ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: 19 ಸೆಪ್ಟೆಂಬರ್ 2024

Published : 19 ಸೆಪ್ಟೆಂಬರ್ 2024, 0:25 IST
Last Updated : 19 ಸೆಪ್ಟೆಂಬರ್ 2024, 0:25 IST
ಫಾಲೋ ಮಾಡಿ
Comments

‘ಆಡಳಿತ ಸೌಧ’ದ ಮಾಹಿತಿ ಇಲ್ಲವೆ?

ತಾಲ್ಲೂಕುಗಳಲ್ಲಿ ಇನ್ನು ಮುಂದೆ ನಿರ್ಮಿಸುವ ಮಿನಿ ವಿಧಾನಸೌಧಗಳಿಗೆ ಪ್ರಜಾಸೌಧ ಎಂದು ನಾಮಕರಣ ಮಾಡಲು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿರುವುದಾಗಿ ವರದಿಯಾಗಿದೆ. ತಾಲ್ಲೂಕು ಕೇಂದ್ರಗಳಲ್ಲಿನ ಮಿನಿ ವಿಧಾನಸೌಧಗಳ ಹೆಸರನ್ನು ಈ ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ತಾಲ್ಲೂಕು ಆಡಳಿತ ಸೌಧಗಳೆಂದು ಬದಲಿಸಲಾಗಿದೆ. ನಾಮಫಲಕಗಳೂ ಹೀಗೆ ಬದಲಾಗಿವೆ. ಆದಾಗ್ಯೂ, ಇಲ್ಲದಿರುವ ಮಿನಿ ವಿಧಾನಸೌಧಗಳ ಹೆಸರು ಬದಲಾಯಿಸಲು ಸಚಿವ ಸಂಪುಟ ಸಭೆ ನಿರ್ಣಯಿಸಿರುವುದು ಹಾಸ್ಯಾಸ್ಪದ ಅಲ್ಲವೆ? ಈ ವಿಷಯ ಸರ್ಕಾರಿ ಅಧಿಕಾರಿಗಳಿಗೆ ತಿಳಿಯದಿರುವುದು ಬೇಸರದ ಸಂಗತಿ.

– ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ

ಕೆಪಿಎಸ್‌ಸಿ ಪ್ರಮಾದ: ಇನ್ನೆಷ್ಟು ದಿನ?

ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ಇತ್ತೀಚಿನ ದಿನಗಳಲ್ಲಿ ಆದ ಪ್ರಮಾದಗಳು ಅಷ್ಟಿಷ್ಟಲ್ಲ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಆದ ಭಾಷಾಂತರದ ತಪ್ಪುಗಳಿಂದ ಉಂಟಾದ ವ್ಯತಿರಿಕ್ತ ಪರಿಣಾಮದ ಕಹಿಯು ಜನಮಾನಸದಿಂದ ಮಾಸುವ ಮುನ್ನವೇ ಆಯೋಗದ ಕಡೆಯಿಂದ ಇನ್ನೊಂದು ಪ್ರಮಾದ ಜರುಗಿದ್ದು ದುರದೃಷ್ಟಕರ. ಇದೇ 14 ಮತ್ತು 15ರಂದು ನಿಗದಿಯಾಗಿದ್ದ ಗ್ರೂಪ್ ‘ಬಿ’ ಹುದ್ದೆಗಳ ಪರೀಕ್ಷೆಯನ್ನು ಬರೀ 15– 20 ಗಂಟೆಗಳು ಬಾಕಿ ಇರುವಾಗ ಏಕಾಏಕಿ ಪತ್ರಿಕಾ ಪ್ರಕಟಣೆ ನೀಡಿ ಮುಂದೂಡಲಾಯಿತು. ಅಭ್ಯರ್ಥಿ

ಗಳಲ್ಲಿ ಬಹುತೇಕರು ಪರೀಕ್ಷಾ ಕೇಂದ್ರವಿರುವ ಊರಿಗೆ ಹೋಗಲು ರೈಲು ಅಥವಾ ಬಸ್ಸಿನ ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು. ಕೆಲವರು ಪರೀಕ್ಷಾ ಕೇಂದ್ರವಿರುವ ಊರಿಗೆ ಒಂದು ದಿನ ಮುಂಚಿತವಾಗಿಯೇ ಹೋಗಿ ವಸತಿಗೃಹಗಳಲ್ಲಿ ತಂಗಿದ್ದರು. ಆಯೋಗದ ಕೊನೆಯ ಕ್ಷಣದ ನಿರ್ಧಾರದಿಂದ ಅಭ್ಯರ್ಥಿಗಳ ಜೇಬಿಗೆ ಕತ್ತರಿ ಬಿದ್ದಂತಾಯಿತು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಗಳಲ್ಲಿ ಪರೀಕ್ಷಾ ಮುಖ್ಯ ಮೇಲ್ವಿಚಾರಕರ ಹಾಜರಿಯಲ್ಲಿ ನಡೆದ ಪರೀಕ್ಷಾ ಪೂರ್ವಭಾವಿ ಸಭೆಗಳು ವ್ಯರ್ಥವಾಗಿ, ಅಧಿಕಾರಿಗಳ ಅಮೂಲ್ಯ ಸಮಯ ಹಾಳಾಯಿತು. ಪರೀಕ್ಷಾ ಕೇಂದ್ರವಾಗಿ ಗುರುತಿಸಿದ್ದ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ಪೂರ್ವ ತಯಾರಿಗೆಂದು ಬಳಸಿದ್ದ ಮಾನವ ಸಂಪನ್ಮೂಲ ಪೋಲಾಯಿತು, ದೈನಂದಿನ ಪಾಠ- ಪ್ರವಚನಗಳನ್ನು ರದ್ದು ಮಾಡಲಾಗಿತ್ತು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಹ ಅಭ್ಯರ್ಥಿಗಳಲ್ಲಿ ಹೀಗೆ ಗೊಂದಲ ಸೃಷ್ಟಿಸುವುದರಲ್ಲಿ ಕೆಪಿಎಸ್‌ಸಿ ಜೊತೆಗೆ ಪೈಪೋಟಿಗೆ ಇಳಿದಂತೆ ತೋರುತ್ತಿದೆ. ಪ್ರಾಧಿಕಾರವು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಹುದ್ದೆ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯನ್ನು ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ದಿನದಂದೇ ನಿಗದಿ ಮಾಡಿತ್ತು. ನಂತರ ಅಭ್ಯರ್ಥಿಗಳು ಮನವಿ ಮಾಡಿದಾಗ ಪರೀಕ್ಷಾ ದಿನಾಂಕವನ್ನು ಮರು ನಿಗದಿ ಮಾಡಿತಾದರೂ ಬೇರೊಂದು ಮುಖ್ಯ ಪರೀಕ್ಷೆಯ ದಿನದಂದೇ ನಿಗದಿಪಡಿಸಿದ್ದು ವಿಷಾದನೀಯ. ಇದು ಪ್ರಾಧಿಕಾರದ ಅಧಿಕಾರಿಗಳ ದೂರದೃಷ್ಟಿಯ ಕೊರತೆಯನ್ನು ತೋರಿಸುತ್ತದೆ. ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ತಯಾರಾಗುವುದರ ಜೊತೆಗೆ ಕೆಪಿಎಸ್‌ಸಿ ನೀಡುವ ಮಾನಸಿಕ ಪರೀಕ್ಷೆಗೆ ಸಹ ತಯಾರಾಗ

ಬೇಕಾಗಿರುವುದು ಶೋಚನೀಯ. ಇಂತಹ ಜವಾಬ್ದಾರಿಯುತ ಸಂಸ್ಥೆಗಳಿಂದ ಈ ರೀತಿಯ ತಪ್ಪುಗಳು ಪುನರಾವರ್ತನೆ ಆದಲ್ಲಿ ಅಭ್ಯರ್ಥಿಗಳು ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವ ಅ‍ಪಾಯ ಇರುತ್ತದೆ. ಆಳುವವರು ಇನ್ನಾದರೂ ಅಭ್ಯರ್ಥಿಗಳ ಅಳಲನ್ನು ಆಲಿಸಿ, ಯುಪಿಎಸ್‌ಸಿ ಮಾದರಿಯಂತೆ ಒಂದು ವರ್ಷ ಮುಂಚಿತವಾಗಿಯೇ ವೇಳಾಪಟ್ಟಿಯನ್ನು ಪ್ರಕಟಿಸಬೇಕು. ಈ ಮೂಲಕ ಗೊಂದಲರಹಿತವಾಗಿ ಪರೀಕ್ಷೆ ನಡೆಸಬೇಕು.

– ಸಂತೋಷ ಜಿ. ಹೆಗಡೆ, ದಾವಣಗೆರೆ

ಕಲಬುರಗಿಯಲ್ಲಿ ಸಭೆ: ಅನುಕರಣೀಯ ನಡೆ

ತೀರಾ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದಲ್ಲಿ ಆಡಳಿತಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಬಾರಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದು ಅನುಕರಣೀಯ

ವಾದುದು. ಈ ವಿಭಾಗದ ಏಳು ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಇದರಿಂದ ಅನುಕೂಲವಾಗಲಿದೆ. ಇಲ್ಲಿನವರ ಬಹುದಿನಗಳ ಬೇಡಿಕೆಯಾದ ಪ್ರಾದೇಶಿಕವಾರು ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಸರ್ಕಾರ ಒಪ್ಪಿರುವುದು ಸ್ವಾಗತಾರ್ಹ.ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿರುವುದು ಈ ಭಾಗದ ಜನರಲ್ಲಿ ಆಶಾಭಾವನೆ ಮೂಡಿಸಿದೆ.

– ಭೀಮಾಶಂಕರ ದಾದೆಲಿ ಹಳಿಸಗರ, ಶಹಾಪುರ

ಗ್ರಂಥಾಲಯ ಅಭಿವೃದ್ಧಿ: ಗಮನ ಅಗತ್ಯ

‘ಪುಸ್ತಕೋದ್ಯಮಕ್ಕೆ ಕಾಯಕಲ್ಪ’ ಆಗಬೇಕು ಎಂದು ಕೇಶವ ಶರ್ಮ ಕೆ. ಅಭಿಪ್ರಾಯಪಟ್ಟಿದ್ದಾರೆ (ಚರ್ಚೆ, ಸೆ. 17). ನಿಜ, ಪ್ರತಿ ಸಾರಿ ಸರ್ಕಾರವು ಜನರಿಂದ ಗ್ರಂಥಾಲಯ ಕರ ಪಡೆಯುತ್ತದೆ. ನಾಲ್ಕೈದು ವರ್ಷಗಳಿಂದ ಹೀಗೆ ಸಂಗ್ರಹವಾಗಿರುವ ಹಣ ಸುಮಾರು ₹600 ಕೋಟಿಗೂ ಮಿಗಿಲಾಗಿದೆ. ಆದರೆ ಇತ್ತ ಸರ್ಕಾರ ಪುಸ್ತಕಗಳನ್ನು ಕೊಳ್ಳುತ್ತಿಲ್ಲ, ಅತ್ತ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳೂ ಎಟಕುತ್ತಿಲ್ಲ. ಗ್ರಂಥಭಂಡಾರಗಳೆಂದರೆ ಜ್ಞಾನ ಭಂಡಾರಗಳು. ಮ್ಯಾಕ್ಸಿಂ ಗಾರ್ಕಿಯಂಥ ಜಾಗತಿಕ ಕಥೆಗಾರ ತಮ್ಮ ಮನೆ ಮಾಲೀಕ ಕಾರ್ ಶೆಡ್‍ನಲ್ಲಿ ಒಗೆದಿದ್ದ ಪುಸ್ತಗಳನ್ನು ಓದಿ ಜ್ಞಾನಾರ್ಜನೆ ಮಾಡಿದರಂತೆ.

ಸರ್ಕಾರ ವರ್ಷಂಪ್ರತಿ ಪುಸ್ತಕಗಳನ್ನು ಖರೀದಿಸಿದರೆ ಬರೀ ₹30 ಕೋಟಿಯಿಂದ 40 ಕೋಟಿ ಆಗಬಹುದು. ಇದರಿಂದ, ಸಾಲಸೋಲ ಮಾಡಿ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರ ಜೀವನೋಪಾಯಕ್ಕೆ ನೆರವಾಗುತ್ತದೆ. ಶಕ್ತಿ,ಗೃಹಲಕ್ಷ್ಮಿಯಂತಹ ಜನಪರ ಯೋಜನೆಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಗ್ರಂಥಾಲಯವನ್ನೂ ಹೀಗೇ ಅಭಿವೃದ್ಧಿಪಡಿಸಿದರೆ ತೆರಿಗೆ ಹಣ ಸದ್ವಿನಿಯೋಗವಾಗುತ್ತದೆ. ಜ್ಞಾನಾರ್ಜನೆಗೆ ‘ಕೋಶ ಓದು ದೇಶ ಸುತ್ತು’ ಎಂಬ ಗಾದೆ ಮಾತಿದೆ. ಸದ್ಯ ಹೊಸ ಪುಸ್ತಕಗಳೇ ಸಿಗದಿದ್ದರೆ ಓದುವುದಾದರೂ ಹೇಗೆ? ಸರ್ಕಾರ ಈ ದಿಸೆಯಲ್ಲಿ ತುರ್ತಾಗಿ ಗಮನ ಹರಿಸಬೇಕು.

– ಪ್ರೊ. ಶಿವರಾಮಯ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT