದು ರೀತಿ ದ್ರೋಣಾಚಾರ್ಯ - ಏಕಲವ್ಯ ಸಂಬಂಧದಂತೆ. ಆದರೆ ಈ ದ್ರೋಣಾಚಾರ್ಯ ನನ್ನ ಬೆರಳು ಕೇಳಲಿಲ್ಲ, ಬದಲು ನನ್ನ ಬೆರಳನ್ನು ಬಲಪಡಿಸಿದ ಗುರು.

ಆ ಸದನ ಸಮೀಕ್ಷೆ, ಸುದ್ದಿಯ ಹೊಸತನ, ಸಂದರ್ಶನಗಳನ್ಮು ಓದುತ್ತಾ, ಆ ರೀತಿಯಲ್ಲಿ ಬರೆಯಲು ಪ್ರಯತ್ನಿಸುತ್ತಾ ನನ್ನ ಬೆಳವಣಿಗೆ ಆ ಕ್ಷೇತ್ರದಲ್ಲಿ ಸಾಗಿತು. ‘ಪ್ರಜಾವಾಣಿ’ ನನ್ನ ದೈನಂದಿನದ ಭಾಗ. ಇಂದೂ ಸಾಹಿತ್ಯ, ಸಂಗೀತ, ವಿಮರ್ಶೆ, ಕಲೆ ಈ ರೀತಿ ಸುದ್ದಿಯಷ್ಟೇ ಅಲ್ಲ ಒಂದು ಪರಿಪೂರ್ಣ ಪತ್ರಿಕೆಯಾಗಿ ಅದು ನನ್ನ ಮನೆ– ಮನ ತುಂಬುತ್ತಿದೆ. ಅದಕ್ಕೆ ಇನ್ನೂ 25 ಸೇರಲಿ, ಆ ಶತಮಾನದ ಸಂಭ್ರಮ ನೋಡುವ ಸೌಭಾಗ್ಯ ನನ್ನದಾಗಲಿ.

–ಸ. ಗಿರಿಜಾಶಂಕರ, ಪತ್ರಕರ್ತ, ಚಿಕ್ಕಮಗಳೂರು

**
‘ಪ್ರಜಾವಾಣಿ’ ಸಮೃದ್ಧ ಪತ್ರಿಕೆ
‘ಪ್ರಜಾವಾಣಿ’ ಓದಿದ ನಂತರ ಅನ್ಯ ಪತ್ರಿಕೆಗಳತ್ತ ಗಮನ ಹರಿಯುವುದಿಲ್ಲ. ಓದುಗನೊಬ್ಬನ ಅಗತ್ಯಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಸಮೃದ್ಧ ಪತ್ರಿಕೆ ‘ಪ್ರಜಾವಾಣಿ’. ರಾಜ್ಯ, ರಾಷ್ಟ್ರೀಯ ಹಾಗೂ ವಿದೇಶದ ಸುದ್ದಿಗಳ ಜತೆಗೆ 25–50 ವರ್ಷಗಳ ಹಿಂದಿನ ಪ್ರಸ್ತುತ ದಿನದ ಇತಿಹಾಸದ ಒಳನೋಟವನ್ನು ಬಹುಶಃ ಯಾವ ಪತ್ರಿಕೆಯೂ ಕೊಡುತ್ತಿಲ್ಲ. ಜಾತ್ಯತೀತ, ಧರ್ಮಾತೀತ, ಪಕ್ಷಾತೀತ, ಸಂಘಟನಾತೀತವಾದ ನಿಲುವುಗಳನ್ನು ಹೊಂದಿ ಸಂವಿಧಾನದ ಸಮಾನತೆ, ಸಹೋದರತೆ, ಭಾವೈಕ್ಯದ ಆಶಯಗಳನ್ನು ಸಾಕಾರಗೊಳಿಸಿದೆ. ಜನವಿರೋಧಿ ನೀತಿ, ನಿಲುವುಗಳನ್ನು ಖಂಡತುಂಡವಾಗಿ ಧಿಕ್ಕರಿಸುವ ಸಂಪಾದಕೀಯ ಅಪ್ಯಾಯಮಾನವಾದುದು.

–ಹೆಗ್ಗೆರೆ ರಂಗಪ್ಪ, ದ.ಸಂ.ಸ ರಾಜ್ಯ ಸಂಘಟನಾ ಸಂಚಾಲಕ

**

ಮನೆಯ ಸದಸ್ಯ ‘ಪ್ರಜಾವಾಣಿ’
‘ಪ್ರಜಾವಾಣಿ’ ನಮ್ಮ ಮನೆಯ ಅವಿಭಾಜ್ಯ ಸದಸ್ಯ. ಚಿಕ್ಕವನಿದ್ದಾಗ ಫ್ಯಾಂಟಮ್, ಮಾಂಡ್ರೇಕ್ ಮುಂತಾದ ಕಾಮಿಕ್ಸ್ ಮೂಲಕ ನನ್ನ ಗೆಳೆಯನಾಗಿ, ಸೋಮವಾರದಿಂದ ಭಾನುವಾರದವರೆಗೆ ವಿಶೇಷ ಸಂಚಿಕೆಗಳಿಂದ ಸಾಹಿತ್ಯ, ಸಂಸ್ಕೃತಿ, ಕೃಷಿ, ವಿಜ್ಞಾನ ಕುರಿತು ಉಪಯುಕ್ತ ಮಾಹಿತಿ ನೀಡುವ ಭೋದಕನಾಗಿ, ಸಿನಿಮಾ ನಾಟಕ ಮುಂತಾದ ರಂಜನೀಯ ವಿಷಯಗಳು, ಅಂದಿನ ‘ಛೂ ಬಾಣ’ ಅಂಕಣ, ಚಿನಕುರಳಿಯ ಕಚಗುಳಿ, ಪದಬಂಧ, ಸುಡೊಕುಗಳಿಂದ ಬುದ್ಧಿಮತ್ತೆಯನ್ನು ಸಾಣೆ ಹಿಡಿಯುವವನಾಗಿ, ಪ್ರಮುಖವಾಗಿ ಪ್ರತಿದಿನವೂ ಸುದ್ದಿಯನ್ನು ಬಿತ್ತುವ ಬಾತ್ಮಿದಾರನಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಜ್ಯಾತ್ಯತೀತ, ಪಕ್ಷಾತೀತವಾಗಿ ಪ್ರಜಾಪ್ರಭುತ್ವದ ಧ್ಯೇಯಗಳನ್ನು ಪಾಲಿಸುತ್ತಿರುವ ಪ್ರಬುದ್ಧ ಪತ್ರಿಕೆಯಾಗಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಪತ್ರಿಕೆಯೆನಿಸಿರುವ ‘ಪ್ರಜಾವಾಣಿ’ ಇದೇ ಪ್ರಜ್ಞಾವಂತಿಕೆಯೊಂದಿಗೆ ಪ್ರವಹಿಸುತ್ತಿರಲಿ ಎಂದು ಪ್ರೀತಿ ಪೂರ್ವಕವಾಗಿ ಹಾರೈಸುತ್ತೇನೆ.

–ಆರ್‌.ಟಿ. ಅರುಣ್‌ಕುಮಾರ್‌, ಕಲಾವಿದ, ದಾವಣಗೆರೆ

**

ನಿಷ್ಪಕ್ಷಪಾತ ಪತ್ರಿಕೋದ್ಯಮ
ಪ್ರಜಾವಾಣಿ ನಿಷ್ಠುರ ಪತ್ರಿಕೋದ್ಯಮಕ್ಕೆ ಒಂದು ಮಾದರಿ. ವಿಶ್ವಾಸಾರ್ಹ ಸುದ್ದಿಗಳನ್ನು ಪ್ರಸಾರ ಮಾಡಲು ಯಾವ ಮುಲಾಜಿಗೂ ಒಳಗಾಗದೆ ರಾಜಕೀಯ, ಕಲೆ, ಸಾಹಿತ್ಯ, ಚರಿತ್ರೆ, ಕ್ರೀಡೆ ಮತ್ತು ಸಾಮಾಜಿಕ ವಿದ್ಯಮಾನಗಳನ್ನು ಓದುಗರಿಗೆ ಒದಗಿಸುತ್ತದೆ. ಕರೋನಾಕ್ಕಿಂತ ಮೊದಲು ದಿನಾಲು ಬರುತ್ತಿದ್ದ ಪ್ರತ್ಯೇಕ ಪುರವಣಿಗೆಗಳನ್ನು ಓದುವದೇ ಒಂದು ಖುಷಿಯಾಗಿತ್ತು. ನಾನಂತೂ ಸುಮಾರು ಪುರವಣಿಗಳನ್ನು ಸಂಗ್ರಹ ಮಾಡಿರುತ್ತೇನೆ. ಆದರೆ ಕರೋನ ನಂತರ ಪ್ರತ್ಯೇಕ ಪುರವಣಿ ಬರುತ್ತಿಲ್ಲ. ಆದರೂ ಪರವಾಗಿಲ್ಲ. ಜನಪರವಾದ ಬದ್ಧತೆ ಮುಂದುವರಿಯಲಿ ಎಂದು ಆಶಿಸುತ್ತೇನೆ. ಪತ್ರಿಕೆಗೆ ನನ್ನ ಅಭಿನಂದನೆಗಳು.

–ಪಿ.ಹೆಚ್. ಪಾಟೀಲ್, ರಾಣೆಬೆನ್ನೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT