ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಾಚಕರ ವಾಣಿ : ಮಾರ್ಚ್ 01, 2023

Last Updated 28 ಫೆಬ್ರವರಿ 2023, 22:30 IST
ಅಕ್ಷರ ಗಾತ್ರ

ಸೈನಿಕರ ಸೇವೆ: ಅರಿವು ಮೂಡಲಿ

ಬೆಂಗಳೂರಿನಲ್ಲಿ ವಾಹನದಲ್ಲಿ ಫಾಸ್ಟ್‌ಫುಡ್ ಮಾರುವ ರವಿಕುಮಾರ್ ಎಂಬುವರು, ಸಾಮಾಜಿಕ ಕಳಕಳಿಯಿಂದ ಯೋಧರಿಗೆ ದಿನದಲ್ಲಿ ಎರಡು ಹೊತ್ತು ಉಚಿತವಾಗಿ ತಿಂಡಿ, ಊಟ ನೀಡುತ್ತಿರುವುದು (ಪ್ರ.ವಾ., ಫೆ. 25) ಮಾದರಿ ನಡೆಯಾಗಿದೆ. ಇದು, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ.

ದೇಶ ಕಾಯುವ ಸೈನಿಕರಿಂದ ನಮಗೆ ನೆಮ್ಮದಿಯ ಬದುಕು ಸಾಧ್ಯವಾಗಿದೆ ಎಂಬ ಅರಿವು ಬಹಳ ಜನರಿಗೆ ಇಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸೈನಿಕರು ದೇಶಕ್ಕೆ ಸಲ್ಲಿಸುವ ಸೇವೆ, ಅವರ ಒಂಟಿತನ, ಅವರ ಕಷ್ಟ-ಕಾರ್ಪಣ್ಯ, ಧೈರ್ಯಸಾಹಸವನ್ನು ಬಿಂಬಿಸುವ ಸಂಗತಿಗಳು ಶಾಲಾ ಕಾಲೇಜು ಪಠ್ಯಗಳಲ್ಲಿ ಅಳವಡಿಕೆಯಾಗಿಲ್ಲ. ಅಲ್ಲದೆ ಮಾಧ್ಯಮಗಳಲ್ಲಿ ಸೈನಿಕರ ಸೇವೆಗೆ ಸಿಗಬೇಕಾದ ಪ್ರಮಾಣದಲ್ಲಿ ಮನ್ನಣೆ ಸಿಗುತ್ತಿಲ್ಲ. ಈ ದಿಸೆಯಲ್ಲಿ ಸೈನಿಕರ ಸೇವೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ನಡೆಯುವಂತಾಗಲಿ.

- ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

***

ಇಂಥ ಹೇಳಿಕೆ ತರವೇ?

‘ಅಪ್ಪಿತಪ್ಪಿಯೂ ಸಾಬ್ರಿಗೆ ವೋಟ್ ಹಾಕಬೇಡಿ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯಪುರದಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಹೇಳಿರುವುದು (ಪ್ರ.ವಾ., ಫೆ. 28) ಒಂದು ದೊಡ್ಡ ಸಮುದಾಯವನ್ನೇ ಹೀಗಳೆದಂತಲ್ಲವೇ? ಅಲ್ಲದೆ ಈ ರೀತಿ ಹೇಳುವುದು ನ್ಯಾಯಬಾಹಿರವಲ್ಲವೇ? ಆ ಸಮುದಾಯವು ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುವುದಿಲ್ಲವೇ? ಕೋಮು ಸಾಮರಸ್ಯಕ್ಕೆ ಇದರಿಂದ ಧಕ್ಕೆಯಾಗುವುದಿಲ್ಲವೇ? ಜನನಾಯಕರು ಸಾಧಕ, ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ಹೇಳಿಕೆಗಳನ್ನು ನೀಡುವುದು ಒಳಿತು.

- ಬಾಲಕೃಷ್ಣ ಎಂ.ಆರ್., ಬೆಂಗಳೂರು

***

ಪೌಷ್ಟಿಕ ಆಹಾರ: ರೈತರಲ್ಲಿ ಮೂಡಲಿ ಜಾಗೃತಿ

ರೈತರು ತಾವು ಬೆಳೆಯುವ ತರಕಾರಿ, ಹಣ್ಣುಗಳನ್ನು ತಾವು ತಿನ್ನದೆ ದುಡ್ಡಿನಾಸೆಗೆ ಎಲ್ಲವನ್ನೂ ಮಾರಿಕೊಂಡು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಅವರು ಉತ್ಪಾದಿಸುವ ಪೌಷ್ಟಿಕವಾದ ಹಾಲು, ಮೊಸರು, ಬೆಣ್ಣೆ, ತುಪ್ಪವನ್ನು ಸ್ವಯಂ ಬಳಸುತ್ತಿಲ್ಲದಿರುವುದು ವಿಪರ್ಯಾಸವಾದರೂ ಕಟು ಸತ್ಯ. ಬೆಂಗಳೂರಿನ ಸೆರಗಿನಲ್ಲಿರುವ ಕಡಬಗೆರೆಯಲ್ಲಿ ಇತ್ತೀಚೆಗೆ ಸಂಬಂಧಿಕರ ಮನೆಗೆ ಹೋಗಿದ್ದಾಗ, ಅತಿಥಿಗಳು ಬಂದರೆಂದು ಹಾಲನ್ನು ಬೇಕರಿಯಿಂದ ಕೊಂಡು ತಂದರು. ಅವರ ಮನೆಯಲ್ಲಿ ಹಸುಗಳಿವೆ. ಅವುಗಳು ನೀಡುವ ಅಷ್ಟೂ ಹಾಲನ್ನು ಮಾರಾಟ ಮಾಡುತ್ತಿರುವುದನ್ನು ತಿಳಿದು ಆಶ್ಚರ್ಯವಾಯಿತು. ನಾನು ಓದುತ್ತಿದ್ದಾಗ ಮನೆಯ ಮುಂದೆ ಚಕ್ಕಡಿ ನಿಲ್ಲುತ್ತಿದ್ದ ಸ್ಥಳದಲ್ಲಿ ಬೆಲೆಬಾಳುವ ಕಾರುಗಳು ವಿರಾಜಮಾನವಾಗಿವೆ. ರೈತರಾಗಿದ್ದವರು ಇಂದು ರಿಯಲ್ ಎಸ್ಟೇಟ್ ವ್ಯವಹಾರಕ್ಕಿಳಿದಿದ್ದಾರೆ. ಯಾವುದೇ ಹಳ್ಳಿ ಪಟ್ಟಣಗಳಿಗೆ ಹೋದರೂ ಪಾನಿಪುರಿ, ಮಂಚೂರಿಯ ವ್ಯಾಪಾರ ಭರಾಟೆಯಿಂದ ಸಾಗುತ್ತಿರುತ್ತದೆ. ಆಹಾರದ ಬಗೆಗೆ ಹಳ್ಳಿಗರಿಗೆ ಇಂದು ಜಾಗೃತಿಯನ್ನು ಮೂಡಿಸಬೇಕಿದೆ. ರೈತರು ಗುಣಮಟ್ಟದ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಲಿ.

- ಡಾ. ರುದ್ರೇಶ್ ಅದರಂಗಿ, ಬೆಂಗಳೂರು

***

ಯಾಕೆ ಈ ದುಂದುವೆಚ್ಚ?

ಧಾರವಾಡದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿಯ ವ್ಯವಸ್ಥೆ ಶುಚಿಯಾಗಿತ್ತು ಹಾಗೂ ಅಡುಗೆಯು ರುಚಿಕಟ್ಟಾಗಿತ್ತು. ಆ ಸಮ್ಮೇಳನಕ್ಕೆ ಮಾಡಲಾದ ಖರ್ಚು ₹ 10 ಕೋಟಿ. ಈ ಬಾರಿ ಹಾವೇರಿಯಲ್ಲಿ ನಡೆದ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಭೇಟಿ ನೀಡಿದ್ದೆ. ಅಲ್ಲಿಯ ಆಹಾರ ಪದಾರ್ಥ ಹಾಗೂ ಆಹಾರ ಸೇವಿಸುವ ಸ್ಥಳ ಅವ್ಯವಸ್ಥೆಯಿಂದ ಕೂಡಿತ್ತು. ಖಾಲಿ ಜಾಗದ ಸುತ್ತಲೂ ತಗಡು ಜೋಡಿಸಿ ಮೂತ್ರ ವಿಸರ್ಜನೆಗೆ ಅವಕಾಶ ಮಾಡಲಾಗಿತ್ತು. ಮೊಬೈಲ್ ಶೌಚಾಲಯ ಇದ್ದರೂ ಸೌಕರ್ಯಗಳಿರಲಿಲ್ಲ. ಆದರೂ ಈ ಬಾರಿಯ ಸಮ್ಮೇಳನಕ್ಕೆ ಸರ್ಕಾರದಿಂದ ಮಂಜೂರಾಗಿದ್ದ ₹ 20 ಕೋಟಿಗಿಂತ ಇನ್ನೂ ₹ 5 ಕೋಟಿ ಹೆಚ್ಚುವರಿ ಹಣ ಖರ್ಚಾಗಿದೆ ಎನ್ನಲಾಗಿದೆ (ಪ್ರ.ವಾ., ಫೆ. 28). ನಮ್ಮ ಸ್ವಂತ ಮನೆಯ ಸಮಾರಂಭಕ್ಕೆ ಗುತ್ತಿಗೆ ನೀಡುವಾಗ ಹತ್ತಾರು ಕಡೆ ವಿಚಾರಿಸಿ, ಯೋಗ್ಯ ದರದಲ್ಲಿ ಸಿಗುವ ಗುತ್ತಿಗೆದಾರನನ್ನು ಗೊತ್ತುಮಾಡುತ್ತೇವೆ. ಆದರೆ ಇಲ್ಲೇಕೆ ಈ ರೀತಿ ದುಂದುವೆಚ್ಚ? ಸಾರ್ವಜನಿಕರ ದುಡ್ಡು ಎಂದೋ? ಅಥವಾ ಕೇಳಲು ಯಾರೂ ಇಲ್ಲವೆಂದೋ?

- ಪ್ರಭು ಬ. ನೀಲಿ, ಗುಲಗಾಲ ಜಂಬಗಿ, ಮುಧೋಳ

***

ವರದಿಗಳಲ್ಲಿ ಕಾಣೆಯಾಗುತ್ತಿದೆ ‘ಹಿಂದುಳಿದ ಜಿಲ್ಲೆ’

ಪ್ರತಿವರ್ಷ ಬಜೆಟ್‌ ಮಂಡಿಸುವ ಮುನ್ನಾದಿನ ‘ಕರ್ನಾಟಕ ಆರ್ಥಿಕ ಸಮೀಕ್ಷೆ’ ವರದಿಯನ್ನು ಪ್ರಕಟಿಸುವುದು ರೂಢಿಯಲ್ಲಿದೆ. ಈ ವರದಿಗಳಲ್ಲಿ ಪ್ರಾದೇಶಿಕ ಅಸಮಾನತೆಯ ಬಗ್ಗೆ ಒಂದು ಅಧ್ಯಾಯದಲ್ಲಿ ಚರ್ಚೆ ಮಾಡಲಾಗುತ್ತಿತ್ತು. ಇದನ್ನು ಕೈಬಿಟ್ಟು 2021-22ರ ವರದಿಯಲ್ಲಿ ‘ಅಭಿವೃದ್ಧಿ ಅಂತರ ತುಂಬುವುದು’ ಎಂಬ ಪರಿಭಾಷೆಯ ಅಧ್ಯಾಯದಲ್ಲಿ ರಾಜ್ಯದ ಹಿಂದುಳಿದ ಜಿಲ್ಲೆ, ತಾಲ್ಲೂಕುಗಳ ಪ್ರಗತಿ- ವಿಗತಿಯ ವಿಶ್ಲೇಷಣೆ ಮಾಡಲಾಗಿದೆ. ಈಗ 2022-23ರ ವರದಿಯಲ್ಲಿ ಅಭಿವೃದ್ಧಿ ಅಂತರದ ಬಗ್ಗೆಯಾಗಲೀ, ಪ್ರಾದೇಶಿಕ ಅಸಮಾನತೆ ಬಗ್ಗೆಯಾಗಲೀ ಅಥವಾ ವಿಶೇಷ ಅಭಿವೃದ್ಧಿ ಯೋಜನೆ ಬಗ್ಗೆಯಾಗಲೀ ಚರ್ಚೆಯೇ ಇಲ್ಲ. ಇದಕ್ಕೆ ಸಂಬಂಧಿಸಿದ ಅಧ್ಯಾಯವನ್ನು ಕೈಬಿಡಲಾಗಿದೆ.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆಯಾಗಿದೆ ಎಂದು ನಾವು ಭಾವಿಸಬೇಕೆ? ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21ರ ವರದಿ ಮತ್ತು ನೀತಿ ಆಯೋಗ ಪ್ರಕಟಿಸಿರುವ ‘ಬಹುಮುಖಿ ಬಡತನ’ ವರದಿಯು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ತೀವ್ರ ಉಲ್ಬಣಿಸಿರುವ ಅಪೌಷ್ಟಿಕತೆ ಮತ್ತು ಬಹುಮುಖಿ ಬಡತನದ ಬಗ್ಗೆ ಬೆಳಕು ಚೆಲ್ಲುತ್ತವೆ. ಈಗ ಸರ್ಕಾರವು ಹಿಂದುಳಿದ ಜಿಲ್ಲೆ, ತಾಲ್ಲೂಕು ಎಂಬ ನುಡಿಗೆ ಬದಲಾಗಿ ‘ಆಕಾಂಕ್ಷಿ ಜಿಲ್ಲೆ- ತಾಲ್ಲೂಕು’ (ಆ್ಯಸ್ಪಿರೇಷನಲ್) ಎಂಬ ನುಡಿಯನ್ನು ಬಳಸುತ್ತಿದೆ. ಕರ್ನಾಟಕ ಮಾನವ ಅಭಿವೃದ್ಧಿ ವರದಿಗಳಲ್ಲಿಯೂ ಪ್ರಾದೇಶಿಕ ಅಸಮಾನತೆ ಬಗ್ಗೆ ಒಂದು ಅಧ್ಯಾಯವಿರುತ್ತಿತ್ತು. ಈಗ ಅದೂ ಕಾಣೆಯಾಗುತ್ತಿದೆ. ಅಭಿವೃದ್ಧಿ
ಯಲ್ಲಿ ಹಿಂದುಳಿದ ಜಿಲ್ಲೆಗಳು ಈಗ ಸರ್ಕಾರದ ವರದಿಗಳಲ್ಲಿಯೇ ಕಾಣೆಯಾಗುತ್ತಿವೆ. ಇದು ಅಪೇಕ್ಷಣಿಯ ಬೆಳವಣಿಗೆಯಲ್ಲ. ಇದಕ್ಕೆ ಸರ್ಕಾರ ಉತ್ತರ ನೀಡುವ ಸೌಜನ್ಯವನ್ನು ತೋರುತ್ತದೆ ಎಂದು ನಾವು ಭಾವಿಸುತ್ತೇವೆ.

- ಟಿ.ಆರ್.ಚಂದ್ರಶೇಖರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT