ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | 04-03-2023

Last Updated 3 ಮಾರ್ಚ್ 2023, 22:45 IST
ಅಕ್ಷರ ಗಾತ್ರ

ಪ್ರವಾಸೋದ್ಯಮ: ಕ್ಷಣಭಂಗುರದ ಆಮಿಷ?

ರಾಜ್ಯ ಸರ್ಕಾರ ಕೆಲವೆಡೆ ಆರಂಭಿಸಲು ಯೋಜಿಸಿರುವ ಜಂಗಲ್ ರೆಸಾರ್ಟ್‌ಗಳ ಕಾಮಗಾರಿ ಪ್ರಗತಿಯಲ್ಲಿದೆ. ಜನರ ರಂಜನೆಗಾಗಿ ಈಗಾಗಲೇ ಇರುವ ಜಂಗಲ್ ರೆಸಾರ್ಟ್‌ಗಳಿಂದ ಬಹಳಷ್ಟು ಅರಣ್ಯ ಸಂಪತ್ತು ನಾಶವಾಗಿದೆ. ಹೆಲಿಕಾಪ್ಟರ್, ರೋಪ್ ವೇ, ಕಾಂಕ್ರೀಟ್ ಕಟ್ಟಡಗಳು, ವೃಕ್ಷಸಂಕುಲಗಳ ನಾಶ ಸೇರಿದಂತೆ ಸದಾ ಗಲಭೆಯ ವಾತಾವರಣ ಅಲ್ಲಿ ಸೃಷ್ಟಿಯಾಗಿದೆ. ಅದುವರೆಗೆ ಆ ನಿರ್ದಿಷ್ಟ ಪ್ರದೇಶವನ್ನು ತಮ್ಮ ಗಮ್ಯವನ್ನಾಗಿ ಮಾಡಿಕೊಂಡಿದ್ದ ಪಶುಪಕ್ಷಿಗಳು ಆಹಾರವನ್ನರಸಿ ಕಾಡು ಬಿಟ್ಟು ನಾಡಿಗೆ ಬರಲಾರಂಭಿಸಿವೆ. ಇದರಿಂದ ಕಾಡಂಚಿನ ಹಳ್ಳಿಗಳಲ್ಲಿ ಭಯಭೀತ ವಾತಾವರಣ ಉಂಟಾಗಿದೆ.

ಹೀಗಿರುವಾಗ, ಕ್ಷಣಭಂಗುರ ಆಮಿಷಕ್ಕೊಳಗಾಗಿ ಪ್ರವಾಸೋದ್ಯಮ ಇಲಾಖೆಯು ಪ್ರಕೃತಿಯ ಅಸಮತೋಲನಕ್ಕೆ ಕಾರಣವಾಗುವಂತೆ ಹೊಸ ಹೊಸ ರೆಸಾರ್ಟ್‌ಗಳಿಗೆ ಅನುಮತಿ ಕೊಡುತ್ತಿರುವುದು ಖಂಡನೀಯ. ಬದಲಾಗಿ ಸಣ್ಣ ಪುಟ್ಟ, ಎಲೆ ಮರೆಯ ಕಾಯಿ ಮಾದರಿಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದು ಒಳಿತು. ನಮ್ಮ ತಾಲ್ಲೂಕನ್ನೇ ಉದಾಹರಿಸುವುದಾದರೆ, ಬಾಗಳಿ, ಬೆಟ್ಟದ ಮಲ್ಲೇಶ್ವರ, ಉಚ್ಚಂಗಿದುರ್ಗ, ನೀಲಗುಂದ, ಚಿಗಟೇರಿಯಂತಹ ಅನೇಕ ಪ್ರವಾಸಿ ತಾಣಗಳು ಇಂದಿಗೂ ಮೂಲ ಸೌಕರ್ಯಗಳ ಅಲಭ್ಯತೆಯಿಂದ ಬಳಲಿವೆ. ಇಲಾಖೆ ಇಂತಹ ಸ್ಥಳಗಳ ಅಭಿವೃದ್ಧಿಯ ಕಡೆ ಗಮನಹರಿಸಲಿ.

- ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ

***

ಭ್ರಷ್ಟಾಚಾರ: ಕಾಂಗ್ರೆಸ್‌ ಮೀರಿಸುತ್ತಿದೆ ಬಿಜೆಪಿ!

ಚನ್ನಗಿರಿಯ ಬಿಜೆಪಿ ಶಾಸಕರ ‘ಸುಪುತ್ರ ಮಹಾಶಯ’ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ತಲೆ ತಗ್ಗಿಸುವಂಥ ಘಟನೆ ವರದಿಯಾಗಿದೆ (ಪ್ರ.ವಾ., ಮಾರ್ಚ್ 3). ಅದರಲ್ಲೂ ಒಂದು ಸರ್ಕಾರಿ ಇಲಾಖೆಯಲ್ಲಿ ಒಳ್ಳೆಯ ಹುದ್ದೆಯಲ್ಲೇ ಇರುವ ಈ ವ್ಯಕ್ತಿ, ಇನ್ನೊಂದು ಖಾಸಗಿ ಕಚೇರಿ ತೆರೆದುಕೊಂಡು ಅದನ್ನು ವಸೂಲಿ ಕೇಂದ್ರವಾಗಿ ಇಟ್ಟುಕೊಂಡಿದ್ದರು ಎನ್ನುವುದು ನಮ್ಮ ರಾಜಕೀಯ ವ್ಯವಸ್ಥೆ ಮತ್ತು ಚುನಾಯಿತ ಪ್ರತಿನಿಧಿಗಳು, ಅವರ ಪರಿವಾರದವರು ಯಾವ ಮಟ್ಟಕ್ಕೆ ಹೋಗಿದ್ದಾರೆ ಎನ್ನುವುದನ್ನು ಹೇಳುತ್ತದೆ.

ಕಾಂಗ್ರೆಸ್ಸಿನ ಭ್ರಷ್ಟಾಚಾರ, ಗೂಂಡಾಗಿರಿ, ಕರ್ಮಕಾಂಡದಿಂದ ರೋಸಿಹೋಗಿದ್ದ ಜನ ಕಾಲಕ್ರಮೇಣ ಬಿಜೆಪಿ ಬಗ್ಗೆ ಒಲವು ಬೆಳೆಸಿಕೊಂಡರು. ಹಾಗೆಯೇ, ವಾಜಪೇಯಿ- ಅಡ್ವಾಣಿಯವರ ಕಾಲದಲ್ಲಿ ಬಿಜೆಪಿ ‘ಉಳಿದ ಪಕ್ಷಗಳಿಗಿಂತ ಭಿನ್ನವಾಗಿರುವ ಪಕ್ಷ’ ಎನ್ನುವ ಸದಭಿಪ್ರಾಯವನ್ನು ಸಂಪಾದಿಸಿತ್ತು. ಆದರೆ, ಅಧಿಕಾರ ರಾಜಕಾರಣ ಎಂಥವರನ್ನೂ ಹಾಳು ಮಾಡುತ್ತದೆ ಎನ್ನುವುದಕ್ಕೆ ಕರ್ನಾಟಕದ ಇಂದಿನ ಬಿಜೆಪಿಯೇ ನಿದರ್ಶನ. ಏಕೆಂದರೆ, ಇಂದು ಅಲ್ಲಿರುವ ಅನೇಕರಿಗೆ ತತ್ವ, ಸಿದ್ಧಾಂತಗಳೇನೂ ಇಲ್ಲ. ಅಲ್ಲೂ ಬರೀ ‘ಸೂಟ್‌ಕೇಸ್‌’ಗಳದೇ ಕಾರುಬಾರು! ಹೀಗಿರುವಾಗ, ಕಾಂಗ್ರೆಸ್ಸಿನ ವಿರುದ್ಧದ ಈ ಪಕ್ಷದ ‘ಶೇ 10 ಕಮಿಷನ್‌’ ಆರೋಪಕ್ಕೆ ಯಾವ ನೈತಿಕತೆ ಇದೆ? ಜತೆಗೆ ಯಾವ ಆರೋಪ ಬಂದಾಗಲೂ ‘ಅವರು ಅಧಿಕಾರದಲ್ಲಿದ್ದಾಗ ಹೀಗೆ ಮಾಡಿಲ್ಲವೇ?’ ಎನ್ನುವ ಸಿದ್ಧ ಉತ್ತರ ಕೊಡುವ ದುರವಸ್ಥೆಗೆ ಬಿಜೆಪಿ ಬಂದಿರುವುದು ಅದರ ಪತನದ ಲಕ್ಷಣವಾಗಿದೆ. ಒಟ್ಟಿನಲ್ಲಿ, ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿಯು ಈಗ ಕಾಂಗ್ರೆಸ್ಸನ್ನೇ ಹಿಂದಿಕ್ಕಿದೆ. ಆ ಪಕ್ಷಕ್ಕೆ ನಿಜವಾಗಿಯೂ ಅಂತಃಸತ್ವವಿದ್ದರೆ ಒಂದು ಶುದ್ಧೀಕರಣ ಯಜ್ಞವನ್ನೇ ಹಮ್ಮಿಕೊಂಡು, ತನ್ನ ಒಳಗೇ ಇರುವ ಭ್ರಷ್ಟರನ್ನು ಆಚೆಗೆ ಹಾಕಬೇಕು. ಇಲ್ಲದಿದ್ದರೆ, ಕಾಂಗ್ರೆಸ್ಸಿಗೆ ನೂರು ವರ್ಷಗಳಾದ ಮೇಲೆ ಬಂದ ದುರ್ಗತಿ ಬಿಜೆಪಿಗೆ ಇನ್ನು ಕೆಲವೇ ವರ್ಷಗಳಲ್ಲಿ ಬರುವುದರಲ್ಲಿ ಅನುಮಾನವಿಲ್ಲ.

- ಬಿ.ಎಸ್.ಜಯಪ್ರಕಾಶ ನಾರಾಯಣ, ಬೆಂಗಳೂರು

***

ವಿದ್ಯುತ್ ಅವಘಡ: ಗಂಭೀರವಾಗಿ ಪರಿಗಣಿಸಿ

ಹೊಲ–ಗದ್ದೆ, ಅಡಿಕೆ ಹಾಗೂ ಇನ್ನಿತರ ತೋಟಗಳಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಕೆಲವು ರೈತರು ಇತ್ತೀಚೆಗೆ ಸಾವನ್ನಪ್ಪಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಇಂತಹ ಅವಘಡಗಳಿಗೆ ವಿದ್ಯುತ್ ಇಲಾಖೆ ನೇರ ಹೊಣೆಯಾಗಬೇಕಾಗುತ್ತದೆ. ಏಕೆಂದರೆ, ವಿದ್ಯುತ್ ಮಾರ್ಗ ಹಾದು ಹೋಗಿರುವ ಕೆಲವು ಸೂಕ್ಷ್ಮಪ್ರದೇಶಗಳಲ್ಲಿ ಸುರಕ್ಷಿತ ವಿಧಾನ ಅನುಸರಿಸಿಲ್ಲ. ತಾಂತ್ರಿಕತೆ ಮುಂದುವರಿದಿರುವ ಈ ಕಾಲದಲ್ಲಿ ಅದೇನೂ ದೊಡ್ಡ ಕೆಲಸವೇನಲ್ಲ.

ತೋಟಗಳಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ನಿರೋಧಕ ತಂತಿಗಳನ್ನು ಅಥವಾ ತಂತಿಗೆ ಪ್ಲಾಸ್ಟಿಕ್ ಪೈಪ್ ಅನ್ನು ಅಳವಡಿಸಬೇಕು. ಹಾಗಾದರೆ ಮಾತ್ರ ವಿದ್ಯುತ್ ಅವಘಡಗಳಿಂದ ಆಗುವ ಅನಾಹುತಗಳನ್ನು ತಪ್ಪಿಸಬಹುದು.

- ಭಾಸ್ಕರ್ ಶೆಟ್ಟಿ, ಹಾಸನ

***

ಪ್ರತಿಮೆ ಅನಾವರಣ: ಗೌರವ ಮರೆತ ನಡೆ

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಯನ್ನು ಮುಖ್ಯಮಂತ್ರಿ ಇತ್ತೀಚೆಗೆ ಅನಾವರಣ ಮಾಡಿದ್ದಾರೆ. ಆದರೆ, ಇದೊಂದು ಸರ್ಕಾರಿ ಕಾರ್ಯಕ್ರಮ ಎನ್ನುವುದನ್ನು ಮರೆತು ಈ ವಿಷಯವನ್ನು ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಪ್ರತಿಷ್ಠೆಗಾಗಿ ರಾಜಕಾರಣಕ್ಕೆ ಬಳಸುತ್ತಿರುವುದು ಛತ್ರಪತಿ ಶಿವಾಜಿಯನ್ನು ಅವಮಾನಿಸಿದಂತೆ ಆಗುವುದಿಲ್ಲವೇ?

ಅನಾವರಣಗೊಂಡಿರುವ ಈ ಪ್ರತಿಮೆಯನ್ನು ಮತ್ತೊಮ್ಮೆ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡೆ ಶೋಭೆ ತರುವಂತಹದ್ದಲ್ಲ. ಸರ್ಕಾರಿ ಕಾರ್ಯಕ್ರಮ ಅಂದಮೇಲೆ ಪಕ್ಷಭೇದ ಮರೆತು ಪಾಲ್ಗೊಳ್ಳಬೇಕಾದುದು ಎಲ್ಲ ಪಕ್ಷಗಳ ಶಾಸಕರು, ಸಂಸದರ ಕರ್ತವ್ಯ. ಆದರೆ ಅದನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸುವುದು ಒಳ್ಳೆಯ ನಡೆ ಅಲ್ಲ. ಯಾವುದೇ ರಾಷ್ಟ್ರ ನಾಯಕರ ಪ್ರತಿಮೆಯ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಸರ ಮೂಡಿಸುವಂತಹುದು. ಜನರ ಏಳಿಗೆಗಾಗಿ ದುಡಿಯಬೇಕಾದ ನಮ್ಮ ರಾಜಕಾರಣಿಗಳು ಪ್ರತಿಮೆ ಅನಾವರಣದ ವಿಷಯದಲ್ಲಿ ತಮ್ಮ ಘನತೆ, ಗೌರವವನ್ನು ಮರೆತು ಈ ರೀತಿ ವರ್ತಿಸುವುದುಸರಿಯಲ್ಲ.

- ಭೀಮಾಶಂಕರ ದಾದೆಲಿ ಹಳಿಸಗರ, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT