ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 16 ಅಕ್ಟೋಬರ್ 2023, 19:16 IST
Last Updated 16 ಅಕ್ಟೋಬರ್ 2023, 19:16 IST
ಅಕ್ಷರ ಗಾತ್ರ

ಸರ್ವರ್‌ ಕಿರಿಕಿರಿ: ಮಾರ್ಗೋಪಾಯ ಹುಡುಕಿ

ಪಡಿತರ ಚೀಟಿಯಲ್ಲಿ ಫಲಾನುಭವಿಗಳ ವಿವರಗಳ ತಿದ್ದುಪಡಿ, ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆ ಹಾಗೂ ಪಡಿತರ ವಿತರಣಾ ಕೇಂದ್ರ ಬದಲಾವಣೆ ಮಾಡಲು ರಾಜ್ಯ ಆಹಾರ ಇಲಾಖೆ ಇತ್ತೀಚೆಗೆ ಎರಡನೇ ಬಾರಿಗೆ ಬೆಂಗಳೂರು, ಕಲಬುರಗಿ ಹಾಗೂ ಬೆಳಗಾವಿ ವಲಯಗಳಿಗೆ ಪ್ರತ್ಯೇಕ ದಿನಾಂಕವನ್ನು ನಿಗದಿಗೊಳಿಸಿತ್ತು. ಆರಂಭದಿಂದ ನಿಗದಿತ ದಿನಾಂಕ ಮುಗಿಯುವವರೆಗೂ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಗ್ರಾಮ ಒನ್ ಕೇಂದ್ರಗಳ ಮುಂದೆ ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತರೂ ಸರ್ವರ್‌ ಸಮಸ್ಯೆಯಿಂದ ಉದ್ದೇಶ ಈಡೇರಲಿಲ್ಲ. ಇದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ನಾಗರಿಕರು ತೀವ್ರ ತೊಂದರೆ ಅನುಭವಿಸಿದರು.

ಆರಂಭದಲ್ಲಿ ಬೆಂಗಳೂರು ವಲಯದಲ್ಲಿ ಮಾತ್ರ ಸರ್ವರ್ ತೊಡಕು ಉಂಟುಮಾಡಿರಲಿಲ್ಲ ಎಂಬುದು ಗಮನಾರ್ಹ. ಕೂಲಿನಾಲಿ ಮಾಡಿ ಹೊಟ್ಟೆ ತುಂಬಿಕೊಳ್ಳುವ ಬಡ ಕಾರ್ಮಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಈ ಕೇಂದ್ರಗಳಿಗೆ ಎಡತಾಕಿದರೂ ಫಲ ಇಲ್ಲದಂತಾಗಿದೆ. ಇದರಿಂದ ಅವರು ರೋಸಿ ಹೋಗಿದ್ದಾರೆ. ಎಲ್ಲರಿಗೂ ತಲೆನೋವಾಗಿ ಪರಿಣಮಿಸಿರುವ ಸರ್ವರ್ ಕಿರಿಕಿರಿ ನಿವಾರಣೆಗೆ ಅಧಿಕಾರಿಗಳು ಸೂಕ್ತ ಮಾರ್ಗೋಪಾಯಗಳನ್ನು ಶೋಧಿಸಬೇಕು.

⇒ಜಯವೀರ ಎ.ಕೆ., ಖೇಮಲಾಪುರ, ರಾಯಬಾಗ

ತಿರುಗುಬಾಣವಾದ ಪಕ್ಷಾಂತರ

ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ‘ಆಪರೇಷನ್‌ ಹಸ್ತ’ವು ಬಿಜೆಪಿ ನಾಯಕರಿಗೆ ತಲೆನೋವು ತಂದೊಡ್ಡಿದೆ ಎಂಬ ವರದಿಯು (ಪ್ರ.ವಾ., ಅ. 16) ಕಟುವಾಸ್ತವದಿಂದ ಕೂಡಿದೆ. ಇದಕ್ಕೆ ಕಾರಣ ಹಲವು. ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಅವರಂಥ ಪ್ರಭಾವಿ ಸ್ಥಳೀಯ ಮುಖಂಡರನ್ನು ಮೂಲೆಗುಂಪು ಮಾಡಿ, ಎಲ್ಲಾ ರಾಜಕೀಯ ತೀರ್ಮಾನಗಳನ್ನು ದೆಹಲಿಯಿಂದಲೇ ತೆಗೆದುಕೊಳ್ಳಲು ಪ್ರಾರಂಭಿಸಿದ್ದು, ಸ್ಥಳೀಯ ಮುಖಂಡರ ಬೆನ್ನುಮೂಳೆ ಮುರಿಯಲೋ ಮತ್ತ್ಯಾವುದೋ ಕಾರಣಕ್ಕೆ, ವಿಧಾನಸಭಾ ಚುನಾವಣೆ ನಡೆದು ತಿಂಗಳುಗಳು ಕಳೆದರೂ ವಿರೋಧಪಕ್ಷದ ನಾಯಕನನ್ನು ನೇಮಿಸದೇ ಇರುವುದು ಬಿಜೆಪಿಯ ರಾಜ್ಯ ಘಟಕದಲ್ಲಿ ಅನಾಯಕತ್ವದ ಗೊಂದಲಕ್ಕೆ ಕಾರಣವಾಗಿದೆ. 

ಕೇಂದ್ರದಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಪಕ್ಷಾಂತರ ನಿಷೇಧ ಕಾನೂನಿಗೆ ಬಲ ತುಂಬಬೇಕಿತ್ತು. ಪಕ್ಷಾಂತರಿಗಳು ಕನಿಷ್ಠ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅವ ಕಾಶವಿಲ್ಲದಂತೆ ನಿಯಮ ರೂಪಿಸಬೇಕಿತ್ತು. ಆದರೆ ಏನೇನೋ ತಂತ್ರಗಾರಿಕೆ ಬಳಸಿ ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಇತರ ಪಕ್ಷಗಳಿಂದ ಮುಖಂಡರನ್ನು ಕರೆತಂದು ಸರ್ಕಾರ ರಚಿಸಲು ಮುಂದಾಯಿತೇ ವಿನಾ ತನಗೊಂದು ದಿನ ಇದು ತಿರುಗುಬಾಣ ಆಗಬಹುದು ಎಂದು ಯೋಚಿಸಲಿಲ್ಲ. ಜೊತೆಗೆ, ಬಿಜೆಪಿಯಲ್ಲಿ ಸಂಘಪರಿವಾರದ ಹೆಸರಿನಲ್ಲಿ ತೆರೆಮರೆಯ ರಾಜಕೀಯ ಮಾಡುವವರ ಬಲ ಹೆಚ್ಚುತ್ತಾ ಹೋದುದು ಕೆಲವು ಶಾಸಕರು, ಮಾಜಿ ಶಾಸಕರಿಗೆ ಪಕ್ಷದ ಮೇಲಿನ ವಿಶ್ವಾಸ ಕುಂದಲು ಕಾರಣವಾಯಿತು ಎಂಬ ಮಾತು ಕೇಳಿಬರುತ್ತದೆ. ಜಗದೀಶ ಶೆಟ್ಟರ್ ಅವರಂತಹ ನಿಷ್ಠಾವಂತ ಕಾರ್ಯಕರ್ತರನ್ನು, ಅವರ ನಿಜವಾದ ಶಕ್ತಿಯನ್ನು ಅರಿಯದೆ ಮೂಲೆಗುಂಪು ಮಾಡಲೆತ್ನಿಸಿದ್ದು ದುಬಾರಿಯಾಗಿ ಪರಿಣಮಿಸಿದೆ ಎಂದರೆ ವಿಪರೀತವಾಗದು. ಇದೆಲ್ಲದರ ಫಲವಾಗಿ ಈಗ ಬಿಜೆಪಿಯ ಸ್ಥಿತಿ ‘ಮಾಡಿದ್ದುಣ್ಣೋ ಮಹರಾಯ’ ಎಂಬಂತಾಗಿದೆ. 
→ ಎಂ.ಜಿ.ರಂಗಸ್ವಾಮಿ, ಹಿರಿಯೂರು 

ಜಡತ್ವ ನಿವಾರಣೆಗೆ ಚುನಾವಣೆ ಪರಿಹಾರವಲ್ಲ

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕಗಳ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿ ಎಂದಿದ್ದಾರೆ ವೆಂಕಟೇಶ ಬೈಲೂರು (ವಾ.ವಾ., ಅ. 16). ಅವರು ಎತ್ತಿರುವ ಆಕ್ಷೇಪಗಳಿಗೆ ಅಥವಾ ಕಸಾಪವನ್ನು ಆವರಿಸಿರುವ ಜಡತ್ವಕ್ಕೆ ಚುನಾವಣೆಯು ಪರಿಹಾರ ಅಲ್ಲವೇ ಅಲ್ಲ. ಪರಿಷತ್ತಿನ ಇತಿಹಾಸವನ್ನು ಗಮನಿಸಿದರೆ, ಮೊದಲೆಲ್ಲ ಜಿಲ್ಲಾ ಘಟಕಗಳಿಗೂ ಚುನಾವಣೆ ಇರಲಿಲ್ಲ ಎಂಬುದನ್ನು ನಾವು ಗಮನಿಸಬೇಕು. ಆದರೆ ಆಗಲೂ ಕನ್ನಡದ ಅತ್ಯುತ್ತಮ ಕೆಲಸ ಕಾರ್ಯಗಳಾಗಲಿಲ್ಲವೇ? ಆಗಿವೆ. ಅಂದರೆ ಏನರ್ಥ? ನಂತರ ಜಿಲ್ಲಾ ಘಟಕಗಳಿಗೆ ಚುನಾವಣೆ ಏರ್ಪಟ್ಟಾಗ, ಅಲ್ಲಿ ಪಾಳೆಗಾರಿಕೆ, ಜಾತಿ, ಹಣದಂತಹ ನಕಾರಾತ್ಮಕ ಅಂಶಗಳು ಪರಿಣಾಮ ಬೀರಿರುವುದನ್ನು ಕಾಣುತ್ತೇವೆ. ಈಗಲೂ ಕಸಾಪ ಚುನಾವಣೆಯಲ್ಲಿ ಅದು ಮುಂದುವರಿದೇ ಇದೆಯಲ್ಲವೆ?

ಕಸಾಪ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳಿಗೆ ಅನೇಕ ಕಡೆ ಸ್ವಂತ ಕಟ್ಟಡಗಳಿವೆ. ಅಲ್ಲಿ ಸಾಹಿತ್ಯದ ಕಾರ್ಯಕ್ರಮವಿ ರಲಿ ದೈನಂದಿನ ಸ್ವಚ್ಛತೆಯನ್ನು ಸಹ ಕಾಪಾಡುವವರೇ ಇಲ್ಲದಂತಾಗಿದೆ. ಅನೇಕ ಕಟ್ಟಡಗಳಿಗೆ ಬೀಗ ಹಾಕಲಾಗಿದೆ. ಕಸಾಪ ಇಂದು ಲಕ್ಷಾಂತರ ಸದಸ್ಯರನ್ನು ಹೊಂದಿರುವ ಬೃಹತ್ ಸಂಸ್ಥೆ. ಆದರೆ ಅದು ಸಾಮಾನ್ಯ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ‘ಕನ್ನಡ ನುಡಿ’ ಪತ್ರಿಕೆ ಮತ್ತು ಸಾಹಿತ್ಯ ಸಮ್ಮೇಳನದ ‘ಆಮಂತ್ರಣ ಪತ್ರಿಕೆ’ಗಳನ್ನು ಸಹ ಕಳಿಸುವುದಿಲ್ಲ. ಇದಕ್ಕೆಲ್ಲ ಹಣಕಾಸಿನ ಸಮಸ್ಯೆಯೇನೂ ಇಲ್ಲ. ಹಾಗಾಗಿ, ಚುನಾವಣೆಗಿಂತ ಮಿಗಿಲಾಗಿ, ಕೇಂದ್ರದಿಂದ ಹಿಡಿದು ಜಿಲ್ಲಾ ಮತ್ತು ತಾಲ್ಲೂಕು ಘಟಕಗಳವರೆಗೆ ಕನ್ನಡದ ಕೈಂಕರ್ಯವನ್ನು ಮುನ್ನಡೆಸಬಲ್ಲ ವ್ಯಕ್ತಿಗಳು ಬೇಕೇ ವಿನಾ ಅಧಿಕಾರಶಾಹಿ ಮನೋಭಾವದವರಲ್ಲ.

→ ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಅಚಾತುರ್ಯಕ್ಕೆ ಅಸಹನೆಯೇ ಕಾರಣ

ಮೊಳಕಾಲ್ಮುರು ಪಟ್ಟಣದಲ್ಲಿ, ಟಿ.ವಿ. ರಿಮೋಟ್‍ಗಾಗಿ ಇಬ್ಬರು ಮಕ್ಕಳ ಮಧ್ಯೆ ನಡೆದ ಗಲಾಟೆಯಿಂದ ಸಿಟ್ಟಿಗೆದ್ದ ತಂದೆ ಬೀಸಿ ಎಸೆದ ಕತ್ತರಿಯು ಮಗನನ್ನು ಬಲಿ ಪಡೆದಿರುವ ಅತ್ಯಂತ ನೋವಿನ ಪ್ರಕರಣವೊಂದು ವರದಿಯಾಗಿದೆ (ಪ್ರ.ವಾ., ಅ. 16). ಒಂದು ಕ್ಷಣದ ಕೋಪ ಇಡೀ ಕುಟುಂಬವನ್ನು ಶಾಶ್ವತವಾಗಿ ನೋವಿನ ಪ್ರಪಾತಕ್ಕೆ ನೂಕಿರುವುದನ್ನು ನೋಡಿದರೆ, ತಾಳ್ಮೆಯ ಮಹತ್ವ ಎಂಥದ್ದು ಎಂಬುದು ಅರ್ಥವಾಗುತ್ತದೆ. ಆ ಕುಟುಂಬದ ಯಜಮಾನನ ಅಶಾಂತ ಮನಃಸ್ಥಿತಿಗೆ ಆತನ ಅನಾರೋಗ್ಯ ಮತ್ತು ಕುಟುಂಬದ ಬಡತನವೂ ಕಾರಣವಾಗಿದೆ. ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ಸ್ವಾರ್ಥ, ಅಸಹನೆಯ ವಾತಾವರಣ ತುಂಬಿತುಳುಕುತ್ತಿದೆ. ಬೇರೆಯವರ ಸುಖ ದಲ್ಲಿ ತನ್ನ ಸುಖ ಅಡಗಿದೆ ಎಂಬ ಮನಃಸ್ಥಿತಿಗೆ ತಿಲಾಂಜಲಿ ಕೊಟ್ಟಿರುವುದರ ಫಲವೇ ಇಂಥ ಅಚಾತುರ್ಯಗಳಿಗೆ ಮುಖ್ಯ ಕಾರಣ. ಈ ಬಗೆಯ ಮನಃಸ್ಥಿತಿ ಶಿಕ್ಷಣ ಕ್ರಮದಲ್ಲಾಗಲೀ ಹಿರಿಯರ ನಡವಳಿಕೆಯಿಂದಾಗಲೀ ಮಕ್ಕಳಿಗೆ ದೊರೆಯುತ್ತಿಲ್ಲ ಎಂಬುದನ್ನು ವಿಷಾದದಿಂದ ಹೇಳಬೇಕಿದೆ.

–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT