ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ 02.3.2023

Last Updated 1 ಮಾರ್ಚ್ 2023, 22:30 IST
ಅಕ್ಷರ ಗಾತ್ರ

ಕುಂದಗನ್ನಡ ಅಕಾಡೆಮಿ: ನಿಲುವು ಬದಲಾಗಲಿ

ಕುಂದಾಪುರ ಕನ್ನಡ ಅಥವಾ ಕುಂದಗನ್ನಡ ಭಾಷಾ ಅಕಾಡೆಮಿಯ ಸ್ಥಾಪನೆಗಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಪರಿಷತ್ತಿನಲ್ಲಿ ಈಚೆಗೆ ಹಕ್ಕೊತ್ತಾಯ ಮಂಡಿಸಿದ್ದು ಸರಿ. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರು, ಪ್ರತ್ಯೇಕ ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪಿಸುವುದು ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದಿರುವುದು ವಿಷಾದನೀಯ. ಕನ್ನಡನಾಡು ಒಂದು ಕನ್ನಡ ಭಾಷೆಯ ನೆಲವಲ್ಲ. ಇದು ಬಹುರೂಪಿ ಕನ್ನಡಗಳ ನೆಲೆ. ಕವಿರಾಜಮಾರ್ಗಕಾರ ಹೇಳಿದಂತೆ ‘ಕನ್ನಡಂಗಳ್’ ತಾಣ. ಭಾಷಾ ಬಹುರೂಪತೆಯೇ ಕನ್ನಡದ ಅಂತಃಚೈತನ್ಯ. ಪ್ರಾದೇಶಿಕ ಹಾಗೂ ಸಮುದಾಯದ ನೆಲೆಯಲ್ಲಿ ಕಾಣಿಸುವ ಭಾಷಾ ಪ್ರಭೇದ ಮತ್ತು ವೈವಿಧ್ಯ ಒಂದು ಭಾಷೆಯ ಜೀವಂತಿಕೆ ಹಾಗೂ ಬೆಳವಣಿಗೆಯ ಲಕ್ಷಣ. ಈ ಬಹುರೂಪಿ ಸಾಂಸ್ಕೃತಿಕ ಚಹರೆಗಳಿಂದ ಸಂಪನ್ನಗೊಂಡ ಒಳಮಾತುಗಳು (ಉಪಭಾಷೆ ಅಲ್ಲ) ಕನ್ನಡದ ಅಭಿವ್ಯಕ್ತಿಯ ಶಕ್ತಿಯನ್ನು ವಿಶಿಷ್ಟವಾಗಿಸುತ್ತವೆ ಮತ್ತು ಹೆಚ್ಚಿಸುತ್ತವೆ. ಆ ಮೂಲಕ ಕನ್ನಡಕ್ಕೆ ಸಾಮರ್ಥ್ಯವನ್ನು, ಸಮಗ್ರತೆಯನ್ನು ಕಟ್ಟಿಕೊಡುತ್ತವೆ. ಇದು ನಮ್ಮ ಕನ್ನಡ ಬೆಳೆಯಬೇಕಾದ ಪರಿ.

ಕನ್ನಡದ ಸಮಗ್ರತೆಯನ್ನು ಕಟ್ಟುವುದೆಂದರೆ ಬಹುರೂಪಿ ಕನ್ನಡಗಳ ಅನನ್ಯತೆಯನ್ನು ಉಳಿಸುವುದು ಮತ್ತು ಬೆಳೆ ಸುವುದು. ಇಂದು ಕನ್ನಡದ ಮುಂದಿರುವ ಆತಂಕವೆಂದರೆ, ಸಾವಿನಂಚಿಗೆ ಸರಿಯುತ್ತಿರುವ ಭಾಷೆಗಳನ್ನು ಅಭಿವೃದ್ಧಿಪಡಿಸುವುದು. ಆ ಮೂಲಕವೇ ಕನ್ನಡಕ್ಕೆ ನಿಜವಾದ ಚೈತನ್ಯವನ್ನು, ಸಮಗ್ರತೆಯನ್ನು ತುಂಬುವುದು. ಹಾಗಾಗಿಯೇ ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪನೆಯೆಂದರೆ ನಿಜವಾದ ಅರ್ಥದಲ್ಲಿ ಕನ್ನಡಕ್ಕೆ ಸಮಗ್ರತೆ, ವಿಸ್ತಾರವನ್ನು ತರುವುದು. ಇನ್ನೊಂದು ಮಗ್ಗುಲಲ್ಲೂ ಕನ್ನಡದ ಸಮಗ್ರತೆಯನ್ನು ಮುಂದಿಟ್ಟು ಆಡುವುದಾದರೆ, ಅರೆಭಾಷೆ ಅಥವಾ ಗೌಡಕನ್ನಡ ಅಕಾಡೆಮಿಯ ಸ್ಥಾಪನೆಯಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಹೊಸ ವಿಸ್ತಾರ ಒದಗಿದೆ.ಪ್ರಸ್ತುತ ಕರ್ನಾಟಕ ಸರ್ಕಾರ ಪ್ರಾದೇಶಿಕ ಭಾಷೆಯಾದ ತುಳುವನ್ನು ಎರಡನೇ ರಾಜ್ಯಭಾಷೆಯನ್ನಾಗಿ ಘೋಷಿಸುವ ಸನ್ನಾಹದಲ್ಲಿ ಇರುವುದನ್ನು ಕನ್ನಡದ ಸಮಗ್ರತೆಗೆ ಧಕ್ಕೆ ಎಂದು ಭಾವಿಸಬಹುದೇ? ಈ ಭಾಷಾಲೋಕದ ವಿಸ್ತಾರದ ಅರಿವು ನಮಗಿರಬೇಕು. ಕುಂದನಾಡಿನ ಜನರ ಬೇಡಿಕೆ ಕುರಿತ ತನ್ನ ನಿಲುವನ್ನು ಸರ್ಕಾರ ಮರುಪರಿಶೀಲಿಸಬೇಕು.

- ಡಾ. ಗಾಯತ್ರಿ ನಾವಡ, ಪ್ರೊ. ಎ.ವಿ.ನಾವಡ, ಮಂಗಳೂರು

****

ತಳಮಟ್ಟದಿಂದಲೂ ಬೆಳಗಲಿ ಸಾಹಿತ್ಯದ ದೀಪ

ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹ 25 ಕೋಟಿ ವೆಚ್ಚವಾಗಿರುವುದಾಗಿ ವರದಿಯಾಗಿದೆ (ಪ್ರ.ವಾ., ಫೆ. 28). ಆರ್ಥಿಕ ಸಂಕಷ್ಟದ ಈ ದಿನಮಾನಗಳಲ್ಲಿ ಇಂತಹ ದುಬಾರಿ ವೆಚ್ಚದಲ್ಲಿ ಸಾಹಿತ್ಯ ಸಮ್ಮೇಳನಗಳ ಆಚರಣೆ ಹಾಗೂ ಅವುಗಳ ಅಗತ್ಯದ ಬಗ್ಗೆ ಸರ್ಕಾರ ಮತ್ತು ಸಮಾಜ ಚಿಂತಿಸಲಿ. ಈ ಹಿಂದೆಲ್ಲಾ ನಡೆಯುತ್ತಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಆಗಿನ ಸರ್ಕಾರಗಳು ಈ ಪ್ರಮಾಣದಲ್ಲಿ ಹಣಕಾಸು ಕೊಡುತ್ತಿರಲಿಲ್ಲ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಹಾಗೂ ದಾನಿಗಳಿಂದ ನೆರವು ಪಡೆದು ಸಮ್ಮೇಳನ ನಡೆಸುತ್ತಿದ್ದ ಕಾಲವಿತ್ತು. ಆಸಕ್ತರು, ಶಾಲಾ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಮ್ಮೇಳನದ ಪ್ರಯೋಜನ ಪಡೆಯು ತ್ತಿದ್ದರು. ಸರ್ಕಾರದಿಂದ ಯಥೇಚ್ಛ ಧನಸಹಾಯದ ಸೌಲಭ್ಯ ಸಿಕ್ಕಿದ ಮೇಲೆ ಸಮ್ಮೇಳನದ ಉದ್ದೇಶ ದಾರಿ ತಪ್ಪಿದಂತಿದೆ. ಹತ್ತು ಕೋಟಿ ರೂಪಾಯಿ ಕೊಟ್ಟಾಗಲೂ ಸಾಲದು, ಇಪ್ಪತ್ತು ಕೋಟಿ ರೂಪಾಯಿ ಕೊಟ್ಟರೂ ಸಾಲದು, ಮುಂದೆ ಮೂವತ್ತು ಕೋಟಿ ರೂಪಾಯಿ ಕೊಟ್ಟಾಗಲೂ ಸಾಲದು ಎನ್ನುವ ಸೊಲ್ಲು ತಪ್ಪುವುದಿಲ್ಲವೇನೊ. ಕೊಟ್ಟದ್ದನ್ನು ಬಳಸಿ, ಅದರಲ್ಲಿ ಇಂತಿಷ್ಟು ಉಳಿದಿದೆ ಎಂದು ಲೆಕ್ಕ ಕೊಟ್ಟ ಉದಾಹರಣೆ ಯಾರ ಕಾಲ ದಲ್ಲಾದರೂ ಇದೆಯೇ?

ಸಾಹಿತ್ಯದ ಜೊತೆಯಲ್ಲಿ ರಾಜಕೀಯ ಉದ್ದೇಶವನ್ನೂ ಇಟ್ಟು ಕೊಂಡು ನಡೆಸುತ್ತಿರುವ ಈ ಸಮ್ಮೇಳನಗಳು ಊಟ, ವಸತಿ, ವಾಣಿಜ್ಯ ವಹಿವಾಟಿನ ದುಂದುಗಾರಿಕೆಗೆ ಒತ್ತು ಕೊಟ್ಟಿವೆ. ವೇದಿಕೆ ಕಾರ್ಯಕ್ರಮಗಳ ಗುಣಮಟ್ಟ ಮತ್ತು ಅವುಗಳ ಉಪಯುಕ್ತತೆಯ ಬಗ್ಗೆ ಮೌಲ್ಯಮಾಪನ ನಡೆಯುತ್ತಿಲ್ಲ. ವೇದಿಕೆ ನಿರ್ಮಾಣ, ಅಲಂಕಾರ, ನಗರ ಸಿಂಗಾರ, ಮೆರವಣಿಗೆಯಂತಹವುಗಳಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುವ ಬದಲು, ಇದೇ ಹಣವನ್ನು ಪರಿಷತ್ತಿನ ಜಿಲ್ಲಾ ಘಟಕಗಳಿಗೆ ಕೊಡುವುದೊಳಿತು. ಆ ಘಟಕಗಳು ಇದರ ಜೊತೆಗೆ ಸ್ಥಳೀಯ ಸಂಪನ್ಮೂಲವನ್ನೂ ಕ್ರೋಡೀಕರಿಸಿ ತಾಲ್ಲೂಕು, ಹೋಬಳಿ ಕೇಂದ್ರಗಳ ಘಟಕಗಳಲ್ಲೂ ಸಾಹಿತ್ಯಿಕ ಕಾರ್ಯಕ್ರಮಗಳು, ಕಥೆ, ಕಾವ್ಯ, ಜನಪದ ಕಲೆಗಳ ಕಮ್ಮಟಗಳು, ಸ್ಪರ್ಧೆಗಳನ್ನು ಏರ್ಪಡಿಸುವ, ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲು ನೆರವಾಗುತ್ತದೆ. ಬೆಟ್ಟ ಅಗೆದು ಇಲಿ ಹಿಡಿಯುವ ಬದಲು, ಕಲೆ, ಸಾಹಿತ್ಯದ ದೀಪ ತಳಮಟ್ಟದಿಂದಲೂ ಬೆಳಗಲಿ.

- ತಾ.ಸಿ.ತಿಮ್ಮಯ್ಯ, ಬೆಂಗಳೂರು

***

ದೊರೆತನಕ ತಲುಪುವಂತಾಗಲಿ ಅಹವಾಲು

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ಕೊಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಮತ್ತು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದಾರೆ. ಆದರೆ, ವರ್ಷಗಟ್ಟಲೆ ಬಾರದೆ ಚುನಾವಣಾ ಪೂರ್ವದಲ್ಲಿ ಭೇಟಿ ನೀಡುತ್ತಿರು ವುದನ್ನು ಪ್ರಜ್ಞಾವಂತರೇಕೆ ಜನಸಾಮಾನ್ಯರೂ ಆಡಿಕೊಳ್ಳುವಂತಾಗಿದೆ. ಸಣ್ಣಪುಟ್ಟ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸುತ್ತಿರುವುದು ಜನರ ಚಿಂತನೆಗೆ ಆಹಾರ ಒದಗಿಸುತ್ತಿದೆ. ಇಂತಹ ಟೀಕೆಗಳಿಗೆ ಆಸ್ಪದ ಕೊಡದಂತೆ ಪ್ರಧಾನಿ ಯವರು ರಾಜ್ಯಕ್ಕೆ ಆಗಾಗ ಭೇಟಿ ಕೊಡುತ್ತಿರಬೇಕು. ಇದರಿಂದ ಜನರಿಗೆ ತಮ್ಮ ಅಹವಾಲುಗಳನ್ನು ದೊರೆತನಕ ತಲುಪಿಸಲು ಅವಕಾಶ ದೊರಕುತ್ತದೆ.

- ರಮಾನಂದ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT